ಮದ್ದೂರು: ಸದಾ ಶಾಲಾ ಕೊಠಡಿಯಲ್ಲಿ ಪಾಠ ಮಾಡುವ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಓಡಿ, ಹಾಡಿ, ಜಿಗಿದು ಸಂಭ್ರಮಿಸಿದರು…
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಇದೇ ತಿಂಗಳು ಸೆ.5 ರಂದು ನಡೆಯುವ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರತಿನಿತ್ಯದ ಒತ್ತಡವನ್ನು ಬದಿಗಿಟ್ಟು ಕ್ರೀಡೆಯಲ್ಲಿ ಪಾಲ್ಗೊಂಡು ಸಂತೋಷಪಟ್ಟರು.
ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಬಿಇಒ ಸಿ.ಎಚ್.ಕಾಳೀರಯ್ಯ, ಸೆ.5 ರಂದು ಶಿಕ್ಷಕರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ, ತಾಲೂಕಿನಿಂದ ಸುಮಾರು 300 ಕ್ಕೂ ಹೆಚ್ಚು ಶಿಕ್ಷಕ ಹಾಗೂ ಶಿಕ್ಷಕಿಯರು ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ ಎಂದರು.

ಶಿಕ್ಷಕರು ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಉಲ್ಲಾಸ ಮೂಡಿ ಒತ್ತಡ ನಿವಾರಣೆಯಾಗುತ್ತದೆ. ಶಿಕ್ಷಕರು ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಶಿಕ್ಷಕರಾದ ದೇವರಾಜು, ರವೀಶ್, ಯೋಗನಂದ, ಲೋಕೇಶ್, ರಮೇಶ್, ಮಹದೇವು, ಚಂದ್ರಶೇಖರ್, ಬೈರೇಗೌಡ, ಕುಮಾರ್, ಶಿವಣ್ಣ, ಪುಷ್ಪಾ, ಪ್ರಸೀಲಾಜ್ಞಾನಕುಮಾರಿ ಸೇರಿದಂತೆ ಇತರರು ಇದ್ದರು.