ಮೈಸೂರು : ಹೂಟಗಳ್ಳಿ ನಗರಸಭೆಗೆ ಸರ್ಕಾರದ ನೇಮಕಾತಿ ನಿಯಮಗಳನ್ನು ಉಲ್ಲಂಘಿಸಿ ರೌಡಿಶೀಟರ್ ಒಬ್ಬರನ್ನು ಕಾನೂನು ಬಾಹಿರವಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಎಂ.ಸಿ.ಆನಂದ್ ಆರೋಪಿಸಿ ಸರ್ಕಾರದ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಈ ಹಿಂದೆ ಮೈಸೂರು ಜಿಲ್ಲೆ ಹಿನಕಲ್ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಯಾವುದೇ ಪೂರ್ವಾನುಮತಿ ಪಡೆಯದೆ ಅಲ್ಲಿನ ಪಿಡಿಓ ಹೇಮಂತ್ ಕುಮಾರ್ ಎಂಬವರು, ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ ೧೯೯೩ ರ ಪ್ರಕರಣ ೧೧೨ ಮತ್ತು೧೧೩ರ ಗ್ರಾಮ ಪಂಚಾಯಿತಿ ಸಿಬ್ಬಂದಿ ನೇಮಕಾತಿ ನಿಯಮಕ್ಕೆ ವಿರುದ್ಧವಾಗಿ ರಾಜಕೀಯ ಪ್ರಭಾವಕ್ಕೆ ಮಣಿದು ಬಿಲ್ ಕಲೆಕ್ಟರ್ ಆಗಿ ಪ್ರಸನ್ನ, ಗುಮಾಸ್ತರಾಗಿ ಶಿಲ್ಪಾ ಮತ್ತು ಕ್ರಿಮಿನಲ್ ಆರೋಪ ಹೊಂದಿದ್ದು, ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿ ಚಾಲ್ತಿಯಲ್ಲಿರುವ ಅಪರಾಧಿಯನ್ನು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ ೧೯೯೩ ರ ವಿರುದ್ಧವಾಗಿ ಎಂ. ರೋಹಿತ್ ಎಂಬಾತನನ್ನು ಡಿಟಿಪಿ ಅಪರೇಟರ್ ಕಂ ಕ್ಲರ್ಕ ಹುದ್ದೆಗೆ ನಿಯೋಜಿಸಿ ಕೊಂಡಿದ್ದರು.
ಆದರೇ, ಈ ನೇಮಕಾತಿ ಅಕ್ರಮ ಎಂದು ದಿನಾಂಕ:೧೨-೧೨-೨೦೧೬ ರಂದು ಈ ಮೂವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿತ್ತು. ಆದಾಗ್ಯೂಇವರನ್ನು ಸೇವೆಯಲ್ಲಿ ಮುಂದುವರಿಸಿದ ಪರಿಣಾಮ ಇವರುಗಳು ಹೊಸದಾಗಿ ಮೇಲ್ದರ್ಜೆಗೆರಿರುವ ಹೂಟಗಳ್ಳಿ ನಗರಸಭೆಯಲ್ಲಿ ಹಾಲಿ ಕೆಲಸ ನಿರ್ವಹಿಸುತ್ತಿದ್ದಾರೆಂದು ಆನಂದ್ ಆರೋಪಿಸಿದ್ದಾರೆ. ಈ ರೀತಿ ಆಕ್ರಮವಾಗಿ ನಿಯೋಜಿಸಿಕೊಂಡಿರುವ ಸಿಬ್ಬಂದಿಗಳ ವಿರುದ್ಧ ಜಿಲ್ಲಾ ನಗರಾಭಿವೃದ್ಧಿ ಜಿಲ್ಲಾಕೋಶಕ್ಕೆ ದೂರು ನೀಡಿದ ಪರಿಣಾಮ ಇವರನ್ನು ಪೌರಸೇವಾ ವೃಂದಕ್ಕೆ ವಿಲೀನಗೊಳಿಸದೇ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು.
ಕೂಡಲೇ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಮೇಲ್ಕಂಡ ಮೂವರನ್ನು ಪೂರ್ವಾನ್ವಯವಾಗುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಲು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರು ದಿನಾಂಕ: ೧೫/೧೨/೨೦೨೩ ರಂದು ಜಿಪಂ ಸಿಇಒ ಅವರಿಗೆ ಪತ್ರವನ್ನೂ ಸಹ ಬರೆದಿದ್ದರು. ಆದರೆ, ಜಿಪಂ ಸಿಇಒ ಈ ವರೆಗೂ ಮೇಲ್ಕಂಡ ಮೂವರನ್ನು ಸೇವೆಯಿಂದ ಬಿಡುಗಡೆ ಮಾಡಿರುವುದಿಲ್ಲ. ಈ ನೌಕರರಿಗೆ ಸರ್ಕಾರ ಈವರೆಗೆ ಸುಮಾರು ೫೦ ಲಕ್ಷ ರೂ. ವೇತನ ನೀಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗಿರುತ್ತದೆ ಎಂದು ಎಂ.ಸಿ. ಆನಂದ್ ದೂರಿನಲ್ಲಿ ತಿಳಿಸಿದ್ದಾರೆ.
ಮೇಲ್ಕಂಡ ಮೂವರು ಸಿಬ್ಬಂದಿಗಳು ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು ಅನಧಿಕೃತವಾಗಿ ಕೆಲಸ ನಿರ್ವಹಿಸುತ್ತಾ ಹೂಟಗಳ್ಳಿ ನಗರಸಭೆಯಲ್ಲಿ ಮುಂದುವರೆದಿರುವ ಬಗ್ಗೆ ದಾಖಲೆ ಸಮೇತ ದೂರು ನೀಡಿದ್ದರೂ ಇವರ ವಿರುದ್ಧ ಈವರೆಗೂ ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಕೇಳಿದರೆ ವಿಚಾರಣೆ ನಡೆಯುತ್ತಿದೆ ಎನ್ನುತ್ತಾರೆ. ಈ ಅಕ್ರಮ ನೇಮಕಕ್ಕೆ ಜಿಪಂ ಸಿಇಒ ಕೆ.ಎಂ. ಗ್ರಾಯಿತ್ರಿ, ಉಪಕಾರ್ಯದರ್ಶಿ (ಅಭಿವೃದ್ಧಿ) ಕೃಷ್ಣರಾಜ್, ಉಪಕಾರ್ಯದರ್ಶಿ(ಆಡಳಿತ) ಸವಿತಾ, ಹೂಟಗಳ್ಳಿ ನಗರಸಭೆ ಹಿಂದಿನ ಪೌರಾಯುಕ್ತರಾದ ನರಸಿಂಹ ಮೂರ್ತಿ, ಹಾಲಿ ಪೌರಾಯುಕ್ತರಾದ ಎನ್. ಚಂದ್ರಶೇಖರ್, ಪೌರಡಳಿತ ಇಲಾಖೆಯ ಅಧೀಕ್ಷಕರಾದ ಸೈ ಫುದ್ದಿನ್, ಹೂಟಗಳ್ಳಿ ನಗರಸಭೆ ಕಂದಾಯಾಧಿಕಾರಿ ಮಧು ಎಚ್.ಪಿ., ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶುಭ, ಹಿನಕಲ್ ಗ್ರಾಪಂ ಹಿಂದಿನ ಪಿಡಿಒ ಹೇಮಂತ್ ಕುಮಾರ್ ಅವರುಗಳು ಕಾರಣರಾಗಿದ್ದು, ಇವರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂ.ಸಿ.ಆನಂದ್ ಒತ್ತಾಯಿಸಿದ್ದು, ಕಾನೂನು ಬಾಹಿರ ನೇಮಕಾತಿ ಮಾಡಿ ಅವರಿಗೆ ಪಾವತಿಸಿರುವ ಲಕ್ಷಾಂತರ ರೂ ವೇತನವನ್ನು ಈ ಅಧಿಕಾರಿಗಳ ವೇತನದಿಂದ ಕಟಾವು ಮಾಡಿ ಸರ್ಕಾರದ ಬೊಕ್ಕಸಕ್ಕೆ ಜಮೆ ಮಾಡಬೇಕೆಂದು ಅವರು ಕೋರಿದ್ದಾರೆ.