ಕೃಷಿ ಪಂಪ್‌ಸೆಟ್‌ಗೆ ಆಧಾರ್ ಜೋಡಣೆಗೆ ವಿರೋಧ
ಮೈಸೂರು: ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಸಂಖ್ಯೆ ಜೋಡಿಸಬೇಕು ಎಂಬ ನಿಯಮ ವಿರೋಧಿಸಿ ಹಾಗೂ ಅಕ್ರಮ-ಸಕ್ರಮ ಯೋಜನೆ ಮರು ಜಾರಿಗೆ ಆಗ್ರಹಿಸಿ ಸೆ.೪ರಂದು ಸೆಸ್ಕ್ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ತಿಳಿಸಿದರು.
ರೈತರ ಕೃಷಿ ಪಂಪ್‌ಸೆಟ್‌ಗಳ ಆರ್‌ಆರ್ ನಂಬರ್‌ಗೆ ಆಧಾರ್ ನಂಬರ್ ಜೋಡಿಸಬೇಕು ಎಂದು ತಿಳಿಸಲಾಗಿದೆ. ಈ ಮೂಲಕ ವಿದ್ಯುತ್ ಖಾಸಗೀಕರಣಕ್ಕೆ ಸರ್ಕಾರಗಳು ಹುನ್ನಾರ ನಡೆಸಿವೆ. ಇದು ಕೃಷಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು. ಕೃಷಿ ಚಟುವಟಿಕೆಗಳಿಗೆ ಮೂಲವಾದ ವಿದ್ಯುತ್ ಹಾಗೂ ಇದಕ್ಕೆ ಬೇಕಾದ ಪರಿವರ್ತಕ, ವಿದ್ಯುತ್ ಕಂಬ ಹಾಗೂ ತಂತಿಗಳನ್ನು ಇಂಧನ ಇಲಾಖೆಯ ವೆಚ್ಚದಲ್ಲಿ ಮಾಡಲಾಗುತ್ತಿತ್ತು. ಇದಕ್ಕೆ ರೈತರಿಂದ ವಂತಿಕೆಯಾಗಿ ೧೭ಸಾವಿರದಿಂದ ೨೩ಸಾವಿರದವರೆಗೆ ಪಡೆಯಲಾಗುತ್ತಿತ್ತು. ಅದನ್ನು ೨೦೨೩ರ ಅಕ್ಟೋಬರ್‌ನಿಂದ ಕೈಬಿಡಲಾಗಿದೆ. ಇದರಿಂದಾಗಿ, ರೈತರೇ ನೇರವಾಗಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪಡೆದುಕೊಳ್ಳಲು ೩ ಲಕ್ಷದಿಂದ ೪ ಲಕ್ಷ ವೆಚ್ಚ ಮಾಡಬೇಕಾದ ದುಬಾರಿಯಾದ ಪರಿಸ್ಥಿತಿಯನ್ನು ಸರ್ಕಾರ ಸೃಷ್ಟಿಸಿದೆ. ಇದು ತೀವ್ರ ಖಂಡನೀಯ’ ಎಂದರು.
ರೈತರು ಬೆಳೆಯುವ ಕೃಷಿ ಉತ್ಪನ್ನಗಳಿಗೆ ಈವರೆಗೂ ಕಾನೂನು ಬದ್ಧ ಹಾಗೂ ವೈಜ್ಞಾನಿಕ ಬೆಲೆ ದೊರೆಯುವಂತಹ ವಾತಾವರಣವನ್ನು ಸರ್ಕಾರ ಇನ್ನೂ ಸೃಷ್ಟಿಸಿಲ್ಲ. ಹೀಗಿದ್ದರೂ ಹಲವು ರೀತಿಯಲ್ಲಿ ಹೊರೆ ಹೇರುತ್ತಿರುವುದು ಸರಿಯಲ್ಲ ಎಂದು ಹೇಳಿದರು.