Saturday, April 19, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ: ಸೆ.೩ರಂದು ಪಟ್ಟಣದಲ್ಲಿ ಜ್ಯೋತಿ ರಥಯಾತ್ರೆ ಸಂಚಾರ

ಕೆ.ಆರ್.ನಗರ: ಸೆ.೩ರಂದು ಪಟ್ಟಣದಲ್ಲಿ ಜ್ಯೋತಿ ರಥಯಾತ್ರೆ ಸಂಚಾರ

ವರದಿ: ವಿನಯ್ ದೊಡ್ಡಕೊಪ್ಪಲು

ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆ

ಕೆ.ಆರ್.ನಗರ: ಸೆ.೩ರಂದು ಪಟ್ಟಣಕ್ಕೆ ಕರ್ನಾಟಕ ಸಂಭ್ರಮ-೫೦ರ ಅಂಗವಾಗಿ ರಾಜ್ಯಾದ್ಯಂತ ಸಂಚಾರ ಮಾಡುತ್ತಿರುವ ಜ್ಯೋತಿ ರಥಯಾತ್ರೆಯು ಆಗಮಿಸಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಲಿದ್ದು ೪ ರಂದು ಬುಧವಾರ ಇಲ್ಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾಡಲಿದೆ ಎಂದು ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಹೇಳಿದರು.

ರಥಯಾತ್ರೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅದರ ಸ್ವಾಗತ ಮತ್ತು ಬೀಳ್ಕೊಡುಗೆ ನೀಡಲು ಕೈಗೊಳ್ಳಬೇಕಾದ ಕ್ರಮಗಳು ಮತ್ತು ಮಾಡಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ಪಟ್ಟಣದ ಆಡಳಿತ ಸೌಧದ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

೪ ರಂದು ಬೆಳಿಗ್ಗೆ ಪಟ್ಟಣದ ಹೊರ ವಲಯದಲ್ಲಿರುವ ತೋಪಮ್ಮನವರ ದೇವಾಲಯದ ಬಳಿ ಶಾಸಕರಾದ ಡಿ.ರವಿಶಂಕರ್ ಅವರ ನೇತೃತ್ವದಲ್ಲಿ ಕರ್ನಾಟಕ ಸಂಭ್ರಮ-೫೦ರ ಜ್ಯೋತಿ ರಥ ಯಾತ್ರೆಯನ್ನು ಸ್ವಾಗತಿಸಲಿದ್ದು ಈ ಸಂದರ್ಭದಲ್ಲಿ ಪೂರ್ಣಕುಂಭ ಮತ್ತು ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಹಾಜರಿರಲಿವೆ ಎಂದು ತಿಳಿಸಿದರು.

ರಥ ಯಾತ್ರೆಯು ಹಾಸನ-ಮೈಸೂರು ರಸ್ತೆಯಲ್ಲಿ ಸಾಗಿ ಗರುಡಗಂಭ ವೃತ್ತದಲ್ಲಿ ಕಾರ್ಯಕ್ರಮ ಮತ್ತು ಗೌರವ ಸಮರ್ಪಣೆ ನಡೆಯಲಿದ್ದು ಆನಂತರ ಯಾತ್ರೆಯು ವಿವಿ ರಸ್ತೆ, ಸಿ.ಎಂ ರಸ್ತೆ, ಬಜಾರ್‌ರಸ್ತೆ ಮೂಲಕ ತೆರಳಿ ಪುರಸಭೆ ವೃತ್ತದಿಂದ ಹಾಯ್ದು ಹಂಪಾಪುರ, ಅರ್ಜುನಹಳ್ಳಿ, ಕಲ್ಯಾಣಪುರ, ಹೊಸಅಗ್ರಹಾರ ಮಾರ್ಗವಾಗಿ ಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಮ ತಲುಪತ್ತದೆಂದು ಮಾಹಿತಿ ನೀಡಿದರು.

ಸ್ವಾಗತ ಸಂದರ್ಭದಲ್ಲಿ ಕನ್ನಡಪರ ಸಂಘಟನೆಯ ಪ್ರಮುಖರು ಮತ್ತು ಚುನಾಯಿತ ಜನಪ್ರತಿನಿಧಿಗಳು ಹಾಗೂ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕು ಎಂದು ಮನವಿ ಮಾಡಿದ ಅವರು ತಾಲೂಕು ಮಟ್ಟದ ಅಧಿಕಾರಿಗಳು ತನಗೆ ವಹಿಸಿದ ಜವಬ್ದಾರಿಯನ್ನು ಕಡ್ಡಾಯವಾಗಿ ನಿರ್ವಹಣೆ ಮಾಡಬೇಕು ಎಂದು ತಾಕೀತು ಮಾಡಿದರು.

ಕಸಪಾ ತಾಲೂಕು ಅಧ್ಯಕ್ಷ ಡಿಂಡಿಮ ಶಂಕರ್ ಮಾತನಾಡಿ ಕರ್ನಾಟಕ ಸಂಭ್ರಮ-೫೦ರ ಅಂಗವಾಗಿ ಜಿಲ್ಲಾಧ್ಯಾಂತ ಸಂಚಾರ ಮಾಡುತ್ತಿರುವ ಜ್ಯೋತಿ ರಥ ಯಾತ್ರೆಯು ನಮ್ಮ ತಾಲೂಕಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸರ್ವರೂ ಆಗಮಿಸಿ ಗೌರವ ನೀಡಬೇಕು ಎಂದು ಕೋರಿದರು.

ಕಸಾಪ ನಗರಾಧ್ಯಕ್ಷ ಸಿ.ವಿ.ಮೋಹನ್‌ಕುಮಾರ್, ತಾ.ಪಂ. ಇಒ ಕುಲದೀಪ್, ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು, ಸಿಡಿಪಿಒ ಸಿ.ಎಂ.ಅಣ್ಣಯ್ಯ, ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ.ಮಂಜುನಾಥ್, ಸೆಸ್ಕಂ ಎಇಇ ಅರ್ಕೇಶ್‌ಮೂರ್ತಿ, ಶಿರಸ್ತೇದಾರ್ ಅಸ್ಲಂಬಾಷ, ಉಪನೊಂದಣಾಧಿಕಾರಿ ಕಛೇರಿ ಗುಮಾಸ್ತ ರಾಜಕುಮಾರ್‌ಛಾಪಿಯವರ್ ಸೇರಿದಂತೆ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular