ಚಾಮರಾಜನಗರ: ಯುವಜನೋತ್ಸವ-೨೦೨೪ರ ಅಂಗವಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣಾ ಐಇಸಿ ಪ್ರಚಾರಾಂದೋಲನ ಕಾರ್ಯಕ್ರಮದಡಿ ಸಾರ್ವಜನಿಕರು, ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್‌ಐವಿ ಏಡ್ಸ್ ಬಗ್ಗೆ ವ್ಯಾಪಕ ಅರಿವು ಮೂಡಿಸಲು ನಗರದಲ್ಲಿಂದು ಆಯೊಜಿಸಲಾಗಿದ್ದ ಜಿಲ್ಲಾಮಟ್ಟದ ಮ್ಯಾರಥಾನ್ ಓಟ ಸ್ಪರ್ಧೆ ಗಮನ ಸೆಳೆಯಿತು
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಚಾಮರಾಜನಗರ ವಿಶ್ವವಿದ್ಯಾಲಯ, ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ರೋಟರಿ ಸಿಲ್ಕ್ ಸಿಟಿ ಸಂಯುಕ್ತಾಶ್ರಯದಲ್ಲಿ ನಡೆದ ಮ್ಯಾರಥಾನ್ ಓಟ ಸ್ಪರ್ಧೆಗೆ ನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಅವರು ಹಸಿರು ನಿಶಾನೆ ತೋರಿದರು.
ಇದೇ ವೇಳೆ ಮ್ಯಾರಥಾನ್ ಓಟ ಸ್ಪರ್ಧೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಧೀಶರಾದ ಈಶ್ವರ್ ಅವರು ಎಚ್.ಐ.ವಿ ಏಡ್ಸ್ ನಿಯಂತ್ರಣದ ಕುರಿತು ಜನಸಾಮಾನ್ಯರಿಗೆ, ಯುವಕ, ಯುವತಿಯರಿಗೆ, ವಿದ್ಯಾರ್ಥಿಗಳಿಗೆ ಜಾಗೃತಿ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ೧೭ರಿಂದ ೨೫ರ ವಯೋಮಿತಿಯ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಮ್ಯಾರಾಥಾನ್ ಓಟದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲಾಗಿದೆ. ವಿದ್ಯಾರ್ಥಿಗಳು ಏಡ್ಸ್ ನಿಯಂತ್ರಣದ ಬಗ್ಗೆ ಅರಿವು ಹೊಂದಿ ಇತರರನ್ನು ಜಾಗೃತಗೊಳಿಸಬೇಕು ಎಂದರು.
ಏಡ್ಸ್ ಎಂಬುದು ಎಚ್.ಐ.ವಿ ವೈರಸ್‌ನಿಂದ ಹರಡುತ್ತದೆ. ಇದಕ್ಕೆ ವ್ಯಕ್ತಿಯ ಮೋಜಿನ ಜೀವನ ಹಾಗೂ ಆಚಾತುರ್ಯವೇ ನೇರ ಕಾರಣವಾಗಿದೆ. ಅಸುರಕ್ಷತೆಯ ಲೈಂಗಿಕತೆ, ಎಚ್.ಐ.ವಿ ಸೋಂಕು ಇರುವ ವ್ಯಕ್ತಿಯು ರಕ್ತದಾನ ಮಾಡಿದ ಸಂದರ್ಭದಲ್ಲಿ ಹಾಗೂ ಸೋಂಕಿನ ವ್ಯಕ್ತಿಗೆ ಚುಚ್ಚಿದ ಸೂಜಿ, ಸಿರಿಂಜ್‌ಗಳಿಂದ ಏಡ್ಸ್ ಹರಡಲಿದೆ. ಏಡ್ಸ್ನಿಂದ ಕಾಪಾಡಿಕೊಳ್ಳಬೇಕಾದರೆ ವ್ಯಕ್ತಿಯು ಯಾವುದೇ ಕ್ಷಣದಲ್ಲಿಯೂ ಮೈಮರೆಯಬಾರದು ಎಂದು ತಿಳಿಸಿದರು. ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳುವುದು ಪ್ರತಿಯೊಬ್ಬ ಪೋಷಕರ ಕನಸು, ಆಕಾಂಕ್ಷೆಯಾಗಿರುತ್ತದೆ. ಇದನ್ನು ಈಡೇರಿಸುವ ಸಲುವಾಗಿ ವಿದ್ಯಾರ್ಥಿಗಳು ಜಾಗೃತರಾಗಬೇಕು ಎಂದು ನ್ಯಾಯಾಧೀಶರಾದ ಈಶ್ವರ್ ಅವರು ಕಿವಿಮಾತು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಸಿಮ್ಸ್ ಜಿಲ್ಲಾಸ್ಪತ್ರೆಯ ಆರ್.ಎಂ.ಒ ಡಾ. ಮಹೇಶ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ರಾಜೇಶ್, ಜಿಲ್ಲಾ ಕ್ಷಯರೋಗ ನಿರ್ಮೂನಾಧಿಕಾರಿ ಹಾಗೂ ಜಿಲ್ಲಾ ಏಡ್ಸ್ ಪ್ರತಿಬಂಧಕ ಘಟಕದ ನಿಯಂತ್ರಣಾಧಿಕಾರಿ ಡಾ. ಎಂ.ಎಸ್. ರವಿಕುಮಾರ್, ಸಮತಾ ಸೊಸೈಟಿಯ ಅಧ್ಯಕ್ಷರಾದ ದೀಪಾ ಬುದ್ಧೆ, ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ಇತರರು ಈ ಸಂದರ್ಭದಲ್ಲಿ ಇದ್ದರು.
ಜಿಲ್ಲಾಡಳಿತ ಭವನದ ಮುಂಭಾಗದಿಂದ ಆರಂಭವಾದ ಮ್ಯಾರಥಾನ್ ಓಟವು ನಗರದ ಡಿವೈಎಸ್‌ಪಿ ಕಚೇರಿ ಮೂಲಕ ಕರಿನಂಜನಪುರ-ಕೋರ್ಟ್ ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಪಚ್ಚಪ್ಪ ವೃತ್ತ, ಜೋಡಿರಸ್ತೆ ಮೂಲಕ ಸಾಗಿ ಬಳಿಕ ಜಿಲ್ಲಾಡಳಿತ ಭವನದಲ್ಲಿ ಮುಕ್ತಾಯಗೊಂಡಿತು. ವಿವಿಧ ಶಾಲಾ ಕಾಲೇಜುಗಳ ಯುವಕ, ಯುವತಿಯರು ಬಹಳ ಉತ್ಸಾಹ, ಹುಮ್ಮಸ್ಸಿನಿಂದ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ್ದರು.
ಮ್ಯಾರಥಾನ್ ಓಟ ಆರಂಭಕ್ಕೂ ಮೊದಲು ಯಳಂದೂರಿನ ರಂಗದೇಗುಲ ಕಲಾವೇದಿಕೆ ಶಾಂತರಾಜು ಮತ್ತು ತಂಡದವರು ಹೆಚ್‌ಐವಿ ಏಡ್ಸ್ ಕುರಿತ ಜಾಗೃತಿ ಬೀದಿನಾಟಕವನ್ನು ಪ್ರಸ್ತುತಪಡಿಸಿದರು.