ರಾಮನಗರ: ರಾಮನಗರ ಜಿಲ್ಲೆಯಲ್ಲಿ ಒಟ್ಟು 26,276 ಸಂಖ್ಯೆ ಸ್ಯಾನಿಟರಿ ಲ್ಯಟ್ರಿನ್ಸ್ ಗಳಿದ್ದು 220 ಸಂಖ್ಯೆ ಇನ್‌ಸ್ಯಾನಿಟರಿ ಲ್ಯಾಟ್ರಿನ್‌ಗಳಿರುತ್ತವೆ. ಇವುಗಳಲ್ಲಿ ಇನ್‌ಸ್ಯಾನಿಟರಿ ಲ್ಯಾಟ್ರಿನ್ಸ್ ಗಳನ್ನು ಸ್ಯಾನಿಟರಿ ಲ್ಯಾಟ್ರಿನ್ಸ್ ಗಳಾಗಿ ಪರಿವರ್ತಿಸಲು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013ರ ಅನುಷ್ಠಾನ ಸಂಬಂಧ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳು, ಶೌಚಾಲಯ ಹಾಗೂ ಆವರಣವನ್ನು ಸ್ವಚ್ಚವಾಗಿಡಬೇಕು ಎಂದರು. ಪೌರ ಕಾರ್ಮಿಕರನ್ನು ಸ್ವಚ್ಚಗೊಳಿಸುವ ಕಾರ್ಯದ ಜೊತೆಗೆ ಇತರೆ ಇಲಾಖೆಗಳ ಸ್ವಚ್ಚಕಾರ್ಯಗಳಿಗೆ ಬಳಸಿಕೊಳ್ಳುತ್ತಿರುವುದು ತಿಳಿದು ಬಂದಿರುತ್ತದೆ ಇನ್ನು ಮುಂದೆ ಪೌರ ಕಾರ್ಮಿಕರನ್ನು ಬೇರೆ ಇಲಾಖೆಯ ಕಾರ್ಯಗಳಿಗೆ ಬಳಸಿಕೊಳ್ಳಬಾರದು ಎಂದರು.
ಪೌರಕಾರ್ಮಿಕರಿಗೆ ಗುಣಮಟ್ಟದ ಉಪಹಾರ ಹಾಗೂ ಅದರ ಜೊತೆ ಮೊಟ್ಟೆಯನ್ನು ನೀಡಲು ಕ್ರಮವಹಿಸಬೇಕು ಪೌರಕಾರ್ಮಿಕರಿಗೆ ಉಪಹಾರಕ್ಕೆ ಮತ್ತು ವಿಶ್ರಾಂತಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಡಬೇಕು ಎಂದರು.
ಪೌರಕಾರ್ಮಿಕರ ಮಕ್ಕಳಿಗೆ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೆ ನೇರ ಶಾಲಾ ಪ್ರವೇಶಕ್ಕೆ ಅವಕಾಶವಿರುತ್ತದೆ. ಆದುದರಿಂದ ಪೌರಕಾರ್ಮಿಕರ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶಕ್ಕೆ ಅವಕಾಶ ನೀಡಲು ಕ್ರಮವಹಿಸಿ, ನಗರಸಭೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಪೌರಕಾರ್ಮಿಕರ ಮನೆಗಳಿಗೆ ಭೇಟಿ ನೀಡಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಶಾಲೆಗೆ ಸೇರಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಪೌರಕಾರ್ಮಿಕರಿಗೆ, ವಾಹನ ಚಾಲಕರಿಗೆ, ಲೋರ‍್ಸ್, ಸ್ವಚ್ಚಗಾರರಿಗೆ, ಯುಜಿಡಿ ಕಾರ್ಮಿಕರಿಗೆ ಆರೋಗ್ಯ ಪರೀಕ್ಷೆ ಮಾಡಿಸಬೇಕು. ಅಗತ್ಯವಿರುವ ಚುಚ್ಚು ಮದ್ದುಗಳನ್ನು ನೀಡಬೇಕು. ಮಾನಸಿಕ ವೈದ್ಯರುಗಳಿಂದ ತಪಾಸಣೆ ನಡೆಸಿ ಕೌನ್ಸಲಿಂಗ್ ಮಾಡಿಸಿ ಆರೋಗ್ಯ ಸುಧಾರಣೆಗೆ ಸೂಕ್ತ ಚಿಕಿತ್ಸೆ ನೀಡುವಂತೆ ಹಾಗೂ ಜೀವ ವಿಮೆ ಮಾಡಿಸಿ ಅದರ ಅನುಪಾಲನಾ ವರದಿಯನ್ನು ನೀಡುವಂತೆ ತಿಳಿಸಿದರು.
ಹೊರಗುತ್ತಿಗೆ ನೌಕರರಿಗೆ ಭವಿಷ್ಯ ನಿಧಿ(ಪಿ.ಎಫ್) ಹಾಗೂ ಕಾರ್ಮಿಕರ ಆರೋಗ್ಯ ವಿಮೆ(ಇ.ಎಸ್.ಐ) ನೌಕರರ ವೇತನದಿಂದ ಕಟಾಯಿಸಿ ನೌಕರರ ಖಾತೆಗೆ ಜಮೆ ಆಗುತ್ತಿರುವ ಬಗ್ಗೆ ಜಿಲ್ಲೆಯ ಎಲ್ಲಾ ಬಟವಾಡೆ ಅಧಿಕಾರಿಗಳ ಜವಾಬ್ದಾರಿಯಾಗಿದ್ದು ಪ್ರತಿ ಮಾಹೆ ಇದರ ವರದಿಯನ್ನು ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ನೀಡಬೇಕು ಹಾಗೂ ಈ ಕುರಿತು ಯಾವುದೇ ಸಮಸ್ಯೆ ಇದ್ದರೆ ಜಿಲ್ಲಾ ಕಾರ್ಮಿಕ ಅಧಿಕಾರಿಯನ್ನು ಭೇಟಿ ಮಾಡಿ ಪರಿಹರಿಸಿಕೊಳ್ಳುಂತೆ ತಿಳಿಸಿದರು.
ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಅರಣ್ಯ ಇಲಾಖೆ, ಧಾರ್ಮಿಕ ದತ್ತಿ ಇಲಾಖೆ, ಆಸ್ಪತ್ರೆಗಳು, ಮಾರುಕಟ್ಟೆ, ಚಿತ್ರಮಂದಿರ, ಪೊಲೀಸ್ ಠಾಣೆ, ಕಲ್ಯಾಣ ಮಂಟಪ, ರೆಸಾರ್ಟ್ಗಳು ಹಾಗೂ ಇನ್ನಿತರ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ/ಹೊರಸಂಪನ್ಮೂಲ ಕಾರ್ಮಿಕರಿಗೆ ಕನಿಷ್ಟ ವೇತನ, ಗುರುತಿನ ಚೀಟಿ, ಪಿ.ಎಫ್ ಮತ್ತು ಇ.ಎಸ್.ಐ ಕಡಿತವಾಗುತ್ತಿರುವ ಬಗ್ಗೆ ಕಾರ್ಮಿಕ ಅಧಿಕಾರಿಗಳು ಪರಿಶೀಲಿಸಬೇಕು ಎಂದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರುಗಳಿಗೆ/ಸ್ವಚ್ಛತಾ ಸಿಬ್ಬಂದಿಗಳಿಗೆ ಪರಿಕರಗಳಾದ ಹ್ಯಾಂಡ್ ಗ್ಲೌಸ್, ಮಾಸ್ಕ್, ಯುನಿಫಾರಂ, ಚಪ್ಪಲಿಗಳು, ಗಂಬೂಟ್, ಸೈಟರ್, ಕ್ಯಾನ್‌ವಾಸ್ ಶೂ, ರೇಡಿಯಂ ಜಾಕೇಟ್, ಹ್ಯಾಂಡ್ ಸ್ಯಾನಿಟೈಜರ್, ಏಪ್ರಾನ್, ರೈನ್‌ಕೋಟ್, ಫೇಸ್ ಶೀಲ್ಡ್ ಹ್ಯಾಟ್ ಎಲ್ಲಾ ಸುರಕ್ಷತಾ ಪರಿಕರಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯು.ಜಿ.ಡಿ ಕಾರ್ಯವನ್ನು ನಿರ್ವಹಿಸುತ್ತಿರುವ ಕಾರ್ಮಿಕರುಗಳಿಗೆ ಜಟ್ಟಿಂಗ್ ಮತ್ತು ಸಕ್ಕಿಂಗ್ ಯಂತ್ರಗಳನ್ನು ಬಳಸುವ ಬಗ್ಗೆ ಈಗಾಗಲೇ ತರಬೇತಿಗಳನ್ನು ನೀಡಲಾಗಿದೆ. ಇನ್ನು ಹೆಚ್ಚಿನ ತರಬೇತಿಯನ್ನು ನುರಿತ ತರಬೇತುದಾರರಿಂದ ನೀಡುವಂತೆ ತಿಳಿಸಿದರು.
ರೈಲ್ವೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಗುರುತಿನ ಚೀಟಿ, ಕನಿಷ್ಠ ವೇತನ, ಇ.ಎಸ್.ಐ ಮತ್ತು ಪಿ.ಎಫ್, ಆರೋಗ್ಯ ವಿಮೆ ಹಾಗೂ ಸುರಕ್ಷತಾ ಪರಿಕರಗಳನ್ನು ನೀಡುವಂತೆ ಹಾಗೂ ರೈಲ್ವೇ ನಿಲ್ದಾಣಗಳಲ್ಲಿನ ಶೌಚಾಲಯಗಳಿಗೆ ಬೀಗ ಹಾಕಿದ್ದು, ಸಾರ್ವಜನಿಕರಿಗೆ ಉಪಯೋಗಿಸಲು ಕಷ್ಟಕರವಾಗಿದ್ದು, ಶೌಚಾಲಯಗಳು ಇದ್ದರು ಸಹ ರೈಲ್ವೆ ಇಲಾಖೆಯ ಸಿಬ್ಬಂದಿಗಳು ಬೀಗ ಹಾಕಿದ್ದು, ಕೂಡಲೇ ಸಾರ್ವಜನಿಕರ ಹಿತದೃಷ್ಠಿಯಿಂದ ಬೀಗ ತೆಗೆದು ಸಾರ್ವಜನಿಕರಿಗೆ ಉಪಯೋಗಿಸಲು ಅನುಕೂಲ ಮಾಡಿಕೊಡಬೇಕೆಂದು ತಿಳಿಸಲಾಗಿತ್ತು. ಆದರೆ ಈ ಕುರಿತು ಯಾವುದೇ ಮಾಹಿತಿಯನ್ನು ನೀಡದೇ ಸಭೆಗೆ ಗೈರು ಹಾಜರಾಗಿದ್ದರಿಂದ ಹಾಗೂ ಶೌಚಾಲಯಗಳು ಸಾರ್ವಜನಿಕರ ಬಳಕೆಗೆ ಇಲ್ಲದಿರುವುದು ತಿಳಿದು ಬಂದಿರುವುದರಿಂದ ಸಂಬಂಧಪಟ್ಟ ರೈಲ್ವೇ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಅನುಪಾಲನಾ ವರದಿ ನೀಡುವಂತೆ ತಿಳಿಸಿದರು.
ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ಅಶುದ್ಧ ನೀರನ್ನು ಹಾಗೂ ರಕ್ತ ಮಿಶ್ರಿತ ಅಶುದ್ಧ ನೀರು ನೇರವಾಗಿ ಚರಂಡಿಗಳಿಗೆ ಸೇರುತ್ತಿದ್ದು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳು ಉಲ್ಲಂಘನೆಯಾಗುತ್ತಿದ್ದು, ಈ ಸಂಬಂಧ ನಗರಸಭೆ ಆಯುಕ್ತರು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಿ, ವರದಿ ನೀಡುವಂತೆ ತಿಳಿಸಿದರು.
ಮನೆ ರಹಿತ ಪೌರ ಕಾರ್ಮಿಕರುಗಳಿಗೆ/ಸಫಾಯಿ ಕರ್ಮಚಾರಿಗಳ ಕುಟುಂಬದವರಿಗೆ ನಿವೇಶನ ಗುರುತಿಸಿ, ಹಂಚಿಕೆ ಮಾಡುವಂತೆ ತಿಳಿಸಿದರು. ನಗರ ಸ್ಥಳೀಯ ಸಂಸ್ಥೆಗಳ ಪೌರಕಾಮಿಕರು ವಾಸವಿರುವ ಕಾಲೋನಿಗಳಿಗೆ ಅವಶ್ಯಕ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ ಮತ್ತು ಇನ್ನಿತರೇ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ತಿಳಿಸಿದರು.
ರಾಮನಗರ ಟೌನಿನ ವಾರ್ಡ್ ನಂ. 27 ಆದಿಶಕ್ತಿ ಪುರದಲ್ಲಿರುವ ರಾಜ ಕಾಲುವೆಯಿಂದ ದುರ್ವಾಸನೆ ಬರುತ್ತಿದ್ದು, ಕೊಳಚೆ ನೀರನ್ನು ಶುದ್ದೀಕರಿಸಲು ಮೈಕ್ರೋಬಿಯಲ್ ಕಲ್ಚರ್ ದ್ರಾವಣವನ್ನು ರಾಜ ಕಾಲುವೆಗೆ ಹಾಕಿ ಕೊಳಚೆ ನೀರನ್ನು ಶುದ್ಧೀಕರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಮಿಶ್ರಣ ಕಸ ಹಾಕುವವರಿಗೆ ದಂಡ: ರಾಮನಗರ ಜಿಲ್ಲೆಯಲ್ಲಿ ಇನ್ನು ಮುಂದೆ ಹೋಟೆಲ್, ಆಸ್ಪತ್ರೆ, ಬೇಕರಿ, ಅಂಗಡಿಗಳು ಮತ್ತು ನಿವಾಸಿಗಳು ಹಸಿ ಕಸ ಮತ್ತು ಒಣ ಕಸವನ್ನು ಕಡ್ಡಾಯವಾಗಿ ಬೇರ್ಪಡಿಸಿ ನಗರಸಭೆ ವಾಹನಕ್ಕೆ ಹಾಕಬೇಕು. ಇಲ್ಲವಾದಲ್ಲಿ ದಂಡವನ್ನು ವಿಧಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಉಪವಿಭಾಗಾಧಿಕಾರಿ ಮಂಜುನಾಥ್, ಡಿವೈಎಸ್‌ಪಿ ದಿನಕರ್ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಯೋಗೇಶ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರುಗಳಾದ ಶಿವಕುಮಾರ ಸ್ವಾಮಿ, ನಾಗರಾಜು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.