Monday, April 21, 2025
Google search engine

Homeರಾಜ್ಯಸುದ್ದಿಜಾಲಸೆ. 15ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ : 24 ಕಿ.ಮೀ ಮಾನವ ಸರಪಳಿ: ಜಿಲ್ಲಾಧಿಕಾರಿ...

ಸೆ. 15ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ : 24 ಕಿ.ಮೀ ಮಾನವ ಸರಪಳಿ: ಜಿಲ್ಲಾಧಿಕಾರಿ ಶಿಲ್ಪಾ ನಾಗ್

ಚಾಮರಾಜನಗರ: ಪ್ರಜಾಪ್ರಭುತ್ವವನ್ನು ಬಲಪಡಿಸಿ ಇದರ ಮೌಲ್ಯಗಳು ಹಾಗೂ ತತ್ವಗಳನ್ನು ಎತ್ತಿ ಹಿಡಿದು ನಾಗರಿಕರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಸೆಪ್ಟೆಂಬರ್ ೧೫ರಂದು ಚಾಮರಾಜನಗರ ಜಿಲ್ಲೆಯಲ್ಲೂ ವಿಶೇಷವಾಗಿ ಆಚರಿಸಲಾಗುತ್ತಿದ್ದು, ಈ ಸಂಬಂಧ ಕಾರ್ಯಗಳನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ ಸಂಬಂಧ ನಡೆದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ರಾಜ್ಯದಲ್ಲಿ ಸೆಪ್ಟೆಂಬರ್ ೧೫ರಂದು ಅತ್ಯಂತ ವೈಶಿಷ್ಟ ಪೂರ್ಣವಾಗಿ ಆಚರಿಸಲಾಗುತ್ತಿದೆ. ಅಂದು ಬೆಳಿಗ್ಗೆ ೮.೩೦ ರಿಂದ ೯.೩೦ರವರೆಗೆ ಏಕಕಾಲದಲ್ಲಿ ರಾಜ್ಯದ ಉತ್ತರ ತುದಿ ಬೀದರ್‌ನಿಂದ ದಕ್ಷಿಣದ ತುದಿ ಗಡಿಜಿಲ್ಲೆ ಚಾಮರಾಜನಗರದವರೆಗೂ ಬೃಹತ್ ಮಾನವ ಸರಳಿಯನ್ನು ನಿರ್ಮಿಸಲಾಗುತ್ತಿದೆ. ಚಾಮರಾಜನಗರ ಜಿಲ್ಲೆ ಸಂಪರ್ಕಿಸುವ ಮೈಸೂರು ಜಿಲ್ಲೆಯ ಮೂಗೂರು ಕ್ರಾಸ್‌ನಿಂದ ಚಾಮರಾಜನಗರದ ಭುವನೇಶ್ವರಿ ವೃತ್ತ (ಪಚ್ಚಪ್ಪ ವೃತ್ತ) ದವರೆಗೂ ಅಂದಾಜು ೨೪ ಕಿ.ಮೀ ವರೆಗೂ ಮಾನವ ಸರಪಳಿ ರಚಿಸಲಾಗುತ್ತದೆ ಎಂದರು.

ಮೂಗೂರು ಕ್ರಾಸ್‌ನಿಂದ ಆರಂಭಗೊಳ್ಳಲಿರುವ ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ಮಾನವ ಸರಪಳಿಯ ಪ್ರತಿ ೧೦೦ ಮೀಟರ್‌ಗೆ ಸ್ಥಳೀಯ ಅಧಿಕಾರಿ, ಪ್ರತಿ ಅರ್ಧ ಕಿ.ಮೀ ಗೆ ತಾಲೂಕು ಮಟ್ಟದ ಅಧಿಕಾರಿ ಹಾಗೂ ಪ್ರತಿ ೧ ಕಿ.ಮೀ ಗೆ ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ಈ ಕಾರ್ಯಕ್ಕಾಗಿ ನಿಯೋಜನೆಯಾಗಿರುವ ಅಧಿಕಾರಿಗಳು ಆಯಾ ಭಾಗದಲ್ಲಿ ಮಾನವ ಸರಪಳಿ ರಚನೆಯ ಉಸ್ತುವಾರಿ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಒಟ್ಟಾರೆ ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ೨೪ ಕಿ.ಮೀ ನಷ್ಟು ಉದ್ದದ ಮಾನವ ಸರಪಳಿ ನಿರ್ಮಾಣವಾಗಲಿದ್ದು, ಇದರಲ್ಲಿ ೧೯ ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ. ಈ ಮಹತ್ತರ ಬೃಹತ್ ಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಸಂಘಟನೆ, ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ಸಮುದಾಯದ ಮುಖಂಡರು, ಪ್ರತಿನಿಧಿಗಳು, ವಿದ್ಯಾರ್ಥಿಗಳು, ಅಧಿಕಾರಿಗಳು, ನೌಕರರು ಸೇರಿದಂತೆ ಸರ್ವ ವರ್ಗದ ನಾಗರಿಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ. ಅಧಿಕಾರಿಗಳು ಇದಕ್ಕಾಗಿ ಎಲ್ಲ ಸಿದ್ದತೆಗಳನ್ನು ತ್ವರಿತವಾಗಿ ಪರಿಪೂರ್ಣಗೊಳಿಸಬೇಕು ಎಂದರು.

ಅಂದು ನಗರದ ಪಚ್ಚಪ್ಪ ವೃತ್ತದಿಂದ ಬಿ. ರಾಚಯ್ಯ ಜೋಡಿ ರಸ್ತೆಯ ಒಂದು ಕಿ.ಮೀ ಉದ್ದದವರೆಗೆ ಅಂದಾಜು ವರ್ತಕರ ಭವನದವರೆಗೆ ಉದ್ದನೆಯ ರಾಷ್ಟ್ರಧ್ವಜವನ್ನ ಪ್ರದರ್ಶಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಬೇಕಿದೆ. ಮೂಗೂರು ಕ್ರಾಸ್‌ನಿಂದ ಆರಂಭವಾಗಲಿರುವ ಮಾನವ ಸರಪಳಿಯ ಪ್ರತಿ ೧ ಕಿ.ಮೀ ಸ್ಥಳದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಜಿಲ್ಲೆಯ ಜಾನಪದ ಕಲಾತಂಡಗಳು, ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವೇಷ ಭೂಷಣ ಧರಿಸಿದ ಮಕ್ಕಳ ಪ್ರದರ್ಶನ, ಸಂವಿಧಾನ ಪೀಠಿಕೆ ವಾಚನ, ಇನ್ನಿತರ ಹಲವು ಗಮನಾರ್ಹ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಲಾಗುತ್ತಿದ್ದು, ಈ ಎಲ್ಲಾ ಕಾರ್ಯಗಳಿಗೆ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಮಾನವ ಸರಪಳಿ ನಿರ್ಮಾಣವಾಗಲಿರುವ ಮಾರ್ಗ ಉದ್ದಕ್ಕೂ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸ್ವಚ್ಚತಾ ಕೆಲಸವನ್ನು ವಿಶೇಷವಾಗಿ ಹಮ್ಮಿಕೊಳ್ಳಬೇಕು. ಕಾರ್ಯಕ್ರಮದ ನಿರ್ವಹಣೆಗೆ ನಿಯೋಜನೆಯಾಗಿರುವ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಸ್ಥಳಗಳಿಗೆ ಭೇಟಿ ನೀಡಿ ಅಗತ್ಯ ಸಿದ್ದತೆಗಳನ್ನು ಶೀಘ್ರ ಮುಗಿಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು, ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆ, ಗ್ರಾಮೀಣ ಭಾಗದ ಎಲ್ಲಾ ಜನಪ್ರತಿನಿಧಿಗಳು, ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಆಹ್ವಾನಿಸಲಾಗುತ್ತಿದ್ದು, ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ವಿಶೇಷವಾಗಿ ಜಿಲ್ಲೆಯಲ್ಲಿ ಹಬ್ಬದ ಮಾದರಿಯಲ್ಲಿ ಸಂಭ್ರಮ ಸಡಗರದಿಂದ ಆಚರಿಸಬೇಕು. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನೆರವೇರಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷಿ?ಮ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಮುನಿರಾಜು, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್. ಚಿದಂಬರ, ಅಬಕಾರಿ ಉಪ ಆಯುಕ್ತರಾದ ನಾಗಶಯನ, ಆಹಾರ ಇಲಾಖೆ ಉಪನಿರ್ದೇಶಕರಾದ ಯೋಗಾನಂದ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಮಂಜುನಾಥ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular