ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-೨೦೨೪ ಕ್ಕೆ ಭರ್ಜರಿ ಸಿದ್ದತೆ ನಡೆಯುತ್ತಿದೆ, ಅಭಿಮನ್ಯು ನೇತೃತ್ವದ ಗಜಪಡೆ ಕೂಡ ತಾಲೀಮು ನಡೆಸಿದೆ. ಅದರಂತೆ ಇಂದು(ಶನಿವಾರ) ಮೈಸೂರು ಅರಮನೆ ಆವರಣದಲ್ಲಿ ಗಜಪಡೆಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಇಂದು ಶನಿವಾರ ಮಧ್ಯಾಹ್ನ ೧೨ ಗಂಟೆಗೆ ೧೪ ಆನೆಗಳಿಗೆ ಪೂಜೆ ಸಲ್ಲಿಸಿ, ಗಜಪಡೆಗೆ ಕಬ್ಬು, ಬೆಲ್ಲ ತಿನ್ನಿಸಿ ಸಿಬ್ಬಂದಿ ಪೂಜೆ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಸಿಎಫ್ ಮಾಲತಿ ಪ್ರಿಯಾ, ಗಣೇಶ ಹಬ್ಬ ಹಿನ್ನೆಲೆಯಲ್ಲಿ ಗಜಪಡೆಗೆ ಪೂಜೆ ಸಲ್ಲಿಸಲಾಗಿದೆ. ಅರ್ಜುನ ನಿಶಾನೆ ಆನೆಯಾಗಿ ದಸರಾದಲ್ಲಿ ಭಾಗಿಯಾಗ್ತಿತ್ತು. ಈಗ ನಿಶಾನೆ ಆನೆಯನ್ನ ನೇಮಕ ಮಾಡುವ ಅವಶ್ಯಕತೆ ಇದೆ. ಸದ್ಯದಲ್ಲೇ ನಿಶಾನೆ ಆನೆಯ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.