ಬಾಗಲಕೋಟೆ : ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಸಿಎಂ ಆಗಿ ಉಳಿಯುತ್ತಾರೋ ಇಲ್ವೋ ಗೊತ್ತಿಲ್ಲ. ಅಕಸ್ಮಾತ್ ತೀರ್ಪಿನಲ್ಲಿ ಸಿದ್ದರಾಮಯ್ಯನವರದ್ದೇ ತಪ್ಪಿದೆ ಎಂದು ಎಫ್‌ಐಆರ್ ದಾಖಲಾದರೆ ರಾಜೀನಾಮೆ ಕೊಡಬಹುದು, ಕೊಡಬೇಕಾಗಬಹುದು ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿಕೆ ನೀಡಿದರು..
ಬಾಗಲಕೋಟೆಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರದ್ದೇ ತಪ್ಪಿದೆ ಎಂದು ಎಫ್‌ಐಆರ್ ದಾಖಲಾದರೆ ರಾಜೀನಾಮೆ ಕೊಡಬಹುದು, ಕೊಡಬೇಕಾಗಬಹುದು. ಆ ಸಂದರ್ಭದಲ್ಲಿ ಏನಾಗಬಹುದು. ಸಿದ್ದರಾಮಯ್ಯ ಅಪೇಕ್ಷೆ ಪಡುವಂತಹ ವ್ಯಕ್ತಿ ಸಿಎಂ ಆಗ್ತಾರಾ ಸಿದ್ದರಾಮಯ್ಯ ಇಷ್ಟಪಡುವ ವ್ಯಕ್ತಿ ಸಿಎಂ ಆಗಲು ಬಿಡ್ತಾರಾ ಕಾಂಗ್ರೆಸ್‌ನ ಡಿಕೆಶಿ, ಎಂಬಿ ಪಾಟಿಲ್ ಉಳಿದಂತೆ ಎಲ್ಲ ಪ್ರಮುಖರು ಅವರಿಗೆ ಅವಕಾಶ ಕೊಡಲಿಲ್ಲ ಅಂದರೆ ಸರ್ಕಾರ ಎಷ್ಟರಮಟ್ಟಿಗೆ ಇರುತ್ತೆ ಇರೋದಿಲ್ಲ, ಅದು ಜಡ್ಜ್ಮೆಂಟ್ ಮೇಲೆ ತೀರ್ಮಾನ ಆಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಖುರ್ಚಿ ಮೇಲೆ ಬಹಳಷ್ಟು ಜನರ ಕಣ್ಣಿದೆ. ಆದರೆ ಸಿಎಂ ಖುರ್ಚಿ ಮೇಲೆ ಟವೆಲ್ ಹಾಸ್ತಾ ಇದಾರೆ ಎಂಬ ಪದ ನಾನು ಬಳಸುವುದಿಲ್ಲ. ಆದರೆ ಬಹಳ ಜನಕ್ಕೆ (ಸಿಎಂ) ಅದರ ಮೇಲೆ ಕಣ್ಣಿದೆ. ಒಂದು ಕಡೆ ಮುಖ್ಯಮಂತ್ರಿಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸೋದಿಲ್ಲ, ಬೆಂಬಲ ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಖುರ್ಚಿ ಮೇಲೆ ಬೆಂಬಲ ಕೊಡುವವರದ್ದೆ ಹಂಬಲ ಇದೆ. ಹಂಬಲದ ಮುಖಾಂತರ ರಾಜಕಾರಣ ನಡೆಯುತ್ತಿದೆ. ಇದು ಸ್ವಾಭಾವಿಕ. ಈಗ ಏನು ತೀರ್ಪು ಬರುತ್ತದೆ ಎಂದು ಎಲ್ಲರೂ ಕಾಯುತ್ತಿದ್ದಾರೆ ಎಂದರು.
ನಮ್ಮ ದೇಶದ ಇತಿಹಾಸದಲ್ಲಿ ಕರ್ನಾಟಕದ ಈಗಿನ ರಾಜಕಾರಣ ಬಹಳ ಕೀಳುಮಟ್ಟಕ್ಕೆ ಇಳಿದಿದೆ. ಆಡಳಿತ ಪಕ್ಷ ಭ್ರಷ್ಟಾಚಾರ ಮಾಡಿರುವುದಕ್ಕೆ ವಿರೋಧ ಪಕ್ಷ ಆಪಾದನೆ ಮಾಡೋದು ತಪ್ಪಲ್ಲ. ಆದರೆ ವಿರೋಧ ಪಕ್ಷ ಆಪಾದನೆ ಮಾಡಿದ್ದನ್ನು ಆಡಳಿತ ಪಕ್ಷ ತನಿಖೆ ಮಾಡಿಸಿ ಅದರಲ್ಲಿ ತಾವು ತಪ್ಪಿತಸ್ಥರಲ್ಲ ಅಂತ ಹೊರಗೆ ಬರಬೇಕು, ಅದು ಪದ್ಧತಿ. ತಪ್ಪಿತಸ್ಥರಾಗಿದ್ದರೆ ಅವರಿಗೆ ಏನು ಶಿಕ್ಷೆಯಾಗಬೇಕೊ ಅದು ಆಗುತ್ತದೆ ಎಂದು ಹೇಳಿದರು.