Saturday, April 19, 2025
Google search engine

Homeರಾಜ್ಯಸುದ್ದಿಜಾಲಬೋಳಂತೂರು: ಗಣೇಶೋತ್ಸವ ಮೆರವಣಿಗೆಯಲ್ಲಿ ತಿಂಡಿ- ಪಾನೀಯ ನೀಡದಂತೆ ಮಸೀದಿಗೆ ಪತ್ರ ಬರೆದು ಮನವಿ

ಬೋಳಂತೂರು: ಗಣೇಶೋತ್ಸವ ಮೆರವಣಿಗೆಯಲ್ಲಿ ತಿಂಡಿ- ಪಾನೀಯ ನೀಡದಂತೆ ಮಸೀದಿಗೆ ಪತ್ರ ಬರೆದು ಮನವಿ

ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬೋಳಂತೂರು ಗಣೇಶೋತ್ಸವದಲ್ಲಿ ಹಿಂದೂ ಮುಸ್ಲಿಂ -ಸೌಹಾರ್ದತೆಗೆ ಬ್ರೇಕ್ ಬಿದ್ದಿದೆ‌ ಹೌದು. ಕೋಮು ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿರುವ ಜಿಲ್ಲೆಯ ಈ ಭಾಗದಲ್ಲಿ ಕಳೆದ ವರ್ಷ ಗಣೇಶೋತ್ಸವ ಮೆರವಣಿಗೆ ವೇಳೆ ಮುಸ್ಲಿಮರು ಸಿಹಿ ತಿಂಡಿ, ಪಾನೀಯ ಹಂಚಿದ್ದರು. ಆ ಮೂಲಕ ಸೌಹಾರ್ದತೆ ಮೆರೆದಿದ್ದು ಸುದ್ದಿಯಾಗಿತ್ತು. ಆದರೆ, ಈ ಬಾರಿ ಕಳೆದ ವರ್ಷದಂತೆ ಸಿಹಿ ತಿಂಡಿ, ಪಾನೀಯ ಹಂಚಬಾರದು ಎಂದು ಗಣೇಶೋತ್ಸವ ಆಯೋಜಿಸುವ ಸಮಿತಿಯವರೇ ಮುಸ್ಲಿಂ ಸಮುದಾಯದವರಿಗೆ ಪತ್ರ ಬರೆದಿದ್ದಾರೆ.

ಮಸೀದಿಯೊಂದಕ್ಕೆ ಗಣೇಶೋತ್ಸವ ಆಯೋಜಕರು ಬರೆದ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕಳೆದ ವರ್ಷ ಮುಸಲ್ಮಾನ ಸಮಾಜ ಬಾಂಧವರು ಹಂಚಿದ ಸಿಹಿ ತಿಂಡಿ ತಿಂದು ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿದ್ದಾರೆ. ಹೀಗಾಗಿ ಈ ಬಾರಿ ಗಣೇಶೋತ್ಸವ ಮೆರವಣಿಗೆಯಲ್ಲಿ ಸಿಹಿ ತಿಂಡಿ, ತಂಪು ಪಾನೀಯ ಹಂಚಬೇಡಿ ಎಂದು ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿಯಿಂದ ಬೋಳಂತೂರು ಮಸೀದಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.

ಕಳೆದ ವರ್ಷ ಮಾತ್ರವಲ್ಲದೆ, ಕಳೆದ ಕೆಲವು ವರ್ಷಗಳಿಂದ ಗಣೇಶೋತ್ಸವ ಮೆರವಣಿಗೆ ವೇಳೆ ಮುಸ್ಲಿಂ ಸಮಾಜದವರು ಸಿಹಿ ತಿಂಡಿ ಹಂಚುತ್ತಿರುವುದು ನಡೆದುಬಂದಿದೆ. ಆದರೆ, ಈ ಬಾರಿ ತಂಪು ಪಾನೀಯ, ಸಿಹಿ ತಿಂಡಿ ಸೇವಿಸಿದ ಹಿಂದೂ ಮಕ್ಕಳು ಅಸ್ವಸ್ಥರಾದ ಆರೋಪದಲ್ಲಿ ಅದಕ್ಕೆ ಅವಕಾಶ ನಿರಾಕರಿಸಲಾಗಿದೆ. ಇದರಿಂದಾಗಿ ಎರಡು ಸಮುದಾಯಗಳ ನಡುವಣ ಸಾಮರಸ್ಯ ಕೆಡುವ ಆತಂಕವೂ ಎದುರಾಗಿದೆ.

ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿಯು ಮಸೀದಿಗೆ ಬರೆದಿರುವ ಪತ್ರದ ಬಗ್ಗೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಯಾಗುತ್ತಿದೆ.

ವೈರಲ್ ಆದ ಪತ್ರದಲ್ಲೇನಿದೆ?
‘‘ಕಳೆದ ವರ್ಷದ ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಪಾನೀಯ ಮತ್ತು ಸಿಹಿತಿಂಡಿ ವಿತರಣೆಯನ್ನು ತಮ್ಮ ಸಮಾಜ ಬಾಂಧವರು ನೀಡಿರುತ್ತಾರೆ. ಅದನ್ನು ಸ್ವೀಕರಿಸಿದ ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿರುತ್ತಾರೆ. ಇದರಿಂದ ನಮ್ಮ ಸಾಮರಸ್ಯ ಕೆಡುತ್ತದೆ. ಇದರ ಮುಂಜಾಗೃತೆಗಾಗಿ ತಮ್ಮಲ್ಲಿ ಮನವಿ ಮಡುವುದೇನೆಂದರೆ, ಇನ್ನು ಮುಂದಕ್ಕೆ ಶೋಭಾಯಾತ್ರೆಯಲ್ಲಿ ತಮ್ಮ ಸಮಾಜ ಬಾಂಧವರು ಯಾವುದೇ ಪಾನೀಯ ಹಾಗೂ ತಿಂಡಿ ತಿನಸುಗಳನ್ನು ನೀಡಬಾರದಾಗಿ ಈ ಮೂಲಕ ವಿನಂತಿಸುತ್ತೇವೆ. ಆದ್ದರಿಂದ ನಮ್ಮ ಶೋಭಾಯಾತ್ರೆಗೆ ನಿಮ್ಮ ಎಲ್ಲಾ ಸಮಾಜ ಬಾಂಧವರು ಮೇಲಿನ ವಿಷಯಕ್ಕೆ ಸಹಕರಿಸುವಂತೆ ನಿಮ್ಮಲ್ಲಿ ಈ ಮೂಲಕ ಮನವಿ ಮಾಡುತ್ತೇವೆ’’ ಎಂದು ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿ ಬರೆದಿದ್ದು ಎನ್ನಲಾದ ವೈರಲ್ ಆಗಿರುವ ಪತ್ರದಲ್ಲಿ ಉಲ್ಲೇಖವಾಗಿದೆ.

RELATED ARTICLES
- Advertisment -
Google search engine

Most Popular