ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ನೇತ್ರ ಹಾಗೂ ಅಂಗಾಂಗ ದಾನದಿಂದ ಸಾವಿರಾರು ಮಂದಿಯ ಬಾಳು ಬೆಳಕಾಗಲಿದ್ದು, ಪ್ರತಿಯೊಬ್ಬರು ನೇತ್ರ ಹಾಗೂ ಅಂಗಾಂಗ ದಾನಕ್ಕೆ ಮುಂದಾಗಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಡಿ.ನಟರಾಜ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ನೇತ್ರದಾನ ಪಾಕ್ಷಿಕ ಕಾರ್ಯಕ್ರಮದಡಿ ವಿದ್ಯಾರ್ಥಿಗಳಲ್ಲಿ ನೇತ್ರ ಹಾಗೂ ಅಂಗಾಂಗ ದಾನದ ಮಹತ್ವದ ಕುರಿತು ಮಾಹಿತಿ ನೀಡಿ ಮಾತನಾಡಿದರು.

“ಕಣ್ಣು ಜೀವನಪರ್ಯಂತ ಅವಶ್ಯಕ ವಾಗಿ ಬೇಕಾದ ಪ್ರಮುಖ ಅಂಗವಾಗಿದ್ದು, ವ್ಯಕ್ತಿ ಮರಣಹೊಂದಿದ ಮೇಲೆ ಕಣ್ಣನ್ನು ದಾನ ಮಾಡುವುದರಿಂದ, ಕಣ್ಣಿಲ್ಲದೆ ಪರಿತಪಿಸುವ ಹಲವಾರು ಮಂದಿಗೆ ಸಹಕಾರವಾಗುತ್ತದೆ ” ಎಂದರು.
”ಮನುಷ್ಯನ ಮೆದುಳು ನಿಷ್ಕ್ರಿಯ ಗೊಂಡ ಅಂಗಾಂಗಗಳು ಕೆಲಸ ಮಾಡದೇ ಇದ್ದಾಗ ಮತ್ತೊಬ್ಬರಿಗೆ ಅದನ್ನು ದಾನ ಮಾಡ ಬಹುದಾಗಿದ್ದು ಇದರಿಂದ ಹಲವಾರು ಮಂದಿ ಕಳೆದು ಹೋದ ಜೀವನವನ್ನು ಮತ್ತೆ ಪಡೆಯಬಹುದು,” ಎಂದರು.
ಪ್ರಾಂಶುಪಾಲ ಎಚ್.ಕೆ.ಕೃಷ್ಣಯ್ಯ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸಿ. ಎಂ.ರೇಖಾ ಮತ್ತಿತರರು ಕಣ್ಣು ಹಾಗೂ ಅಂಗಾಂಗ ರಕ್ಷಣೆ ಮಾಡಿಕೊಳ್ಳುವ ಮತ್ತು ಅವುಗಳ ದಾನದಿಂದ ಆಗುವ ಅನುಕೂಲತೆಗಳ ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಕ ಕೆ.ವಿ.ರಮೇಶ್, ಮಹೇಶ್, ಆನಂದ್ ಹಾಗೂ ಕಾಲೇಜಿನ ಅಧ್ಯಾಪಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿನಿಯರು ಹಾಜರಿದ್ದರು.