Sunday, April 20, 2025
Google search engine

Homeಸ್ಥಳೀಯಅನುವಾದ ಸಾಹಿತ್ಯದ ಅಪ್ರತಿಮ ಸಾಧಕಿ ವಿಜಯಾ ಶಂಕರ್: ಸಾಹಿತಿ ಬನ್ನೂರು ರಾಜು 

ಅನುವಾದ ಸಾಹಿತ್ಯದ ಅಪ್ರತಿಮ ಸಾಧಕಿ ವಿಜಯಾ ಶಂಕರ್: ಸಾಹಿತಿ ಬನ್ನೂರು ರಾಜು 

  ಮೈಸೂರು: ಹಲವು ದಶಕಗಳಿಂದ ಸಾಹಿತ್ಯಕೃಷಿ ಮಾಡುತ್ತಾ ವಿಶೇಷವಾಗಿ ಅನುವಾದ ಸಾಹಿತ್ಯದಲ್ಲಿ ಬಹಳ ಅಪರೂಪವೆಂಬಂತೆ ಅಪಾರ ಸಾಧನೆ ಮಾಡಿರುವ ವಿಜಯಾ ಶಂಕರ್ ಕಾವ್ಯನಾಮದ ಖ್ಯಾತ ಕಾದಂಬರಿಗಾರ್ತಿ, ಲೇಖಕಿ ಎ.ವಿಜಯಕುಮಾರಿ ಅವರಿಗೆ ಈಗಾಗಲೇ ಸಿಗಬೇಕಾಗಿದ್ದ ಮನ್ನಣೆ, ಗೌರವ, ಪುರಸ್ಕಾರ ಇನ್ನೂ ದೊರೆತಿಲ್ಲವೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.

 ನಗರದ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಹಾಗೂ ಲೇಖಕಿ ವಿಜಯಾ ಶಂಕರ್  ಹಿತೈಷಿಗಳ ಬಳಗ ಒಟ್ಟಾಗಿ ಲೇಖಕಿ ವಿಜಯಾ ಶಂಕರ್ ಅವರ ಬಹು ಮಹತ್ತರ ಕೃತಿ ‘ತಲ್ಲಣಗಳ ನಡುವೆ’ ಅನುವಾದಿತ ಕಾದಂಬರಿಗೆ ರಾಜ್ಯದ ಪ್ರತಿಷ್ಠಿತ ಕರ್ನಾಟಕ ಲೇಖಕಿಯರ ಸಂಘದ ಪ್ರಸ್ತುತ ಸಾಲಿನ ಶ್ರೇಷ್ಠ ಅನುವಾದಿತ ಕಾದಂಬರಿ ಎಂದು ಪ್ರಶಸ್ತಿ ದೊರೆತಿರುವುದರ ಹಿನ್ನೆಲೆಯಲ್ಲಿ ವಿಜಯನಗರ 2ನೇ ಹಂತದಲ್ಲಿರುವ  ಕಾದಂಬರಿಗಾರ್ತಿ ವಿಜಯಾ ಶಂಕರ್  ಅವರ ಸ್ವಗೃಹದಲ್ಲಿ ಬಹಳ ಸರಳವಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅನುವಾದ ಸಾಹಿತ್ಯದಲ್ಲಿ ವಿಜಯಾ ಶಂಕರ್ ಅವರದು ಬಹುದೊಡ್ಡ ಹೆಸರಾಗಿದ್ದು ಇದುವರೆಗೂ ತೆಲಗು ಭಾಷೆಯ ಸುಪ್ರಸಿದ್ಧ ಲೇಖಕ- ಲೇಖಕಿಯರ ಮೂವತ್ತಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಿದ್ದಾರೆಂದರು.

 ನಮ್ಮ ಕನ್ನಡ ಸಾರಸ್ವತ ಲೋಕದಲ್ಲಿ ಬಹಳಷ್ಟು ಮಂದಿ ಲೇಖಕಿಯರಿದ್ದರೂ ಕೂಡ  ಕಾದಂಬರಿಗಾರ್ತಿ  ವಿಜಯಾ ಶಂಕರ್ ಅವರಂತೆ ಒಂದು ಭಾಷಾ ಸಾಹಿತ್ಯವನ್ನು ಮತ್ತೊಂದು ಭಾಷೆಗೆ ಮೂಲ ಕೃತಿಗೆ ಕಿಂಚಿತ್ತೂ ಚ್ಯುತಿ ಬಾರದಂತೆ ಸಮರ್ಥವಾಗಿ ಭಾಷಾಂತರಿಸಬಲ್ಲ ಲೇಖಕಿಯರು ಬಹಳ ಅಪರೂಪ. ಮೂಲತಃ ಬೆಂಗಳೂರು ಜಿಲ್ಲೆಯ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಯವರಾದ ವಿಜಯಾಶಂಕರ ಅವರ ಬದುಕು- ಬರಹ, ಸಾಧನೆ-ಸಿದ್ಧಿಯ ಕರ್ಮಭೂಮಿ ಸಾಂಸ್ಕೃತಿಕ ನಗರಿ ಮೈಸೂರು ನಗರವಾಗಿದ್ದು, ಅವರು ತಮ್ಮ ಕೃತಿಗಳ ಮೂಲಕ ಇಲ್ಲಿನ ಕೀರ್ತಿ ಯನ್ನೂ ಬೆಳಗುತ್ತಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ವಿಶೇಷ ಪಾಂಡಿತ್ಯಗಳಿಸಿರುವ ಇವರು ಕನ್ನಡದಿಂದ ತೆಲುಗಿಗೆ ಹಾಗು ತೆಲುಗಿನಿಂದ  ಕನ್ನಡಕ್ಕೆ ಅನೇಕ ಶ್ರೇಷ್ಠ ಕೃತಿಗಳನ್ನು ಅನುವಾದಿಸಿ ತಮ್ಮ ಪ್ರತಿಭಾ ಸಾಮರ್ಥ್ಯ ಮೆರೆದ್ದಾರೆ. ತನ್ಮೂಲಕ  ಕನ್ನಡದ ಶ್ರೇಷ್ಠ ಲೇಖಕ-ಲೇಖಕಿಯರನ್ನು ತೆಲುಗಿಗೆ ಪರಿಚಯಿಸಿ ಹಾಗೆಯೇ ತೆಲುಗಿನ ಅತ್ಯುತ್ತಮ ಬರಹಗಾರರನ್ನು ಕನ್ನಡಕ್ಕೆ ಪರಿಚಯಿಸಿ ಭಾಷಾಸಾಮರಸ್ಯ ಹೆಚ್ಚಿಸಿದ್ದಾರೆ. ಇಂತಹ ಬಹು ಭಾಷಾ ಪಾಂಡಿತ್ಯವುಳ್ಳ ಹಿರಿಯ ಲೇಖಕಿ ವಿಜಯಾ ಶಂಕರ್  ಅವರನ್ನು ನಮ್ಮ ಸರ್ಕಾರ ಗುರುತಿಸಿ ಗೌರವಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ ಎಂದ ಅವರು, ಉಪನ್ಯಾಸಕರಾಗಿ, ಬೋಧಕರಾಗಿ, ಶಿಕ್ಷಣ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಯಾಗಿಯೂ ಸೇವೆ ಸಲ್ಲಿಸಿರುವ ಇವರ ಅನುಭವ ಬಹುದೊಡ್ಡದಿದ್ದು ಇವರ ಎಲ್ಲಾ ಭಾಷಾಂತರ ಕೃತಿಗಳನ್ನು ನಮ್ಮ ಸರ್ಕಾರದ ಅನುವಾದ ಅಕಾಡೆಮಿಯು ಮರು ಮುದ್ರಣ ಗೊಳಿಸಿ ಕಡಿಮೆ ಬೆಲೆಗೆ ಓದುಗರಿಗೆ ತಲುಪಿಸಬೇಕೆಂದು ಹೇಳಿದರು.

  ಗುರು ಶಿಷ್ಯ ಪರಂಪರೆಯ ಪ್ರೀತಿಯ ದ್ಯೋತಕವಾಗಿ  ಸಮ್ಮಿಲನಗೊಂಡಿದ್ದ ಈ ಹೃದಯಸ್ಪರ್ಶಿ  ಸಮಾರಂಭದಲ್ಲಿ ಶ್ರೇಷ್ಠ ಅನುವಾದಕಿ ಪ್ರಶಸ್ತಿ ಪುರಸ್ಕೃತ ಕಾದಂಬರಿಗಾರ್ತಿ ವಿಜಯಾ ಶಂಕರ್ ಅವರನ್ನು  ಫಲ ತಾಂಬೂಲ, ಶಾಲು, ಮೈಸೂರು ಪೇಟ, ಹಾರ, ತುರಾಯಿ ಸಹಿತ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕಿ ಹಾಗು ಶಿಕ್ಷಣ ತಜ್ಞೆ ಪಿ.ಶಾರದಮ್ಮ ಅಧ್ಯಕ್ಷತೆ ವಹಿಸಿದ್ದರು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಅವರು ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ, ಪ್ರಾಧ್ಯಾಪಕಿ ಪ್ರೊ.ವಿಜಯಾ, ಪ್ರೌಢಶಾಲಾ ಮುಖ್ಯ ಶಿಕ್ಷಕ  ಜೆ.ಮಧು, ಕನ್ನಡ ಭಾಷಾ ಸಂಪನ್ಮೂಲ ವ್ಯಕ್ತಿ ಎಂ .ಎನ್. ಸುರೇಶ್, ಲೇಖಕಿ,ಕಲಾವಿದೆ  ಡಾ.ಜಮುನಾ ರಾಣಿ ಮಿರ್ಲೆ, ನಿವೃತ್ತ ಶಿಕ್ಷಕರಾದ ನಾಗಣ್ಣ, ಶ್ರೀಕಂಠಶೆಟ್ಟಿ , ಶೇಷಾದ್ರಿ, ಹೆಚ್.ವಿ. ಮುರಳೀಧರ್, ಚಿತ್ರಕಲಾ ಶಿಕ್ಷಕ ಮನೋಹರ್ ಹಾಗು.ಸಮಾಜಸೇವಕಿ ಮಾಲಿನಿ ಪಾಲಾಕ್ಷ ಮುಂತಾದವರು ಉಪಸ್ಥಿತರಿದ್ದರು. ಕು.ಅರುಣಾ ಅವರು ಕಾರ್ಯಕ್ರಮವನ್ನು ಅಚ್ಚುಟ್ಟಾಗಿ ನಿರೂಪಣೆ ಮಾಡಿದರು.

RELATED ARTICLES
- Advertisment -
Google search engine

Most Popular