ಮದ್ದೂರು: ಹೊಸ, ಹೊಸ ಅವಿಷ್ಕಾರಗಳು ಹೆಚ್ಚು ನಡೆದಂತೆ ವಿಭಿನ್ನವಾದ ಯಂತ್ರೋಪಕರಣಗಳು ಸಿದ್ದವಾಗಿ ರೈತರಿಗೆ ಹಲವು ರೀತಿಯಲ್ಲಿ ಅನುಕೂಲವಾಗುತ್ತಿರುವುದು ಸಂತೋಷದ ವಿಷಯ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಬೋರಾಪುರ ಗ್ರಾಮದದಲ್ಲಿ ರೈತ ಬಸವರಾಜು ಅವರ ಜಮೀನಿನಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಯಂತ್ರದ ಮೂಲಕ ಭತ್ತದ ನಾಟಿ ಮಾಡುವ ಕಾರ್ಯಕ್ಕೆ ಹಾಗೂ ಬೇಸಾಯ ವಿಷಯ ಕುರಿತು ಕಿಸಾನ್ ಗೋಷ್ಠಿ ಮತ್ತು ಪ್ರಾತ್ಯಾಕ್ಷಿಕೆ ಕುರಿತು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೂಲಿ ಆಳುಗಳ ಸಮಸ್ಯೆಯಿಂದ ರೈತರಿಗೆ ಬೇಸಾಯ ಮಾಡಲು ತುಂಬಾ ಸಮಸ್ಯೆ ಉಂಟಾಗುತ್ತಿದ್ದು. ಈಗ ನಾಟಿ ಮಾಡುವ ಯಂತ್ರ ಬಂದಿರುವುದರಿಂದ ರೈತರಿಗೆ ಒಂದು ರೀತಿಯಲ್ಲಿ ವರದಾದವಾಗಿದೆ ಎಂದರು.
ಭತ್ತದ ನಾಟಿ ಮಾಡುವ ಯಂತ್ರದಿಂದ ಕೂಲಿ ಕಾರ್ಮಿಕರ ಸಮಸ್ಯೆ ದೂರವಾಗುತ್ತದೆ. ಹೆಚ್ಚು ಬಂಡವಾಳದ ಸಮಸ್ಯೆ ಇರುವುದಿಲ್ಲ. ಸರಿಯಾದ ಸಮಯಕ್ಕೆ ನಾಟಿ ಮಾಡಬಹುದು. ಹೆಚ್ಚು ಬಿತ್ತನೆ ಬೀಜ ಬೇಕಾಗುವುದಿಲ್ಲ. ಕೀಟ ಬಾಧೆ ಇರುವುದಿಲ್ಲ ಸೇರಿದಂತೆ ಹಲವು ರೀತಿಯಲ್ಲಿ ರೈತರಿಗೆ ಅನುಕೂಲವಾಗಲಿದೆ ಎಂದರು.
9 ಕಾರ್ಮಿಕರು ಮಾಡ ಬಹುದಾದ ನಾಟಿ ಕೆಲಸವನ್ನು ಒಂದೇ ಯಂತ್ರ ಮಾಡುತ್ತದೆ. ದಿನಕ್ಕೆ 4 ಎಕರೆಯಲ್ಲಿ ನಾಟಿ ಮಾಡುವ ಸಾಮಥ್ರ್ಯ ಇದೆ. 3 ಗಂಟೆ ಅವಧಿಯಲ್ಲಿ ಮೂರು ಲೀಟರ್ ಡೀಸೆಲ್ ಬಳಸಿಕೊಂಡು ಒಂದು ಎಕರೆಯಲ್ಲಿ ನಾಟಿ ಮಾಡಬಹುದು. ಗದ್ದೆಯಲ್ಲಿ ನೀರು ಕಡಿಮೆ ಇದ್ದರೆ ಯಂತ್ರ ಸಲೀಸಾಗಿ ಗದ್ದೆಯಲ್ಲಿ ನಾಟಿ ಮಾಡಬಹುದು ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಸಹಾಯಕ ಕೃಷಿ ನಿರ್ದೇಶಕಿ ಪ್ರತಿಭಾ ಮಾತನಾಡಿ, ಯಂತ್ರದ ಮೂಲಕ ಭತ್ತ ನಾಟಿಯನ್ನು ತಾಲೂಕಿನಲ್ಲಿ ಉತ್ತೇಜನ ನೀಡಲು ಕೃಷಿ ಇಲಾಖೆ ವತಿಯಿಂದ ಸಹಾಯಧನದಲ್ಲಿ ಲಘು ಪೋಷಕಾಂಶ ಮಿತ್ರಣವನ್ನು ಹಾಗೂ ಜಿಂಕ್ ಬನಿಜಾಂಶಗಳನ್ನು ರೈತರಿಗೆ ನೀಡಲಾಗುತ್ತಿದ್ದು ಮೇಲು ಗೊಬ್ಬರ ಶೀಟನಾಶಕಗಳನ್ನು ಸಿಂಪಡಣೆ ಮಾಡಲು ಡ್ರೋನ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ರೈತರು ಕಡಿಮೆ ಶ್ರಮದಿಂದ ಹೆಚ್ಚು ಫಸಲು ಹಾಗೂ ಆದಾಯ ಪಡೆಯಬಹುದಾಗಿದೆ. ರೈತರು ಯಾವುದೇ ಆತಂಕಕ್ಕೆ ಒಳಗಾಗದೆ ಯಂತ್ರದ ಮೂಲಕ ಭತ್ತದ ನಾಟಿ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದರು.
ಯಂತ್ರದ ಮೂಲಕ ಭತ್ತದ ನಾಟಿ ಮಾಡಲು ಶಾಸಕ ಕೆ.ಎಂ.ಉದಯ್ ಅವರು ಬಿಳಿ ಶರ್ಟ್ ಮತ್ತು ಬಿಳಿ ಪಂಚೆ ತೊಟ್ಟು ಆಗಮಿಸಿ ಕೆಸರು ಗದ್ದೆಗೆ ಇಳಿದು ಯಂತ್ರದ ಮೂಲಕ ನಾಟಿ ಮಾಡಿದ್ದು ರೈತರ ಹಾಗೂ ಅಧಿಕಾರಿಗಳ ಗಮನ ಸೆಳೆಯಿತು.
ಕೃಷಿ ಇಲಾಖೆಯ ಉಪ ನಿರ್ದೇಶಕ ಮುನಿಗೌಡ, ಗ್ರಾಪಂ ಅಧ್ಯಕ್ಷೆ ಪದ್ಮ, ಸದ್ಯಸ್ಯರಾದ ಬಿ.ಜೆ.ಪುಟ್ಟಸ್ವಾಮಿ, ಪ್ರಕಾಶ್, ಸಾದೊಳಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶೇಖರ್, ಮುಖಂಡರಾದ ಬಿ.ಜೆ.ಮಹೇಶ್, ಬಸವರಾಜು, ರವಿಕುಮಾರ್, ತಿಮ್ಮೇಗೌಡ, ಅವಿನಾಶ್, ರಾಮಲಿಂಗಯ್ಯ, ಪಿಡಿಓ ಹೇಮಾ, ಕೃಷಿ ಅಧಿಕಾರಿಗಳಾದ ರೂಪ, ಕರ್ಣ, ತಾಂತ್ರಿಕ ವ್ಯವಸ್ಥಾಪಕ ಗಾವಾಸ್ಕರ್, ಆತ್ಮ ಸಿಬ್ಬಂದಿ ಕುಸುಮ ಸೇರಿದಂತೆ ಇತರರು ಇದ್ದರು.