Saturday, April 19, 2025
Google search engine

Homeರಾಜ್ಯಸುದ್ದಿಜಾಲಮಂಗಳೂರು: ಹಳೆ ಮನೆ ಕೆಡಹುವಾಗ ಲಿಂಟಲ್‌ ಕುಸಿದು ಇಬ್ಬರು ಸಾವು

ಮಂಗಳೂರು: ಹಳೆ ಮನೆ ಕೆಡಹುವಾಗ ಲಿಂಟಲ್‌ ಕುಸಿದು ಇಬ್ಬರು ಸಾವು

ಮಂಗಳೂರು: ಇಲ್ಲಿನ ಕರಂಗಲ್ಪಾಡಿಯಲ್ಲಿ ಹೊಸ ಮನೆ ನಿರ್ಮಿಸುವ ಸಲುವಾಗಿ ಹಳೆಯ ಮನೆಯನ್ನು ಕೆಡವುತ್ತಿದ್ದ ವೇಳೆ ಲಿಂಟಲ್‌ ಕುಸಿದ ಪರಿಣಾಮ ಮನೆಯ ಮಾಲೀಕ ಹಾಗೂ ಅವರ ಸೋದರಿಯ ಮಗ ಗುರುವಾರ ಮೃತಪಟ್ಟಿದ್ದಾರೆ.

ಮನೆಯ ಮಾಲೀಕ ಜೇಮ್ಸ್‌ ಜತ್ತನ್ನ (56) ಹಾಗೂ ನೆರೆ ಮನೆಯಲ್ಲೇ ವಾಸವಿದ್ದ ಅವರ ಸೋದರಿಯ ಮಗ ಅಡ್ವಿನ್ ಹೆರಾಲ್ಡ್ ಮಾಬೆನ್‌ (54) ಮೃತರು.

ಬಹರೇನ್‌ನಲ್ಲಿ ಉದ್ಯೋಗದಲ್ಲಿದ್ದ ಜೇಮ್ಸ್‌ ಜತ್ತನ್ನ ಅವರು ಹಳೆ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಿಸುವ ಸಲುವಾಗಿ ಕುಟುಂಬ ಸಮೇತ ಈಚೆಗೆ ಊರಿಗೆ ಮರಳಿದ್ದರು. ಹಳೆ ಮನೆಯನ್ನು ಜೆಸಿಬಿಯಿಂದ ಕೆಡಹುವ ಕೆಲಸ ಎರಡು ದಿನಗಳಿಂದ ನಡೆಯುತ್ತಿತ್ತು. ಕೆಲಸವನ್ನು ನೋಡಲು ಬಂದಿದ್ದ ಜೇಮ್ಸ್‌ ಕಟ್ಟಡ ಕೆಡಹುವ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದರು. ಅದೇ ವೇಳೆ ಅವರ ಸೋದರಿ ಸೆಲೆಸ್ಟಿನ್ ಮಾಬೆನ್‌ ಅವರ ಪುತ್ರ ಅಡ್ವಿನ್ ಹೆರಾಲ್ಡ್‌ ಮಾಬೆನ್ ಅವರೂ ಸ್ಥಳಕ್ಕೆ ಬಂದಿದ್ದರು.

ಜೆಸಿಬಿಯು ಮನೆಯ ಪೂರ್ವ ದಿಕ್ಕಿನ ಕಡೆ ಗೋಡೆಯನ್ನು ಕೆಡಹುವಾಗ ಉಂಟಾದ ಕಂಪನದಿಂದಾಗಿ ಪಶ್ಚಿಮ ದಿಕ್ಕಿನಲ್ಲಿ ಗೋಡೆ ಮೇಲಿದ್ದ ಲಿಂಟಲ್‌ ಏಕಾಏಕಿ ಕುಸಿದು ಬಿದ್ದಿತ್ತು. ಅದರಡಿ ಸಿಲುಕಿ ಜೇಮ್ಸ್‌ ಹಾಗೂ ಅಡ್ವಿನ್‌ ಗಾಯಗೊಂಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ನಡೆಸುತ್ತಿದ್ದಾಗಲೇ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ನೆರೆಮನೆಯವರು ಮಾಹಿತಿ ನೀಡಿದರು.

RELATED ARTICLES
- Advertisment -
Google search engine

Most Popular