*2010-11ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ
ವರದಿ: ಸಿ.ಜಿ ಪುನೀತ್, ಚಪ್ಪರದಹಳ್ಳಿ.
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಹಾರನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 2010-11ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ಸಮರ್ಪಸಿ ವಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ರತ್ನಪುರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸಿ.ಎಚ್ ಚಂದ್ರೇಗೌಡ ಮಾತನಾಡಿ ಇಂದಿನ ಕಾಲಘಟ್ಟದಲ್ಲಿ ಗುರುಗಳನ್ನು ಮಾತನಾಡಿಸಲು ಹಿಂಜರಿಯುವಂತಹ ವಿದ್ಯಾರ್ಥಿಗಳ ಮುಂದೆ ಗುರುವನ್ನು ನೆನಪಿಟ್ಟುಕೊಂಡು ಅವರನ್ನು, ಗೌರವಿಸುವಂತಹ ಕಾರ್ಯ ಶ್ಲಾಘನೀಯ ಎಂದರು.
ಕುಶಾಲನಗರ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯಶಿಕ್ಷಕಿ ಬಿ.ಎನ್ ಪುಷ್ಪ ಮಾತನಾಡಿ ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ. ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನಗಳಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ಶಿಕ್ಷಕರನ್ನು ಮೈಸೂರು ಪೇಟಾ ತೊಡಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಭಾಗವಹಿಸದ ಎಲ್ಲಾ ಶಿಕ್ಷಕರು ಮಕ್ಕಳ ಭವಿಷ್ಯಕ್ಕೆ ಶುಭಕೋರಿದರು. ಇದೆ ವೇಳೆ ಹಿರಿಯ ವಿದ್ಯಾರ್ಥಿಗಳು ಶಿಕ್ಷಕರಿಗೆ ಕ್ರೀಡೆಗಳನ್ನು ಆಡಿಸಿದರು.
ಈ ವೇಳೆ ನಿವೃತ್ತ ಶಿಕ್ಷಕರಾದ ಎ.ಎನ್ ಶಿವಣ್ಣ, ಆರ್.ವೆಂಕಟೇಶ್, ಮತ್ತೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಚ್.ಡಿ ವಾಸು, ಎನ್.ದೇವರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಅಶೋಕ್, ಫಾತಿಕ ಶಾಲೆಯ ಶಿಕ್ಷಕಿ ಉಷಾ, ಬೈಲಕುಪ್ಪೆ ಪ್ರೌಢಶಾಲೆಯ ಶಿಕ್ಷಕಿ ಮೇರಿ, ಚುಂಚನಕಟ್ಟೆ ಪ್ರೌಢಶಾಲೆಯ ಶಿಕ್ಷಕ ಭೈರವನಾಯಕ, ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲ ಕುಮಾರ್, ಯಶವಂತಪುರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಗಂಗಾಧರಯ್ಯ, ಯಳಂದೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ರವಿಕುಮಾರ್, ತಿರುಮಲ್ಲಾಪುರ ಶಾಲೆಯ ಶಿಕ್ಷಕ ಗಿರೀಶ್, ಶಿಕ್ಷಕ ಶ್ರೀಧರ್ ಸೇರಿದಂತೆ ಹಿರಿಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಇದ್ದರು.