ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಜನರು ನನಗೆ ನೀಡಿರುವ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಿರ್ಮಾಣ ಮಾಡುತ್ತಿರುವ ಬಸವೇಶ್ವರ ದೇವಾಲಯದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಈಗಾಗಲೇ ಶಾಸಕರ ನಿಧಿಯಿಂದ ೫ ಲಕ್ಷ ಹಣ ಬಿಡುಗಡೆ ಮಾಡಿದ್ದು ಮತ್ತೆ ೧೦ ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಮುಂದಿನ ನಾಲ್ಕು ತಿಂಗಳೊಳಗೆ ದೇವಾಲಯದ ಕೆಲಸ ಪೂರ್ಣಗೊಳಿಸಿ ಜನವರಿ ತಿಂಗಳಲ್ಲಿ ಲೋಕಾರ್ಪಣೆ ಮಾಡುವುದಾಗಿ ಪ್ರಕಟಿಸಿದ ಅವರು ಗ್ರಾಮಸ್ಥರು ಪರಸ್ಪರ ಸಹಕಾರದಿಂದ ಅಭಿವೃದ್ದಿ ಕೆಲಸ ಮಾಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಿದ್ದಪ್ಪಾಜಿಯವರ ದೇವಾಲಯಕ್ಕೂ ೫ ಲಕ್ಷ ಅನುದಾನ ನೀಡಲಾಗಿದ್ದು ಕಾಮಗಾರಿಗೆ ಚಾಲನೆ ಚಾಲನೆ ನೀಡಲಾಗುತ್ತದೆ ಎಂದ ಅವರು ಜತೆಗೆ ಗ್ರಾಮದ ಕಾಲೋನಿಯಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ೪೦ ಲಕ್ಷ ಹಣ ಮಂಜೂರಾಗಿದ್ದು ಶೀಘ್ರದಲ್ಲಿ ಕೆಲಸ ಆರಂಬಿಸುವುದಾಗಿ ಮಾಹಿತಿ ನೀಡಿದರು.
ಸಿದ್ದಾಪುರ ಗ್ರಾಮದಿಂದ ಹೊಸಕೊಪ್ಪಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಮಾಡಲು ಪಿಎಂಜಿಎಸ್ ವೈ ಯೋಜನೆಯಡಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಆಧ್ಯತೆಯ ಮೇರೆಗೆ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಪರಿಮಿತಿಯ ಗ್ರಾಮಗಳ ಸಂಪರ್ಕ ರಸ್ತೆ ಡಾಂಬರೀಕರಣ ಮಾಡಿಸುವುದಾಗಿ ಪ್ರಕಟಿಸಿದರು.
ಸಿದ್ದಾಪುರ ಗ್ರಾ.ಪಂ.ಅಧ್ಯಕ್ಷ ರಂಗೇಶ್ ಕುಮಾರ್, ಮಾಜಿ ಅಧ್ಯಕ್ಷ ತ್ಯಾಗರಾಜು, ಮಾಜಿ ಉಪಾಧ್ಯಕ್ಷೆ ಸರ್ವಮಂಗಳ, ಸದಸ್ಯರಾದ ಮಾದೇಗೌಡ, ಸುಕನ್ಯಕುಮಾರ್, ಮಹದೇವ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್.ಹರಿಚಿದಂಬರ, ಮುಖಂಡರಾದ ರಮೇಶ್, ರಾಜು, ರಘು, ಎಸ್.ಟಿ.ಮದು, ಲಕ್ಷ್ಮೀನಾರಾಯಣ, ದೊಡ್ಡೇಗೌಡ, ಸತೀಶ್, ದೊರೆ, ಪಿಡಿಒ ಗಿರೀಶ್ ಮತ್ತಿತರರು ಇದ್ದರು.