ರಾಮನಗರ: ಶಿಕ್ಷಣ ಎಂಬುದು ಮಾನವ ಬದುಕಿನ ಪ್ರಾಥಮಿಕ ಅವಶ್ಯಕ ಅಂಶ. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ಎಲ್ಲಾ ಸಂಘ ಸಂಸ್ಥೆಗಳು ಕಾರ್ಯಯೋಜನೆ ರೂಪಿಸಬೇಕು ಎಂದು ಸ್ಪಂದನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮುತ್ತಣ್ಣ ಕರೆ ನೀಡಿದರು.
ತಾಲ್ಲೂಕಿನ ಬಿಡದಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಧಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಶಿಕ್ಷಣದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಅಭಿನಂದಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ನಮ್ಮದೂ ಪಾಲಿದೆ ಎಂಬುದನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಟ್ರಸ್ಟ್ನ ಗೌರವಾಧ್ಯಕ್ಷರಾದ ಡಾ. ಎಂ.ಬೈರೇಗೌಡ ಮಾತನಾಡಿ, ಅಸಾಧ್ಯವಾದುದು ಏನೂ ಇಲ್ಲ. ಸಾಧ್ಯ ಎಂಬ ಶಬ್ದವಿರುವೆಡೆ ಅಸಾಧ್ಯವಿರುತ್ತದೆ. ಅಸಾಧ್ಯವನ್ನು ಸಾಧ್ಯವಾಗಿಸುವುದೇ ಜೀವನದ ಸಾಧನೆ ಎಂಬುದನ್ನು ಮರೆಯಬಾರದು. ಈ ನಿಟ್ಟಿನಲ್ಲಿ ನಾವು ಮಾಡುವ ಕೆಲಸಗಳನ್ನು ನಿಷ್ಠೆಯಿಂದ ಸಮಯಕ್ಕೆ ಸರಿಯಾಗಿ ಮಾಡುವ ಮೂಲಕ ಬದ್ದತೆಯನ್ನು ಅನುಸರಿಸಿದರೆ ಅದೇ ಸಮಾಜಕ್ಕೆ ನಾವು ಕೊಡುವ ಗೌರವ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಅರುಣ್ ಕವಣಾಪುರ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಬಂದ ನಾವು ಯಾರಿಗೂ ಕಡಿಮೆ ಇಲ್ಲ. ಎಲ್ಲಾ ಸಾಧನೆಗಳನ್ನು ಸಾಧಿಸುತ್ತಿರುವುದು ಗ್ರಾಮೀಣ ಪ್ರದೇಶದ ಮಕ್ಕಳೇ ಎಂಬುದು ಸಾರ್ವಕಾಲಿಕ ಸತ್ಯ. ಈ ಹಿನ್ನೆಲೆಯಲ್ಲಿ ಇಂದು ಅಭಿನಂದನೆ ಸ್ವೀಕರಿಸುತ್ತಿರುವ ಸಾಧಕರು ಯುವ ಜನತೆಗೆ ಸ್ಪೂರ್ತಿಯಾಗಲಿ ಎಂದು ಆಶಿಸಿದರು.
ಟ್ರಸ್ಟ್ನ ಖಜಾಂಚಿ ಬಿ.ಟಿ.ದಿನೇಶ್ ಬಿಳಗುಂಬ ಮಾತನಾಡಿ, ಕಡಿಮೆ ಪೆಟ್ಟು ತಿಂದ ಕಲ್ಲು ನಡೆದಾಡುವ ಮೆಟ್ಟಿಲುಗಳಾಗುತ್ತವೆ. ಅದಕ್ಕಿಂತ ಸ್ವಲ್ಪ ಹೆಚ್ಚು ಪೆಟ್ಟು ತಿಂದ ಕಲ್ಲುಗಳು ಅಕ್ಕಪಕ್ಕದ ಗೋಡೆಗಳಾಗುತ್ತವೆ. ಎಲ್ಲಾ ಪೆಟ್ಟುಗಳನ್ನು ಸಹಿಸಿಕೊಂಡ ಕಲ್ಲುಗಳು ಗರ್ಭಗುಡಿಯಲ್ಲಿ ಸ್ಥಾನ ಪಡೆಯುತ್ತವೆ.ಹಾಗೆಯೇ ವಿದ್ಯಾರ್ಥಿ ಜೀವನದಲ್ಲಿ ಬರುವ ಕಷ್ಟಗಳನ್ನು ಸಹಿಸಿಕೊಂಡು ಸಾಧಿಸಿದರೆ ನೀವೂ ಗರ್ಭಗುಡಿಯ ವಿಗ್ರಹಗಳಾಗಬಹುದು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಚನ್ನೇಗೌಡ ಮಾತನಾಡಿ, ಹಿಂದಿನವರ ಸಾಧನೆಗಳನ್ನು ನೋಡಿ ಮುಂದಿನ ಪೀಳಿಗೆ ಕಲಿಯಬೇಕಾದ್ದು ಇದೆ. ನಿಮ್ಮ ಹಿರಿಯರ ಸಾಧನೆ ನಿಮಗೆ ಸ್ಪೂರ್ತಿ ನೀಡಲಿ ಎಂದು ಆಶಿಸಿದರು. ಅಭಿನಂದಿತರು: ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ೭ ಚಿನ್ನದ ಪದಕಗಳನ್ನು ಪಡೆದ ವಿಶಾಲಾಕ್ಷಿ, ೪ ಚಿನ್ನದ ಪದಕಗಳನ್ನು ಪಡೆದ ಹರ್ಷಿತಾ, ಎಂಟೆಕ್‌ನಲ್ಲಿ ೨ ಚಿನ್ನದ ಪದಕ ಪಡೆದ ಬಿ. ಸಾಗರ, ಬಿಎ ಪದವಿಯಲ್ಲಿ ಕನ್ನಡ ವಿಭಾಗದಲ್ಲಿ ೨ ಚಿನ್ನದ ಪದಕಗಳನ್ನು ಪಡೆದ ವಿಜಯಲಕ್ಷಿ?ಮ ಚೌಹಾಣ್ ಅವರನ್ನು ಸ್ಪಂದನಾ ಚಾರಿಟಬಲ್ ಟ್ರಸ್ಟ್ ನ ಪರವಾಗಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಾಧ, ಸಿದ್ದೇಗೌಡ, ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕೃತಿ ಮತ್ತು ತಂಡ ಪ್ರಾರ್ಥನೆ ನಡೆಸಿಕೊಟ್ಟರು. ಕನ್ನಡ ಉಪನ್ಯಾಸಕ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.