ಮೈಸೂರು: ಕಾವ್ಯರ್ಷಿ ಮಹಾಕವಿ ಕುವೆಂಪು ಅವರಿಂದ ಯಂತ್ರರ್ಷಿ ಎಂದು ಕರೆಸಿಕೊಂಡಿದ್ದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ನವರು ಅಕ್ಷರಶಃ ವಿಶ್ವಕಂಡ ಮಹಾ ಮೇಧಾವಿ ಇಂಜಿನಿಯರ್ ಆಗಿದ್ದರೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಬಣ್ಣಿಸಿದರು.
ಮೈಸೂರಿನ ಹೂಟಗಳ್ಳಿಯ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರತಿಷ್ಠಿತ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸೇವಾ ಸಂಸ್ಥೆ ಗಳಾದ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಸಂಯುಕ್ತವಾಗಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಅಪಾರ ಪರಿಶ್ರಮ, ಪ್ರಾಮಾಣಿಕತೆ, ಕ್ರಿಯಾಶೀಲತೆ, ಸಮಯಪ್ರಜ್ಞೆ, ಕಾಯಕ ನಿಷ್ಟೆ, ದೂರದೃಷ್ಟಿ, ಪೂರ್ವಸಿದ್ಧತೆ, ಬದ್ಧತೆ, ಶಿಕ್ಷಣಪರತೆ, ಸರಳತೆ ಮೇಧಾವಿತನ, ಜನಪರ ಕಾಳಜಿ, ದೇಶಾಭಿಮಾನ, ಸ್ವಾಭಿಮಾನ, ನಾಡಾಭಿಮಾನ ಇವುಗಳೆಲ್ಲದರ ಒಟ್ಟು ಮೊತ್ತದಂತಿದ್ದ ವಿಶ್ವೇಶ್ವರಯ್ಯ ನವರು ಬದುಕಿದ್ದಾಗಲೇ ವಿಸ್ಮಯದೋಪಾದಿಯ ದಂತ ಕಥೆಯಾಗಿದ್ದರೆಂದರು.
ಯಂತ್ರರ್ಷಿ ಸರ್ ಎಂ. ವಿಶ್ವೇಶ್ವರಯ್ಯ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹನೀಯರಿಬ್ಬರೂ ಆಧುನಿಕ ಮೈಸೂರು ಸಂಸ್ಥಾನದ ನಿರ್ಮಾತೃಗಳು. ಅದರಲ್ಲೂ ವಿಶೇಷವಾಗಿ ಸರ್ ಎಂ ವಿ ಅವರು ನಮ್ಮ ನಾಡಿನ ನಿರ್ಮಾಣದ ಜೊತೆಗೆ ತಮ್ಮ ತಂತ್ರಜ್ಞತೆಯ ಚಾತುರ್ಯತೆ ಮತ್ತು ಮೇಧಾವಿತನದಿಂದ ದೇಶವನ್ನು ಕಟ್ಟುವ ಕೈಂಕರ್ಯದಲ್ಲೂ ಮುಂಚೂಣಿಯಲ್ಲಿದ್ದವರು. ಭಾರತಾಂಬೆಯ ಸುಪುತ್ರರಾಗಿ ದೇಶದ ಅನೇಕ ನೀರಾವರಿ ಯೋಜನೆಗಳಲ್ಲಿ ಸರ್ ಎಂ ವಿ. ಅವರ ಪಾತ್ರ ಬಹಳಷ್ಟಿದೆ. ಹಾಗಾಗಿ ದೇಶ ಅವರ ಜನ್ಮದಿನವನ್ನು ರಾಷ್ಟ್ರೀಯ ಇಂಜಿನಿಯರ್ಸ್ ಗಳ ದಿನಾಚರಣೆಯಾಗಿ ಆಚರಿಸುತ್ತಿದೆ. ರಾಜರ್ಷಿ ಮತ್ತು ಯಂತ್ರರ್ಷಿಯರಿಬ್ಬರೂ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಜೋಡೆತ್ತುಗಳಾಗಿ ಜೊತೆ ಜೊತೆಯಾಗಿ ದುಡಿದವರು.
ಈ ಮಹಾ ಚೇತನಗಳು ನಮ್ಮ ನಾಡಿನಲ್ಲಿ ಜನಿಸಿದ್ದರಿಂದಾಗಿ ನಾವಿಂದು ಸುಭಿಕ್ಷವಾಗಿದ್ದೇವೆ ಎಂದ ಅವರು, ಶಿಕ್ಷಣವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು, ಎಷ್ಟು ಎತ್ತರಕ್ಕೆ ಬೇಕಾದರೂ ಬೆಳೆಯಬಹುದೆಂಬುದಕ್ಕೆ ಸರ್ ಎಂ. ವಿಶ್ವೇಶ್ವರಯ್ಯನವರು ನಮ್ಮ ಕಣ್ಮುಂದಿನ ನಿದರ್ಶನವಾಗಿದ್ದಾರೆಂದು ಹೇಳಿದರು. ಮುಖ್ಯ ಅತಿಥಿಗಳಾಗಿದ್ದ ಖ್ಯಾತ ಸಂಖ್ಯಾಶಾಸ್ತ್ರಜ್ಞ ಎಸ್.ಜಿ.ಸೀತಾರಾಂ ಅವರು ಮಾತನಾಡಿ , ಪ್ರತಿಯೊಬ್ಬ ವಿದ್ಯಾರ್ಥಿಗಳೂ ವಿಶ್ವೇಶ್ವರಯ್ಯನವರಂತಾಗಲುಪ್ರಯತ್ನಿಸಬೇಕು.ಮನಸ್ಸು ಪಟ್ಟರೆ ಯಾವುದೂ ಅಸಾಧ್ಯವಲ್ಲವೆಂದು ಹೇಳಿ ಸರ್.ಎಂ.ವಿ ಅವರ ಅಭಿವೃದ್ಧಿಯ ಸಾಧನೆಗಳನ್ನು ಸವಿವರವಾಗಿ ತಿಳಿಸಿ ಕಾವ್ಯರ್ಷಿ ರಾಷ್ಟ್ರ ಕವಿ ಕುವೆಂಪು ಅವರು ಸರ್. ಎಂ.ವಿ ಅವರನ್ನು ‘ಯಂತ್ರರ್ಷಿ’ ಎಂದು ಕರೆದು ಬರೆದಿರುವ ಕವಿತೆಯನ್ನು ವಾಚಿಸಿದರು.
ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ವಿಶ್ರಾಂತ ಶಿಕ್ಷಕ ಎ.ಸಂಗಪ್ಪ ಅವರು ಆಶಯ ನುಡಿಗಳನ್ನಾಡಿದರು. ಇದೇ ವೇಳೆ ವಿಶ್ರಾಂತ ಇಂಜಿನಿಯರ್ ಮನುಗನಹಳ್ಳಿ ಎಸ್. ಗೋವಿಂದೇಗೌಡ ಅವರು ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಹಾಗೆಯೇ ಸರ್ ಎಂ. ವಿಶ್ವೇಶ್ವರಯ್ಯ ಅವರ ಗೌರವಾರ್ಥ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಲಾವಿದೆ ಡಾ.ಜಮುನಾರಾಣಿ ಮಿರ್ಲೆ ಅವರು ಬಹುಮಾನ ವಿತರಿಸಿದರು. ಮುಖ್ಯ ಶಿಕ್ಷಕಿ ಪಿ.ವಿ.ಸಂಗೀತಾ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಹಿತವಚನ ಹೇಳಿದರು.ಮುಕ್ತಕ ಕವಿ ಎಂ.ಮುತ್ತುಸ್ವಾಮಿ, ವಿಶ್ರಾಂತ ಶಿಕ್ಷಕ ರಾಜು ಶೆಟ್ಟಿ, ಚಿತ್ರಕಲಾವಿದ ಮನೋಹರ್, ಶಿಕ್ಷಕರಾದ ಡಿ.ಎಂ.ಮಹದೇವು, ಹೆಚ್.ಬಿ.ಅಣ್ಣೇಗೌಡ, ಎಂ.ಅರ್. ರಂಗಸ್ವಾಮಿ, ಎಂ. ಎಸ್.ಶಿವಕುಮಾರ್, ಪಿ.ಪುಷ್ಪ, ಭಾಗ್ಯಲಕ್ಷ್ಮಮ್ಮ,ಕೆ.ಎಸ್.ಈಶ್ವರಿ, ಉಜ್ವಲಾ ಎಸ್.ಸಂಕಣ್ಣವರ್, ಶಿರೀನ್ ಬಾನು, ಹೆಚ್.ಬಿ. ರೂಪಶ್ರೀ ಮುಂತಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ನೇತ್ರಾವತಿ ಮತ್ತು ತಂಡ ಪ್ರಾರ್ಥನೆ ಮಾಡಿ ಕೆ.ಎಸ್.ಈಶ್ವರಿ ಸ್ವಾಗತಿಸಿದರು.