- ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರುಗಳ ಅಧಿಕಾರ ಸ್ವೀಕಾರ ಸಮಾರಂಭ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ನೀಡಿದ್ದ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸಿದ್ದು ಜನಪರ ಆಡಳಿತ ನೀಡುತ್ತಿದೆ ಎಂದು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್
ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ತಾ.ಪಂ. ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆ.ಆರ್.ನಗರ
ಮತ್ತು ಸಾಲಿಗ್ರಾಮ ತಾಲೂಕುಗಳ ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ
ಅಧ್ಯಕ್ಷರುಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು ಈ ಯೋಜನೆಗಳು ಜನರ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಏಳಿಗೆಗೆ ಕಾರಣವಾಗಿವೆ ಎಂದರು.
ಯಾವುದೇ ಶಿಫಾರಸ್ಸು ಇಲ್ಲಿದೆ ಪಂಚ ಗ್ಯಾರಂಟಿ ಯೋಜನೆಯ ಕಾರ್ಯಕ್ರಮಗಳು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪುತ್ತಿದ್ದು ಇದು ಕಾಂಗ್ರೆಸ್ ಸರ್ಕಾರದ ಅಭಿವೃದ್ದಿ ಪರವಾದ ಕಾಳಜಿಗೆ ಉತ್ತಮ ಉದಾಹರಣೆಯಾಗಿದ್ದು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು
ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಅನುಷ್ಠಾನ ಸಮಿತಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರುಗಳು ಸಭೆಗಳಿಗೆ ಸೀಮಿತವಾಗದೆ ಪ್ರತಿ ಮನೆ ಮನೆಗೂ ತೆರಳಿ ಕುಟುಂಬದ ಸದಸ್ಯರ ಜತೆ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಿ ಯೋಜನೆಯ ಅನುಕೂಲ ಸಕಾಲದಲ್ಲಿ ತಲುಪುತ್ತಿರುವುದನ್ನು ಖಚಿತ ಪಡಿಸಿಕೊಳ್ಳಬೇಕು ಎಂದು ನುಡಿದರು.
ರಾಜ್ಯದಲ್ಲಿ ಪಂಚ ಗ್ಯಾರಂಟಿ ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ ವಾರ್ಷಿಕ ೬೯ ಸಾವಿರ ಕೋಟಿ ಹಣ
ಖರ್ಚು ಮಾಡಿ ನಮ್ಮ ಸರ್ಕಾರ ಜನರಿಗೆ ಅನುಕೂಲ ಮಾಡುತ್ತಿದ್ದು ಈ ವಿಚಾರದಲ್ಲಿ ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕೆಲವು ತಿಂಗಳು ನೌಕರರಿಗೆ ವೇತನ ನೀಡುತ್ತಿರಲಿಲ್ಲ ಜತೆಗೆ ಆಗ ಇಂತಹ ಯೋಜನೆ ಜಾರಿಯಲ್ಲಿರಲ್ಲಿಲ್ಲ ಹಾಗಾದರೆ ಹಣ ಎಲ್ಲಿ ಹೋಗುತಿತ್ತು ಎಂದು ಪ್ರಶ್ನಿಸಿದರು.
ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದಲ್ಲಿ ೬೬,೨೯೬ ಮಂದಿ ಫಲಾನುಭವಿಗಳು ಗೃಹ ಲಕ್ಷಿö್ಮ ಯೋಜನೆಯಡಿ, ಗೃಹ ಜ್ಯೋತಿ ಯೋಜನೆಯಲ್ಲಿ ೬೯,೦೦೬, ಅನ್ನಭಾಗ್ಯ ಯೋಜನೆಯಡಿ ೬೯,೨೯೩, ಶಕ್ತಿ ಯೋಜನೆಯಡಿ ವಾರ್ಷಿಕ ೧೫ ಲಕ್ಷಕ್ಕೂ ಅಧಿಕ ಮಹಿಳೆಯರು ಸಾರಿಗೆ ಸಂಚಾರ ಮಾಡುತ್ತಿದ್ದು ಇದರೊಂದಿಗೆ ಈವರೆಗೆ ಇಲ್ಲಿ ೨ ಸಾವಿರಕ್ಕು ಅಧಿಕ ಮಂದಿ ಹೆಸರು ನೊಂದಾವಣೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಒಟ್ಟಾಗಿ ಕ್ಷೇತ್ರದ ವ್ಯಾಪ್ತಿಯ ೨.೬೫ ಲಕ್ಷ ಮಂದಿ ಪಂಚಗ್ಯಾರoಟಿ ಯೋಜನೆಯ ಲಾಭ ಪಡೆಯುತ್ತಿದ್ದು, ರಾಜ್ಯದ ಜನತೆಗೆ ನೆಮ್ಮದಿಯಿಂದ ಬದುಕು ಸಾಧಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಇಂತಹಾ ಉತ್ತಮ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕೆ.ಆರ್.ನಗರ ತಾಲೂಕು ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾಗಿ ಮಾರಗೌಡನಹಳ್ಳಿ ಗ್ರಾಮದ ಎಂ.ಎಸ್.ಮಹದೇವ್, ಸದಸ್ಯರಾಗಿ ಸೈಯದ್‌ಜಾಬೀರ್, ನಂದೀಶ್, ಗಂಗಾಧರ್, ಜಯಮ್ಮ, ಲತಾ, ಮಂಜುನಾಥ್, ಚೇತನ್, ಡಿ.ಎಸ್.ಕುಮಾರ್, ಸೋಮಣ್ಣ, ಯತಿರಾಜ್, ಜಿ.ಎಂ.ಹೇಮoತ್, ಎಂ.ಬಿ.ಧನoಜಯ್, ಮೋಹನ್‌ದೇವರಟ್ಟಿ ಅಧಿಕಾರ ಸ್ವೀಕಾರ ಮಾಡಿದರು.
ಇವರೊಂದಿಗೆ ಸಾಲಿಗ್ರಾಮ ತಾಲೂಕು ಪ್ರಾಧಿಕಾರದ ಅಧ್ಯಕ್ಷರಾಗಿ ದಮ್ಮನಹಳ್ಳಿ ಗ್ರಾಮದ ಉದಯಶಂಕರ್, ಸದಸ್ಯರಾಗಿ ಮಹಾಲಿಂಗು, ಮಹದೇವನಾಯಕ, ಸೈಯದ್‌ಅಹಮದ್, ರಾಣಿ, ಉಷಾ, ಅನಿಲ್, ಸಿ.ಎಸ್.ಮೂರ್ತಿ, ಮೋಹನ್, ಕಾಂತರಾಜು, ರಂಗಸ್ವಾಮಿ, ರವಿ, ಲೋಕೇಶ್, ಮಹದೇವ, ವಾಷಿಮ್‌ಪಾಷ ಪದಗ್ರಹಣ ಮಾಡಿದರು.
ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕು ಅಧ್ಯಕ್ಷರು ಮತ್ತು ಸದಸ್ಯರುಗಳು ಪ್ರತಿ ವಾರಕ್ಕೆ ಒಂದು ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಸಿ ಯೋಜನೆಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ತಾ.ಪಂ. ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರುಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು ಚುನಾವಣಾ ಪೂರ್ವದಲ್ಲಿ ನಮ್ಮ ಪಕ್ಷ ಜನತೆಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಅಧಿಕಾರಕ್ಕೆ ಬಂದ ೬೦ ದಿನಗಳೊಳಗೆ ಈಡೇರಿಸಿದ್ದು ಇದು ಜನರ ಬಗ್ಗೆ ನಮಗಿರುವ ಕಾಳಜಿಯನ್ನು ತೋರಿಸುತ್ತದೆ ಎಂದರು.
ರಾಜ್ಯದ ಜನರು ನೆಮ್ಮದಿಯಿಂದ ಬದುಕು ಸಾಧಿಸಲಿ ಎಂಬ ಸದುದ್ದೇಶದಿಂದ ಇಂತಹ ಅಭೂತ ಪೂರ್ವ ಯೋಜನೆಗಳನ್ನು ಜಾರಿಗೆ ತಂದಿದ್ದು ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಅನುಷ್ಠಾನ ಮಾಡುತ್ತಿರುವುದು ಎಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಪಕ್ಷ ಮತ್ತು ಸರ್ಕಾರ ನಿಮ್ಮನ್ನು ಗುರುತಿಸಿ ಜವಾಬ್ದಾರಿಯುತ ಸ್ಥಾನ ನೀಡಿದ್ದು ಅದನ್ನು ಬದ್ದತೆಯಿಂದ ನಿರ್ವಹಣೆ ಮಾಡಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಸಲಹೆ ನೀಡಿದ ಶಾಸಕರು ಈ ವಿಚಾರದಲ್ಲಿ ಯಾವುದೇ ಸಹಕಾರ ಬೇಕಿದ್ದರೂ ನಾನು ನೀಡಲು ಸಿದ್ದನಿದ್ದು ಪ್ರಾಧಿಕಾರದವರು ಜನರಿಗೆ ಹತ್ತಿರವಾಗಿ ಸರ್ಕಾರದ ಯೋಜನೆಗಳ ಮನವರಿಕೆ ಮಾಡಬೇಕು ಎಂದರು.
ಶಾಸಕನಾಗಿ ಆಯ್ಕೆಯಾದ ೧೬ ತಿಂಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗೆ ೨೫೦ ಕೋಟಿಗೂ ಅಧಿಕ ಹಣವನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದು ಪ್ರಮುಖವಾಗಿ ಕೆಸ್ತೂರು ಏತನೀರಾವರಿ ಯೋಜನೆಗಳಿಗೆ ೬೦ ಕೋಟಿ ಕೆ.ಆರ್.ನಗರದಿಂದ ಮಧುವನಹಳ್ಳಿ ರಸ್ತೆ ಮೂಲಕ ಹೊಸಕೋಟೆ ಸಂಪರ್ಕ ರಸ್ತೆಗೆ ೨೫ ಕೋಟಿ, ತಾಲೂಕಿನ ಕಪ್ಪಡಿ ಗಂಧನಹಳ್ಳಿ ಗ್ರಾಮಗಳನ್ನು ಸಂಪರ್ಕಿಸುವ ಕಾವೇರಿಗೆ ನದಿ ಸೇತುವೆಗೆ ೨೫ ಕೋಟಿ ಮಂಜೂರಾಗಿದ್ದು ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸುವುದಾಗಿ ಪ್ರಕಟಿಸಿದರು.
ಇದರ ಜತೆಗೆ ಮುಖ್ಯಮಂತ್ರಿ ವಿಶೇಷ ಅನುದಾನದಡಿ ೨೫ ಕೋಟಿ, ಪಟ್ಟಣಕ್ಕೆ ಶುದ್ದ ಕುಡಿಯುವ ನೀರು ಸರಬರಾಜು ಮಾಡಲು ಅಮೃತ ಯೋಜನೆಯಡಿನ ೩೦ ಕೋಟಿ, ಒಳಚರಂಡಿ ಕಾಮಗಾರಿಗೆ ೨೦ ಕೋಟಿ ಸೇರಿದಂತೆ ಇತರ ಅಭಿವೃದ್ದಿ ಕಾಮಗಾರಿಗಳಿಗೆ ಅಗತ್ಯ ಅನುದಾನ ಮಂಜೂರು ಮಾಡಿಸಿದ್ದು ಇದರೊಂದಿಗೆ ಅಲ್ಪಸಂಖ್ಯಾತರ ನಿಗಮದ ವತಿಯಿಂದ ೫ ಕೋಟಿ ಹಣ ಬಿಡುಗಡೆ ಮಾಡಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಶಾಸಕ ಡಿ.ರವಿಶಂಕರ್, ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ತಾ.ಪಂ. ಇಒ ವಿ.ಪಿ.ಕುಲದೀಪ್, ಸೆಸ್ಕಾಂ
ಎಇಇ ಅರ್ಕೇಶ್‌ಮೂರ್ತಿ, ಸಾರಿಗೆ ಘಟಕದ ವ್ಯವಸ್ಥಾಪಕ ಮಹೇಶ್, ಸಿಡಿಪಿಒ ಸಿ.ಎಂ.ಅಣ್ಣಯ್ಯ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಕಾರ್ಯದರ್ಶಿ ಶಿವಪ್ರಕಾಶ್, ಸೇವಾ ದಳದ ತಾಲೂಕು ಅಧ್ಯಕ್ಷ ಬಿ.ಹೆಚ್.ಕುಮಾರ್, ತಾ.ಪಂ. ಮಾಜಿ ಅಧ್ಯಕ್ಷ ಎಂ.ಹೆಚ್.ಸ್ವಾಮಿ, ಮಾಜಿ ಸದಸ್ಯ
ಎ.ಟಿ.ಗೋವಿಂದೇಗೌಡ, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್, ಗ್ರಾ.ಪಂ. ಸದಸ್ಯ ಕೆ.ಪಿ.ಜಗದೀಶ್, ಮಾಜಿ ಸದಸ್ಯ ಹೆಬ್ಬಾಳುಮಂಜು ಮತ್ತಿತರರು ಹಾಜರಿದ್ದರು.