ರಾಮನಗರ: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಬೃಹತ್ ಕಂಟೈನರ್ ಲಾರಿ ಎಕ್ಸ್ ಪ್ರೆಸ್ ವೇನ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಿ ಸರ್ವೀಸ್ ರಸ್ತೆಗೆ ನುಗ್ಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗೇಟ್ ಸಮೀಪದ ಬೆಂ-ಮೈ ಹೆದ್ದಾರಿಯಲ್ಲಿ ಬುಧವಾರ ಮಧ್ಯಾಹ್ನದ ಸಮಯದಲ್ಲಿ ಈ ಭೀಕರ ಘಟನೆ ನಡೆದಿದ್ದು, ಈ ಸಮಯದಲ್ಲಿ ಹೆದ್ದಾರಿಯಲ್ಲಿ ಯಾವುದೇ ವಾಹನ ಸಂಚರಿಸದ ಪರಿಣಾಮ ಯಾವುದೇ ಅಪಾಯ ಸಂಭವಿಸಿಲ್ಲ.
ಮೈಸೂರು ಕಡೆಯಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಬೃಹತ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬೆಂಗಳೂರು ಕಡೆಯ ಎಕ್ಸ್ ಪ್ರೆಸ್ ವೇ ದಾಟಿ ಮೈಸೂರು ಕಡೆಗೆ ಹೋಗುವ ರಸ್ತೆಯನ್ನು ಹಾಯ್ದು ಎಕ್ಸ್ ಪ್ರೆಸ್ ವೇನ ತಂತಿ ಬೇಲಿ ಮುರಿದುಕೊಂಡು ಸರ್ವೀಸ್ ರಸ್ತೆಗೆ ನುಗ್ಗಿದೆ. ಲಾರಿ ರಸ್ತೆ ದಾಟಿ ಬರುತ್ತಿರುವ ದೃಶ್ಯ ಸ್ಥಳೀಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.