ಬೆಂಗಳೂರು: ಉತ್ತರ ಭಾರತದಲ್ಲಿ ನಡೆಯುವ ಗಂಗಾ ಆರತಿ ಮಾದರಿಯಲ್ಲಿ ರಾಜ್ಯದಲ್ಲಿ ಕಾವೇರಿ ಆರತಿ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಅಧ್ಯಯನ ನಡೆಸಲು ಕೃಷಿ ಸಚಿವ ಹಾಗೂ ಕಾವೇರಿ ಆರತಿ ಅಧ್ಯಯನ ಸಮಿತಿ ಅಧ್ಯಕ್ಷ ಎನ್. ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಉತ್ತರಾಖಂಡ್ನ ಹರಿದ್ವಾರ ಮತ್ತು ವಾರಾಣಾಸಿಗೆ ತೆರೆಳಿದೆ. ನಿನ್ನೆ ಹರಿದ್ವಾರಕ್ಕೆ ತೆರಳಿರುವ ನಿಯೋಗ ವಿಶೇಷ ಗಂಗಾರತಿಯಲ್ಲಿ ಭಾಗಿಯಾಗಿ ಪೂಜೆ ನಡೆಸಿತು ಮತ್ತು ಆರತಿ ಮೇಲುಸ್ತುವಾರಿ ನೋಡಿಕೊಳ್ಳುವ ಹಿಂದೂ ಸಭಾ ಜೊತೆ ಸಭೆ ನಡೆಸಿದ್ದು, ಹಲವು ಅನುಮಾನಗಳಿಗೆ ಸ್ಪಷ್ಟನೆ ಪಡೆದುಕೊಂಡಿದೆ.
ಗಂಗೆಯಷ್ಟೇ ಪವಿತ್ರ ನದಿ ಕಾವೇರಿ ಎಂಬ ನಿಟ್ಟಿನಲ್ಲಿ ಕಾವೇರಿ ಆರತಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಹಾಗಾಗಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಕಾವೇರಿ ಆರತಿಯ ರೂಪುರೇಷೆ ತಯಾರಿಸಲಿದೆ. ಇದಕ್ಕಾಗಿ ನಿಯೋಗ ಹರಿದ್ವಾರ ಹಾಗೂ ವಾರಣಾಸಿಯಲ್ಲಿ ಅಧ್ಯಯನ ನಡೆಸಿ ವರದಿ ತಯಾರಿಸಲಿದ್ದು, ಇದರ ಭಾಗವಾಗಿ ಮೊದಲು ಹರಿದ್ವಾರಕ್ಕೆ ಭೇಟಿ ನೀಡಿತು.
ಹರ್ ಕೀ ಪೌಡಿ ಘಾಟ್‌ನಲ್ಲಿ ನಡೆಯುವ ಆರತಿ ಕಾರ್ಯಕ್ರಮದಲ್ಲಿ ನಿಯೋಗ ಭಾಗಿಯಾಯಿತು. ಸಚಿವ ಚಲುವರಾಯಸ್ವಾಮಿ ಆದಿಯಾಗಿ ಎಲ್ಲ ಸದಸ್ಯರು ವಿಶೇಷ ಆರತಿ ಮಾಡಿ, ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದರು. ಬಳಿಕ ಆರತಿ ನಡೆಯುವ ರೀತಿ ರಿವಾಜುಗಳನ್ನು ಪರಿಶೀಲಿಸಿದರು.
ಬಳಿಕ ಆರತಿ ಮೇಲುಸ್ತುವಾರಿ ನೋಡಿಕೊಳ್ಳುವ ಹಿಂದೂ ಸಭಾ ಆಡಳಿತ ಸಮಿತಿ ಜೊತೆಗೆ ಮಾತುಕತೆ ನಡೆಸಿದ ನಿಯೋಗ ಕರ್ನಾಟಕ ಸರ್ಕಾರದ ಪ್ರಸ್ತಾವನೆ ಬಗ್ಗೆ ತಿಳಿಸಿದರು. ಇದಕ್ಕೆ ಖುಷಿ ವ್ಯಕ್ತಪಡಿಸಿದ ಆಡಳಿತ ಸಮಿತಿ ಕಾರ್ಯದರ್ಶಿ ತನ್ಮಯ ವಶಿಷ್ಠ, ಗಂಗಾರತಿ ರೀತಿಯಲ್ಲಿ ಕಾವೇರಿ ಆರತಿ ಮಾಡುವುದು ಖುಷಿಯ ಸಂಗತಿ ಎಂದರು.
ಗಂಗಾರತಿ ಬಳಿಕ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಗಂಗಾನದಿಯಂತೆ ಕಾವೇರಿ ನದಿ ಕೂಡಾ ಜೀವ ನದಿಯಾಗಿದೆ. ಅದಕ್ಕಾಗಿ ಇಲ್ಲಿಯೂ ಆರತಿ ಮಾಡಲು ನಿರ್ಧರಿಸಿದ್ದು, ಡಿಸಿಎಂ ಶಿ.ಕೆ ಶಿವಕುಮಾರ್ ನಿರ್ದೇಶನದ ಮೇರೆಗೆ ಈ ಬಗ್ಗೆ ನಮ್ಮ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಅಧ್ಯಯನಕ್ಕೆ ಬಂದಿದ್ದೇವೆ. ಸಾಧ್ಯವಾದಷ್ಟು ಬೇಗ ಆರತಿ ಶುರು ಮಾಡಬೇಕು ಅಂದುಕೊಂಡಿದ್ದು, ದಸರಾದೊಳಗೆ ನಾವು ಶುರು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಒಮ್ಮೆ ಆರತಿಯನ್ನು ಶುರು ಮಾಡಿದರೆ ನಿಲ್ಲಿಸುವ ಮಾತಿಲ್ಲ ಎಂದಿದ್ದಾರೆ.
ಇನ್ನು ಸಮಿತಿಯೂ ಶನಿವಾರ ವಾರಣಾಸಿಗೆ ತೆರಳಲಿದ್ದು, ಅಲ್ಲೂ ಗಂಗಾರತಿಯನ್ನು ನೋಡಿಕೊಂಡು ಬೆಂಗಳೂರಿಗೆ ವಾಪಸ್ ಬರಲಿದ್ದಾರೆ. ಬಳಿಕ ಈ ಬಗ್ಗೆ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ನೀಡಲಿದೆ.