ಮೈಸೂರು: ಜಾತಿ,ಮತ, ಧರ್ಮ,ವರ್ಗಗಳೆಂಬ ಭೇದ ಭಾವವಿರದೆ ಪ್ರತಿಯೊಬ್ಬರಿಗೂ ಸಿಗುವ ವಿದ್ಯೆವೊಂದಿದ್ದರೆ ಯಾರು ಬೇಕಾದರೂ ಎಷ್ಟು ಎತ್ತರಕ್ಕೆ ಬೇಕಾದರೂ ಏರಿ ಏನು ಬೇಕಾದರೂ ಸಾಧಿಸಬಹುದಾಗಿದ್ದು ಪ್ರತಿಯೊಬ್ಬರಲ್ಲೂ ಕಾಯಕ ಮತ್ತು ಶಿಕ್ಷಣ ಪ್ರಜ್ಞೆ ಇರಬೇಕೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯ ಪಟ್ಟರು.
ನಗರದ ಸರಸ್ವತಿಪುರಂನ ರೋಟರಿ ಪಶ್ಚಿಮ ಶಾಲೆಯ ಸಭಾಂಗಣದಲ್ಲಿ ನಡೆದ ರಾಜ್ಯದ ಪ್ರತಿಷ್ಠಿತ ಕಾರ್ಮಿಕ ಸಂಘಟನೆಗಳಲ್ಲೊಂದಾದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ ಮತ್ತು ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಜಯಂತಿ ಹಾಗೂ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಯಂತ್ರರ್ಷಿ ಸರ್ ಎಂ. ವಿಶ್ವೇಶ್ವರಯ್ಯ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಆದರ್ಶವಾಗಿಟ್ಟು ಕೊಂಡು ಪ್ರಾಮಾಣಿಕವಾಗಿ ಕೆಲಸಮಾಡುತ್ತಾ ನಲ್ಲಿ ಮತ್ತು ಒಳಚರಂಡಿಯಲ್ಲಿ ಸ್ವಚ್ಛವಾಗಿ ಸರಾಗವಾಗಿ ನೀರು ಹರಿಯುವ ಸುವ್ಯವಸ್ಥೆಗೆ ತಮ್ಮ ಬೆವರನ್ನೇ ಹರಿಸಿ ದುಡಿಯುತ್ತಿರುವ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ದುಡಿಮೆಯ ಬೆವರಿಗೆ ಬೆಲೆ ಕಟ್ಟಲಾಗದೆಂದರು.
ನಾಲ್ವಡಿ ಮತ್ತು ಸರ್ ಎಂವಿ ಮಹಾತ್ಮರಿಬ್ಬರೂ ಆಧುನಿಕ ಮೈಸೂರಿನ ನಿರ್ಮಾತೃಗಳಾಗಿ ನಾಡನ್ನು ಕಟ್ಟಿದ ರೀತಿ ಅದ್ಭುತವಾದದ್ದು. ಹತ್ತು ಜನ್ಮಕ್ಕಾಗುವಷ್ಟು ಕೆಲಸವನ್ನು ಒಂದೇ ಜನ್ಮದಲ್ಲಿ ಮಾಡಿದವರಿವರು. ನಾಡಿನ ಎರಡು ಕಣ್ಣುಗಳಂತಿದ್ದ ಇವರು ಕತ್ತಲಲ್ಲಿದ್ದವರನ್ನೆಲ್ಲ ನಾಡಿನ ಸರ್ವತೋಮುಖ ಅಭಿವೃದ್ಧಿಯ ಮೂಲಕ ಬೆಳಕಿನತ್ತ ಕರೆತಂದವರು. ಇವತ್ತಿಗೂ ನಾಡಿನಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಹಾಗು ರಾಜರ್ಷಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಬಹುಮಹತ್ತ್ವದ ಸ್ಥಾನವಿದೆ. ಅವರ ಕಾಯಕ ನಿಷ್ಟೆ. ಪ್ರತಿಯೊಬ್ಬರೂ ದುಡಿದು ಬದುಕಬೇಕೆಂದು ಕಾಯಕ ಪ್ರಜ್ಞೆ ಮೂಡಿಸುತ್ತಾ ಜೋಡಿ ದೀಪಗಳಾಗಿ ಲೋಕವನ್ನು ಬೆಳಗಿದ ಮಹಾ ಚೇತನಗಳು ಸರ್ ಎಂ. ವಿಶ್ವೇಶ್ವರಯ್ಯ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರು. ಇವರು ಅಂದಿನ ಕಾಲದಲ್ಲಿಯೇ ಕೆರೆ-ಕಟ್ಟೆ, ಅಣೆಕಟ್ಟೆಗಳು, ಓದು-ಶಿಕ್ಷಣ, ಶೈಕ್ಷಣಿಕ ಸಂಸ್ಥೆಗಳು, ಅರಮನೆ- ಗುರುಮನೆಗಳು, ಕೃಷಿ-ಪಶು ಸಂಗೋಪನೆ, ಮಹಿಳಾಭಿವೃದ್ಧಿ, ಕೈಗಾರಿಕೆಗಳು, ಆಸ್ಪತ್ರೆಗಳು ಸೇರಿದಂತೆ ಪ್ರತಿಯೊಂದನ್ನು ತಮ್ಮ ಕಾಯಕ ಪ್ರಜ್ಞೆಯಿಂದ ಪ್ರಾಮಾಣಿಕವಾಗಿ ಮಾಡಿ ಸಾಮಾನ್ಯ ಜನರಿಗೆ ಅಸಾಮಾನ್ಯ ಎಂಬಂತೆ ಎಲ್ಲವನ್ನೂ ಒದಗಿಸಿಕೊಟ್ಟಿದ್ದ ಇವರುಗಳು ಪ್ರತಿಯೊಬ್ಬರಿಗೂ ಆದರಲ್ಲೂ ವಿಶೇಷವಾಗಿ ಕಾರ್ಮಿಕರಿಗೆ ಇವತ್ತಿಗೂ ಮಾದರಿಯಾಗಿದ್ದಾರೆಂದು ಹೇಳಿದರು.
ಇದಕ್ಕೂ ಮುನ್ನ ತಾಯಿ ಶ್ರೀಭುವನೇಶ್ವರಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಶಾಸಕ ಶ್ರೀವತ್ಸ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ವಿಶ್ವೇಶ್ವರಯ್ಯನವರು ಜೀವನದಲ್ಲಿ ಬಹಳ ಕಷ್ಟಪಟ್ಟು ಅಷ್ಟೇ ಇಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಸಾಧನೆಯ ಶಿಖರವೇರಿ ಭಾರತರತ್ನವಾಗಿ ನಾಡನ್ನು ಬೆಳಗಿದವರು. ಅವರ ಬದುಕು ಎಲ್ಲರಿಗೂ ಮಾದರಿ ಆಗುವಂತಾದ್ದು ಎಂದು ಹೇಳಿ ಶುಭ ಹಾರೈಸಿದರು. ಹಿಮಾಲಯ ಪರ್ವತ ಏರಿದ ಕರ್ನಾಟಕದ ಮೊದಲ ಮಹಿಳೆ ಎಂಬ ಖ್ಯಾತಿಯ ಡಾ. ಉಷಾ ಹೆಗ್ಗಡೆ ಅವರು ಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ತಮ್ಮ ಸಾಧನೆಯ ಬದುಕಿನ ಹಿನ್ನೆಲೆಯಲ್ಲಿ ಮಕ್ಕಳಿಗೆ ಸ್ಪೂರ್ತಿದಾಯಕ ಮಾತುಗಳನ್ನು ಹೇಳಿದರು. ಕನ್ನಡ ಪರ ಹೋರಾಟಗಾರ ಸೈಯದ್ ಇಸಾಕ್ ಮತ್ತು ಕಾರ್ಮಿಕ ಇಲಾಖೆಯ ನಿರೀಕ್ಷರಾದ ಮಂಗಳ ಗೌರಿ, ಜಿ.ಬಿ. ವೀಣಾ , ಉದ್ಯಮಿ ಮಹಾಂತೇಶ್ ಮುಂತಾದವರು ಮಾತನಾಡಿದರು.
ಪ್ರಾರಂಭದಲ್ಲಿ ಸಂಘದ ನಿರ್ದೇಶಕ ಚಂದ್ರೇಗೌಡರು ಪ್ರಾಸ್ತಾವಿಕಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಅಧ್ಯಕ್ಷರಾದ ಮಹೇಶ್ ಎಸ್. ಜಯನಗರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾನೂನು ಸಲಹೆಗಾರ ಎನ್.ಸುಂದರ್ ರಾಜ್, ಲೆಕ್ಕ ಪರಶೋಧಕ ಡಿ.ಜಲೇಂದ್ರ, ಉಪಾಧ್ಯಕ್ಷ ಎಂ.ಎಸ್.ಸುರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ರವಿ ಕುಮಾರ್, ಜಂಟಿ ಕಾರ್ಯದರ್ಶಿ ಪಳನಿಸ್ವಾಮಿ, ಖಜಾಂಚಿ ಎಂ.ಪ್ರಕಾಶ್, ನಿರ್ದೇಶಕರಾದ ಚಂದ್ರೇಗೌಡ, ಕುಮಾರ್, ಯೋಗೇಶ್ ಹೆಬ್ಬಾಳ್, ಸುರೇಶ್, ಅನಿಲ್ ಕುಮಾರ್, ಮೊಹಮದ್ ಜಾಕಿರ್ ಹುಸೇನ್, ಸಂತೋಷ್ ಕುಮಾರ್ ಬೇಹರ,ಯೋಗೇಶ್, ರುದ್ರಸ್ವಾಮಿ, ಶಿವರಾಜು ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಿಮಾಲಯ ಪರ್ವತ ಏರಿದ ಕರ್ನಾಟಕದ ಪ್ರಥಮ ಸಾಹಸಿ ಮಹಿಳೆ ಡಾ.ಉಷಾ ಹೆಗ್ಗಡೆ ಮತ್ತು ೩೫ ಸಾವಿರಕ್ಕೂ ಹೆಚ್ಚು ಪುಸ್ತಕಗಳುಳ್ಳ ಕನ್ನಡ ಗ್ರಂಥಾಲಯವನ್ನು ಸ್ಥಾಪಿಸಿರುವ ಕನ್ನಡ ಪರಿಚಾರಕ ಸೈಯದ್ ಇಸಾಕ್ ಹಾಗು ಖ್ಯಾತ ಸಾಹಿತಿ ಬನ್ನೂರು ಕೆ.ರಾಜು ಅವರುಗಳನ್ನು ವಿಶೇಷವಾಗಿ ಅಭಿನಂದಿಸಿ ಗೌರವಿಸಲಾಯಿತು. ಕೊನೆಯಲ್ಲಿ ಕಾರ್ಮಿಕರ ಪ್ರತಿಭಾವಂತ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.