ವರದಿ: ಸಿ.ಜಿ ಪುನೀತ್, ಚಪ್ಪರದಹಳ್ಳಿ
ಮಡಿಕೇರಿ: ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಡಿಕೇರಿ ಪ್ರಾದೇಶಿಕ ಕಚೇರಿ ವತಿಯಿಂದ ನಗರದಲ್ಲಿ ಬುಧವಾರ ಸ್ವಚ್ಛತೆಯೇ ಸೇವೆ ಅಭಿಯಾನ 2024 ಹಿನ್ನಲೆ ವಿವಿಧಡೆ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಯಿತು.
ಪ್ರಾದೇಶಿಕ ವ್ಯವಸ್ಥಾಪಕರಾದ ಉದಯ್ ಕುಮಾರ್ ಮಾತನಾಡಿ ನಮ್ಮ ಮನೆಯ ಸುತ್ತಮುತ್ತಲ ಪ್ರದೇಶ ಹಾಗೂ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೇವಲ ಒಬ್ಬಿಬ್ಬರಿಂದ ಇಂತಹ ಕಾರ್ಯ ಸಾಧ್ಯವಿಲ್ಲ. ಪ್ರತಿಯೊಬ್ಬರು ಕೈಜೋಡಿಸಿದಾಗ ಬದಲಾವಣೆ ಸಾಧ್ಯವಿರುತ್ತದೆ. ಸ್ವಚ್ಛತಾ ಕಾರ್ಯಕ್ರಮ ಒಂದು ಅವಧಿಗೆ ಸೀಮಿತವಾಗಿರದೇ ನಿರಂತರ ಅಭಿಯಾನವಾದಾಗ ಸ್ವಚ್ಛ ನಗರವಾಗಲು ಸಾಧ್ಯ. ಪರಿಸರ ಸ್ವಚ್ಛತೆಯಿಂದ ಮನುಷ್ಯನ ಆರೋಗ್ಯ ಉತ್ತಮವಾಗುತ್ತದೆ. ಹಾಗಾಗಿ, ಎಲ್ಲರೂ ತಮ್ಮ ಸುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಲು ಹೆಚ್ಚಿನ ಒತ್ತು ನೀಡಬೇಕಿದೆ. ಪ್ರಕೃತಿಗೆ ವಿರುದ್ಧವಾಗಿ ಪ್ರತಿಕ್ರಿಯಿಸಿದಾಗ, ಅದು ಮನುಷ್ಯನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಪರಿಸರವನ್ನು ಹಾಳಗೆಡಹದೆ, ಶುಚಿತ್ವದಿಂದ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಭಿಯಾನದ ಹಿನ್ನಲೆ ನಗರದ ಮುನ್ಸಿಪಾಲ್ ಪೌರಕಾರ್ಮಿಕರಾದ ಲಕ್ಷ್ಮೀ ಹಾಗೂ ಮುರ್ಗಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೆ ವೇಳೆ ಸ್ವಚ್ಛತೆಯಿಂದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಚೇರಿಯ ಹಿರಿಯ ವ್ಯವಸ್ಥಾಪಕ ಎಂ.ಎ ರವಿಚಂದ್ರ, ವ್ಯವಸ್ಥಾಪಕರಾದ ವಿಶ್ವಾಸ್, ವೇಣುಗೋಪಾಲ್, ಜಗದೀಶ್, ಕಿಶೋರ್ ಕುಮಾರ್ ಸೇರಿದಂತೆ ಸಿಬ್ಬಂದಿಗಳು ಈ ಸಂದರ್ಭ ಇದ್ದರು.