ಕನಕಪುರ: ಸಹಕಾರಿ ಸಾರ್ವಜನಿಕ ಸಂಸ್ಥೆಯಾದ ಅರ್ಬನ್ ಬ್ಯಾಂಕ್ 2023- 24 ನೇ ಸಾಲಿನಲ್ಲಿ 1,71,88,503 ಲಾಭಾಂಶಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕಬ್ಬಾಳೇಗೌಡ ತಿಳಿಸಿದರು.
ಇಲ್ಲಿನ ಮಳಗಾಳು ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಬ್ಯಾಂಕಿನ 23-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯನ್ನು 38 ವರ್ಷಗಳ ಹಿಂದೆ ಸಂಸ್ಥಾಪಕರಾದ ಜಿ.ಆರ್.ಅಬ್ಳಿ ಯವರು ಕನಕಪುರದಲ್ಲಿ ಒಂದು ಪತ್ತಿನ ಸಹಕಾರ ಸಂಸ್ಥೆಯ ಅವಶ್ಯಕತೆ ಇರುವುದನ್ನು ಮನಗಂಡು ಪ್ರಾರಂಭಿಸಿದ್ದರು. ಅದು ಬೃಹದಾಕಾರವಾಗಿ ಬೆಳೆದಿದ್ದು ತಾಲ್ಲೂಕಿನ ಜನತೆಯ ಮನ್ನಣೆ ಮತ್ತು ವಿಶ್ವಾಸವನ್ನು ಗಳಿಸಿದೆ ಎಂದು ತಿಳಿಸಿದರು.
ಬ್ಯಾಂಕಿನಲ್ಲಿ ಉತ್ತಮ ವಹಿವಾಟು ಮತ್ತು ಠೇವಣಿ ಇದ್ದು ಗ್ರಾಹಕರು ಮತ್ತು ಸದಸ್ಯರ ಬೇಡಿಕೆಯಂತೆ ಹಾಗೂ ಬ್ಯಾಂಕಿನ ವ್ಯವಹಾರದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಎಲ್ಲವನ್ನು ಕಂಪ್ಯೂಟರೈಸ್ ಮಾಡಲಾಗಿದೆ ಎಂದು ಹೇಳಿದರು.
ಬ್ಯಾಂಕಿನಿಂದ ಸಾಲ ಪಡೆದವರು ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದು ಸುಸ್ತಿದಾರರಾಗಿದ್ದಾರೆ, ಅವರಿಂದ ಹಣ ವಸೂಲಿ ಮಾಡಲು ಬ್ಯಾಂಕ್ ಕಠಿಣ ಕ್ರಮವನ್ನು ಕೈಗೊಳ್ಳುತ್ತಿದೆ. ಇದರಿಂದ ಸಾಕಷ್ಟು ವಿರೋಧಗಳು ಬರುತ್ತಿದ್ದರು ಅದನ್ನು ಲೆಕ್ಕಿಸದೆ ವಸೂಲಾತಿ ಮಾಡಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಚರ್ಚೆ ನಡೆಸಿದ ಸದಸ್ಯರುಗಳು ಸುಸ್ತಿದಾರರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಇಲ್ಲವೇ ಕಾನೂನಿನ ಅಡಿಯಲ್ಲಿ ಸುಸ್ತಿದಾರರಿಂದ ಹಣವನ್ನು ವಸೂಲಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ ಅವರ ಸಲಹೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂಸ್ಥೆಯ ಮೇಲೆ ಜನರಿಗೆ ಹೆಚ್ಚಿನ ನಂಬಿಕೆ ವಿಶ್ವಾಸ ಇರುವುದರಿಂದ ಕೋಡಿಹಳ್ಳಿ, ದೊಡ್ಡಾಲಹಳ್ಳಿ, ಸಾತನೂರು ಹೋಬಳಿ ಕೇಂದ್ರಗಳಲ್ಲಿ ಶಾಖೆಗಳನ್ನು ತೆರೆಯುವಂತೆ ಮನವಿ ಮಾಡಿದ್ದಾರೆ, ಹಾರೋಹಳ್ಳಿಯಲ್ಲಿ ಶಾಖೆ ತೆರೆದಿದ್ದು ಅದರಂತೆ ಇಲ್ಲಿಯೂ ನೂತನ ಶಾಖೆ ತೆರೆಯಲು ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.
ಸದಸ್ಯರಾದ ಕುಮಾರಸ್ವಾಮಿ, ರಾಮಕೃಷ್ಣ.ಕೆ.ಎಂ, ಚಿಕ್ಕೆಂಪೇಗೌಡ, ಹುಚ್ಚೇಗೌಡ, ನಾಗಾರ್ಜುನ್, ನರಸಿಂಹಮೂರ್ತಿ, ಮೋಹನ್ ಕುಮಾರ್, ಎಂ.ಮಂಜುನಾಥ್, ಕೆ.ಬಿ.ನಾಗರಾಜು ಸೇರಿದಂತೆ ಅನೇಕ ಸದಸ್ಯರು ಬ್ಯಾಂಕಿನ ವಹಿವಾಟು ಮತ್ತು ವಾರ್ಷಿಕ ವರದಿ ಸೇರಿದಂತೆ ಬ್ಯಾಂಕಿನ ಅಭಿವೃದ್ಧಿ, ಸಾಲ ವಸೂಲಾತಿ, ಹೊಸ ಶಾಖೆ ನಿರ್ಮಾಣ ಮಾಡುವ ಬಗ್ಗೆ ಚರ್ಚೆ ನಡೆಸಿ ಸಲಹೆ ಸೂಚನೆ ನೀಡಿದರು.
ಸದಸ್ಯರು ಮತ್ತು ಆಡಳಿತ ಮಂಡಳಿಯವರ ನಡುವಿನ ಚರ್ಚೆ ಕಾರ್ಯಕ್ರಮವು 11 ಗಂಟೆಯಿಂದ 2 ಗಂಟೆವರೆಗೆ ದೀರ್ಘಕಾಲ ನಡೆಯಿತು, ಕೆಲವು ಸದಸ್ಯರು ತಾವು ಚರ್ಚೆ ನಡೆಸಲು ಕಾಲಾವಕಾಶವೇ ಸಿಗಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ಚೂಡಾಮಣಿ, ನಿರ್ದೇಶಕರಾದ ರಾಮಚಂದ್ರ, ನಾಗರಾಜು, ರಜಿನಿ.ಎಸ್.ಎನ್, ಡಿ.ಶ್ರೀನಿವಾಸ್, ಜೆ.ನಟರಾಜು, ಚಂದ್ರು.ವಿ, ಹೇಮಶೇಖರ್, ಚಿಕ್ಕ ಬೋರಯ್ಯ, ಮಂಜುಳಾ.ಟಿ.ಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.