Sunday, April 20, 2025
Google search engine

Homeರಾಜ್ಯಸುದ್ದಿಜಾಲರಕ್ತ ಹೀನತೆ ಕಡಿಮೆ ಮಾಡಲು ಪೌಷ್ಠಿಕ ಆಹಾರ ಸೇವಿಸಿ

ರಕ್ತ ಹೀನತೆ ಕಡಿಮೆ ಮಾಡಲು ಪೌಷ್ಠಿಕ ಆಹಾರ ಸೇವಿಸಿ

ಯಳಂದೂರು: ಮಹಿಳೆಯರು ಹಾಗೂ ಮಕ್ಕಳನ್ನು ಕಾಡುವ ದೊಡ್ಡ ತೊಂದರೆ ರಕ್ತ ಹೀನತೆಯಾಗಿದೆ. ಭಾರತದಲ್ಲಿ ಇದು ದಿನೇದಿನೇ ಹೆಚ್ಚುತ್ತಿದ್ದು ಇದನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಇದಕ್ಕೆ ಪೌಷ್ಠಿಕ ತರಕಾರಿ, ಸೊಪ್ಪು, ಕಾಲುಪಲ್ಯಗಳನ್ನು ಸೇವಿಸುವುದೇ ಮದ್ದಾಗಿದ್ದು ಎಲ್ಲರೂ ಪೌಷ್ಠಿಕ ಆಹಾರವನ್ನು ಸೇವಿಸಬೇಕು ಎಂದು ಆರ್‌ಜಿಎಸ್‌ಕೆಯ ವೈದ್ಯೆ ಡಾ. ನವ್ಯ ಕರೆ ನೀಡಿದರು.

ಅವರು ಬುಧವಾರ ತಾಲೂಕಿನ ಮಾಂಬಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಪೋಷಣ್ ಅಭಿಯಾನ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗರ್ಭಿಣಿ, ಬಾಣಂತಿಯರು ನಿಗಧಿತ ಅವಧಿಯಲ್ಲೇ ಊಟ ತಿಂಡಿ ಮಾಡಬೇಕು. ಇವರ ಊಟದಲ್ಲಿ ಸೊಪ್ಪು, ತರಕಾರಿ, ಮೊಳಕೆ ಕಾಳುಗಳು, ಮೊಟ್ಟೆ, ಮೀನು ಸೇರಿದಂತೆ ಹೆಚ್ಚು ಪೂರಕ ಪೋಷಕಾಂಶಗಳ ಆಹಾರವನ್ನೇ ಸೇವಿಸಬೇಕು. ಇದರೊಂದಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರತಿಯೊಂದು ಅಂಗನವಾಡಿ ಕಾರ್ಯಕರ್ತೆಯರೂ ಕೂಡ ಇಂತಹವರಿಗೆ ಸೂಕ್ತ ಮಾಹಿತಿ ನೀಡುತ್ತಾರೆ ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದರು.

ಪೌಷ್ಠಿಕಾಂಶ ಇಲ್ಲದೆ ಹುಟ್ಟುವ ಮಗುವಿಗೆ ನಮ್ಮ ಜಿಲ್ಲೆಯಲ್ಲಿ ಚಾಮರಾಜನಗರ ಹಾಗೂ ಕೊಳ್ಳೇಗಾಲದಲ್ಲಿ ನ್ಯಾಷನಲ್ ರಿಹ್ಯಾಬಿಟೇಷನ್ ಸೆಂಟರ್ (ಎನ್‌ಆರ್‌ಸಿ) ತೆರೆಯಲಾಗಿದೆ. ಇದರಲ್ಲಿ ಮಕ್ಕಳನ್ನು ೧೪ ದಿನ ಇಟ್ಟುಕೊಂಡು ಇವರಿಗೆ ಯಾವ ರೀತಿಯ ಆಹಾರ ನೀಡಬೇಕು ಎಂದು ಹೇಳಿಕೊಡಲಾಗುತ್ತದೆ. ಅಲ್ಲದೆ ಇಲ್ಲಿರುವ ಪೋಷಕರಿಗೆ ದಿನಭತ್ಯೆಯನ್ನೂ ನೀಡಲಾಗುತ್ತದೆ ಎಲ್ಲರೂ ಇದರ ಲಾಭವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಡಾ. ಪ್ರವೀಣ್ ಮಾತನಾಡಿ, ಸ್ವಸ್ಥ ಭಾರತ ನಿರ್ಮಾಣಕ್ಕೆ ರಾಷ್ಟ್ರ ಕಂಕಣ ತೊಟ್ಟಿದೆ. ನಮ್ಮ ದೇಹಕ್ಕೆ ಪ್ರಮುಖವಾಗಿ ಶರ್ಕರ, ಪಿಷ್ಠ, ಕೊಬ್ಬಿನಾಂಶ, ಪ್ರೋಟೀನ್, ವಿಟಮಿನ್ಸ್ ಬೇಕಾಗುತ್ತದೆ. ಇದರೊಂದಿಗೆ ಖನಿಜ, ಲವಣಾಂಶಗಳೂ ಬೇಕಾಗುತ್ತದೆ. ಇದು ನಾವು ತಿನ್ನುವ ಆಹಾರದಲ್ಲೇ ಇರುತ್ತದೆ ಆದರೆ ಇಂತಹ ಆಹಾರವನ್ನು ಆಯ್ಕೆ ಮಾಡುವಲ್ಲಿ ಎಡವುತಿದ್ದೇವೆ. ಗೊತ್ತದ್ದರೂ ಜಂಕ್‌ಫುಡ್‌ನ್ನು ಬಳಸುತ್ತಿದ್ದೇವೆ, ಇದು ಆರೋಗ್ಯಕ್ಕೆ ಮಾರಕವಾಗಿದ್ದು ಇದರಿಂದ ದೂರವಿರಬೇಕು ಎಂದರು. ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರವೂ ನಡೆಯಿತು.

ಪಿಡಿಒ ಉಷಾ, ಶಿಕ್ಷಕ ರಮೇಶ್ ಮಾತನಾಡಿದರು. ಪೋಷಣ್ ಅಭಿಯಾನದ ಸಂಯೋಜಕಿ ಮೌನಶ್ರೀ, ಶಿವಕುಮಾರ್, ನಾಗರತ್ನ, ಪ್ರೀತಿ, ಸಹನಾ, ಡೆಲ್ಫಿಯಾ, ಗ್ರಾಪಂ ಸದಸ್ಯೆ ನಳಿನಾಕುಮಾರಿ ಅಂಗನವಾಡಿ ಕಾರ್ಯಕರ್ತೆಯರಾದ ಎಂ. ಸೌಭಾಗ್ಯ, ನಿರ್ಮಲಾಮುನವಳ್ಳಿ, ನೇತ್ರಾವತಿ ಸೇರಿದಂತೆ ಅನೇಕರು ಇದ್ದರು.



RELATED ARTICLES
- Advertisment -
Google search engine

Most Popular