ಮೈಸೂರು: ಜಿಲ್ಲೆಯಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿವೆ. ಇಂದು ಕುಶಾಲತೋಪು ಸಿಡಿಸುವ ತಾಲೀಮಿನ ವೇಳೆ ಅನಾಮಧೇಯ ಡ್ರೋನ್ ಹಾರಿ ಬಂದಿತ್ತು. ಕೂಡಲೇ ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ.
ಮೈಸೂರಲ್ಲಿ ದಸರಾ ಗಜಪಡೆ ಹಾಗು ಅಶ್ವಾರೋಹಿ ದಳದ ಸಮ್ಮುಖದಲ್ಲಿ ಕುಶಾಲತೋಪು ಸಿಡಿಸಲು ಸಿದ್ದತೆ ನಡೆಯುತ್ತಿದ್ದ ವೇಳೆ ಏಕಾಏಕಿ ಅನಾಮಧೇಯ ಡ್ರೋಣ್ ಒಂದು ಹಾರಿ ಬಂದಿದೆ. ನಿಯಂತ್ರಣ ಕಳೆದುಕೊಂಡು ಏಕಾಏಕಿ ನೆಲಕ್ಕೆ ಅಪ್ಪಳಿಸಿದ ಡ್ರೋಣ್ ಕಂಡು ಸ್ಥಳದಲ್ಲಿದ್ದಂತ ಪೊಲೀಸರು ಕ್ಷಣಕಾಲ ಗಲಿಬಿಲಿ ಗೊಂಡರು.
ಅರಣ್ಯ ಇಲಾಖೆ ಸಿಬ್ಬಂದಿ ಏನಾದರೂ ಡ್ರೋಣ್ ಹಾರಿ ಬಿಟ್ಟಿದ್ದಾರಾ ಎಂದು ಪ್ರಶ್ನಿಸಿದಾಗ, ಇಲ್ಲ ಎಂಬ ಉತ್ತರ ಬಂದಾಗ ಕ್ಷಣಕಾಲ ಆತಂಕ ಸ್ಥಳದಲ್ಲಿ ಮನೆ ಮಾಡಿತ್ತು. ಸ್ಥಳದಲ್ಲಿದ್ಧ ಯಾರೊಬ್ನರೂ ಡ್ರೋಣ್ ಹಾರಿಸಿಲ್ಲ ಎಂಬುದು ಸ್ಪಷ್ಟವಾಯಿತು. ಆದರೂ ಡ್ರೋಣ್ ಎಲ್ಲಿಂದ ಹಾರಿಬಂತು ಎಂಬುದು ತಿಳಿಯದ ಆತಂಕದ ನಡುವೆಯೇ ಅದನ್ನು ಪೊಲೀಸರು ವಶಕ್ಕೆ ಪಡೆದರು.
ಅಂದಹಾಗೇ ಮೈಸೂರು ಅರಮನೆಯ ಹೊರಭಾಗದ ವಸ್ತು ಪ್ರದರ್ಶನ ಆವರಣದಿಂದ ಡ್ರೋಣ್ ಅನ್ನು ಯಾರೋ ಹಾರಿಸಿರುವಂತ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಒಂದು ವೇಳೆ ಆನೆಗಳು ನಿಂತಿದ್ದ ಸ್ಥಳಕ್ಕೆ ಡ್ರೋಣ್ ಬಂದು ಬಿದ್ದಿದ್ದರೇ ದಸರಾ ಗಜಪಡೆ ಬೆಚ್ಚಿ ಬಿದ್ದು ಅನಾಹುತ ಆಗುವ ಸಾಧ್ಯತೆ ಇತ್ತು ಎಂಬುದಾಗಿ ಹೇಳಲಾಗುತ್ತಿದೆ.