ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಮಹದೇವಸ್ವಾಮಿ, ಶ್ರೀಕಂಠಸ್ವಾಮಿಗೆ ಸನ್ಮಾನ
ನಂಜನಗೂಡು: ತಾಲೂಕು ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ನಂಜನಗೂಡು ನಗರಸಭಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಕಂಠಸ್ವಾಮಿ ಹಾಗೂ ವಕೀಲರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಹನಿಯಂಬಳ್ಳಿ ಮಹದೇವಸ್ವಾಮಿ ಅವರನ್ನು ಶುಕ್ರವಾರ ಸನ್ಮಾನಿಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಬಳಿ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಕಂಠಸ್ವಾಮಿ ಯಾವುದೇ ಕೆಲಸ ಮಾಡಬೇಕಾದರೂ ಮುಂದೆ ಗುರಿ, ಹಿಂದೆ ಸಾಧನೆ ಮಾಡುವ ಛಲ ಇದ್ದರೆ ನಾವು ಅಂದುಕೊಂಡಿರುವ ಕೆಲಸವನ್ನು ಯಶಸ್ವಿಯಾಗಿ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
ನಗರದ ಪ್ರಥಮ ಪ್ರಜೆಯಾಗಿರುವ ನನ್ನ ಮೇಲೆ ಅಪಾರ ಜವಾಬ್ದಾರಿ ಇದೆ. ಅಂತೆಯೇ, ಜನರು ಕೂಡ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ನಗರದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದರ ಜತೆಗೆ ಶಕ್ತಿ ಮೀರಿ ಅಭಿವೃದ್ಧಿ ಕೆಲಸ ಮಾಡುವ ಮೂಲಕ ನಗರದ ಜನರ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಹನಿಯಂಬಳ್ಳಿ ಮಹದೇವಸ್ವಾಮಿ ಮಾತನಾಡಿ, 130 ವರ್ಷಗಳ ಇತಿಹಾಸವಿರುವ ನಂಜನಗೂಡು ವಕೀಲರ ಸಂಘಕ್ಕೆ ದಲಿತ ಸಮುದಾಯಕ್ಕೆ ಸೇರಿದ ನನ್ನನ್ನು ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ನನ್ನ ಸಹೊದ್ಯೋಗಿ ಮಿತ್ರರು, ಹಿರಿಯರಿಗೆ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸಲೇ ಬೇಕು ಎಂದು ಹೇಳಿದರು. ಶೋಷಿತರ, ಹಿಂದುಳಿದವರ ನೋವುಂಡವರ ಪರವಾಗಿ ಹಗಲಿರುಳು ಹೋರಾಟ ಮಾಡುತ್ತಿರುವ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ನನ್ನನ್ನು ಸನ್ಮಾನಿಸಿರುವುದು ನನಗೆ ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ. ಈ ನಿಮ್ಮ ಹೋರಾಟದಲ್ಲಿ ನಾನು ಕೂಡ ನಿಮ್ಮ ಜತೆ ಇರುತ್ತೇನೆ. ಹಾಗೆಯೇ, ಹೋರಾಟಕ್ಕೆ ಬೇಕಾದ ಕಾನೂನು ಸಲಹೆ, ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ವಿಭಾಗೀಯ ಸಂಚಾಲಕ ರಾಜಶೇಖರ್ ಕೋಟೆ, ಜಿಲ್ಲಾ ಸಂಚಾಲಕ ಮಣಿಯಯ್ಯ, ಜಿಲ್ಲಾ ಸಂಘಟಬಾ ಸಂಚಾಲಕ ಈಶ್ವರ್, ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಗೀಕಳ್ಳಿ ಮಹದೇವಸ್ವಾಮಿ, ಕಾರ್ಯಾಧ್ಯಕ್ಷ ನಾಗೇಂದ್ರ ಬಸವಟ್ಟಿಗೆ, ಅಧ್ಯಕ್ಷ ಮಂಜು ಶಂಕರಪುರ, ಕಾನೂನು ಸಲಹೆಗಾರ ಬೊಕ್ಕಹಳ್ಳಿ ಮಹದೇವಸ್ವಾಮಿ, ಉಪಾಧ್ಯಕ್ಷ ರಾಜಶೇಖರ (ಶೇಕಿ), ಪದಾಧಿಕಾರಿಗಳಾದ ಹರದನಹಳ್ಳಿ ರಾಜೇಶ್, ಜೆ. ಮಹದೇವಕುಮಾರ್ ಹನುಮನಪುರ, ಗಟ್ಟವಾಡಿ ಮಹೇಶ್, ಹೊಳೆಯಪ್ಪ ಏಚಗಳ್ಳಿ, ಯೋಗೀಶ್, ಹಿರಿಯ ಸಲಹೆಗಾರ ಬೊಕ್ಕಹಳ್ಳಿ ಲಿಂಗಯ್ಯ, ದೇವರಸನಹಳ್ಳಿ ಮಹದೇವಸ್ವಾಮಿ, ಆಲತ್ತೂರು ಶಿವರಾಜು ಸೇರಿದಂತೆ ಇತರರು ಇದ್ದರು.