ಮೈಸೂರು: ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಇಂದು ಬಡಾವಣೆಯ ನಿವಾಸಿಗಳು ಶ್ರೀರಾಂಪುರ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಸ್ವಚ್ಚ ಭಾರತ ಅಭಿಯಾನ, ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ದುಷ್ಪರಿಣಾಮ ಹಾಗೂ ರಾಸಾಯನಿಕ ಕೃತಕ ಬಣ್ಣಗಳ ಆಹಾರ ಪದಾರ್ಥಗಳ ದುಷ್ಪರಿಣಾಮದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುನೀತ್ ಬಡಾವಣೆಯ ನಿವಾಸಿಗಳಿಗೆ ಸ್ವಚ್ಚತಾ ಪ್ರತಿಜ್ಞಾ ವಿಧಿ ಬೋಧಿಸಿದರು.
ಮುಖ್ಯಾಧಿಕಾರಿ ಸುರೇಶ್ ರವರು ಶ್ರೀರಾಂಪುರ ಪಟ್ಟಣ ಪಂಚಾಯಿತಿಯಿಂದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಹಾಗೂ ರಾಸಾಯನಿಕ ಕೃತಕ ಬಣ್ಣಗಳ ಆಹಾರ ಪದಾರ್ಥಗಳನ್ನು ನಿಯಂತ್ರಣ ಮಾಡುವ ಕಾರ್ಯವನ್ನು ಮಾಡುತ್ತಿದೆ. ಆರೋಗ್ಯವಂತ ಭಾರತ ಆಗಬೇಕಾದರೆ ಪ್ರತಿಯೊಬ್ಬ ನಾಗರೀಕರ ಆರೋಗ್ಯ ಮುಖ್ಯ ಶುದ್ದ ಕುಡಿಯುವ ನೀರು ಸರಬರಾಜು ಮಾಡುವುದು ನಮ್ಮ ಕರ್ತವ್ಯವಾಗಿದೆ ಅದನ್ನು ನಾವು ಅತ್ಯಂತ ಜಾಗರೂಕತೆಯಿಂದ ಮಾಡುತ್ತಿದ್ದೇವೆ. ಇತ್ತಿಚೆಗೆ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣಗಳನ್ನು ಬಳಸಿ ಆಹಾರ ಪದಾರ್ಥಗಳನ್ನು ತಯಾರಿಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಆದ್ದರಿಂದ ಪಂಚಾಯಿತಿಯ ವತಿಯಿಂದ ಆಹಾರ ಪದಾರ್ಥಗಳನ್ನು ತಯಾರಿಸುವ ಪರಿಶೀಲನೆ, ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಆಹಾರ ಪದಾರ್ಥಗಳ ಗುಣಮಟ್ಟದ ಪರಿಶೀಲನೆ ಮಾಡುತ್ತಿದ್ದೇವೆ ಸಾರ್ವಜನಿಕರು ಆಹಾರ ಸೇವಿಸುವಾಗ ಕೃತಕ ಬಣ್ಣಗಳ ಬಳಕೆ ಮಾಡಿರುವ ಆಹಾರ ಪದಾರ್ಥಗಳನ್ನು ಗಮನಿಸಬೇಕು.
ರಸ್ತೆ ಬದಿಯಲ್ಲಿ ಕಸ ಹಾಕುವುದನ್ನು ಸಾರ್ವಜನಿಕರು ನಿಲ್ಲಿಸಬೇಕು ಹಾಗೂ ಹಸಿಕಸ ಹಾಗೂ ಒಣಕಸ ಬೇರ್ಪಡಿಸಿ ಪಟ್ಟಣ ಪಂಚಾಯಿತಿ ಇಂದ ಕಳುಹಿಸುವ ತ್ಯಾಜ್ಯ ಸಂಗ್ರಹಣ ವಾಹನಕ್ಕೆ ನೀಡಬೇಕು ಇದರಿಂದ ಪೌರಕಾರ್ಮಿಕರ ಶ್ರಮವನ್ನು ಮೌಲ್ಯಯುತವಾಗಿ ನಾವು ಮತ್ತಷ್ಟು ಬಳಸಬಹುದು. ನಮ್ಮ ಪೌರಕಾರ್ಮಿಕರು ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯನ್ನು ಸ್ವಚ್ಚವಾಗಿ ಇಟ್ಟಿದ್ದಾರೆ. ಸಾರ್ವಜನಿಕರ ಸಹಕಾರ ನಮಗೆ ಅಗತ್ಯ ಎಂದು ತಿಳಿಸಿದರು.
ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣ ಸಮಿತಿ ಅಧ್ಯಕ್ಷ ಕೆ.ಆರ್.ಗಣೇಶ್ ಮಾತನಾಡಿ ಸ್ವಚ್ಚ ಭಾರತ ಎಂದರೆ ವರ್ಷಕ್ಕೆ ಒಂದು ದಿನ ಸ್ವಚ್ಚತೆಯನ್ನು ಮಾಡುವುದಲ್ಲ ನಮ್ಮ ಮನೆಯ ಸುತ್ತ ಮುತ್ತಲಿನ ಪರಿಸರವನ್ನು ನಾವು ಯಾವಾಗಲೂ ಸ್ವಚ್ಚತೆಯಿಂದ ಇಟ್ಟು ಕೊಳ್ಳುವುದು, ನಾವು ಕಸವನ್ನು ರಸ್ತೆ ಬದಿಯಲ್ಲಿ, ಖಾಲಿ ಜಾಗದಲ್ಲಿ ಹಾಕದೇ ಇದ್ದರೆ ಸಾರ್ವಜನಿಕವಾಗಿ ಸ್ವಚ್ಚಗೊಳಿಸುವ ಸಂಧರ್ಭ ಬರುವುದೇ ಇಲ್ಲ. ನಮ್ಮ ಬಡಾವಣೆಯು ಅತ್ಯಂತ ಸ್ವಚ್ಚವಾಗಿದ್ದು ಈಗಾಗಲೇ ಪ್ರಶಂಸೆ ಪಡೆದಿದೆ ಬಡಾವಣೆಯ ನಿವಾಸಿಗಳ ಸಹಕಾರದಿಂದ ಮಾತ್ರ ಒಂದು ಸ್ವಚ್ಚ ಬಡಾವಣೆಯಾಗಿ ನಾವು ಹೊರಬರಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್, ಆರೋಗ್ಯಾಧಿಕಾರಿ ಪರಮೇಶ್ವರ್ , ನೀರು ಸರಬರಾಜು ಉಸ್ತುವಾರಿ ಪರಮೇಶ್, ಕಂದಾಯಾಧಿಕಾರಿ ಕುಮಾರ್, ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣ ಸಮಿತಿ ಅಧ್ಯಕ್ಷ ಕೆ.ಆರ್. ಗಣೇಶ್, ಪ್ರಧಾನ ಕಾರ್ಯದರ್ಶಿ ಪುನೀತ್ ಜಿ ಕೂಡ್ಲೂರು , ಕಾರ್ಯದರ್ಶಿ ನಾಗಭೂಷಣ ಆಚಾರ್, ಮಂಜುನಾಥ್, ರಮೇಶ್ , ಬಾಲ ಸುಬ್ರಮಣ್ಯ, ಮುರುಡಿ, ಮಹೇಶ್ , ಪ್ರೋ. ಮಹೇಶಪ್ಪ , ಬಾಲಕರಾದ ವಿಶ್ವ ದಾಖಲೆ ವಿಜೇತ ಪೃಥು ಪಿ ಅದ್ವೈತ್ ಹಾಗೂ ರಾಘವ ಸೇರಿದಂತೆ ಹಲವಾರು ನಿವಾಸಿಗಳು, ಪೌರಕಾರ್ಮಿಕರು ಹಾಜರಿದ್ದರು.