ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ, ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಾಗಿದೆ. ಈ ಕುರಿತು ರಾಜಭವನದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.
ನಿಯೋಜಿತ ಉಪ ಮುಖ್ಯಮಂತ್ರಿ ಉದಯ ನಿಧಿ ಸ್ಟಾಲಿನ್ ಅವರಿಗೆ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ, ಯೋಜನೆ ಮತ್ತು ಅಭಿವೃದ್ಧಿ ಖಾತೆ ನೀಡುವಂತೆ ತಮಿಳುನಾಡು ರಾಜ್ಯಪಾಲರಿಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಶಿಫಾರಸು ಮಾಡಿದ್ದಾರೆ. ಉದಯನಿಧಿ ಸ್ಟಾಲಿನ್ ಅಲ್ಲದೇ, ವಿ.ಸೆಂಥಿಲ್ ಬಾಲಾಜಿ, ಡಾ. ಗೋವಿ ಚೆಜಿಯಾನ್, ಆರ್.ರಾಜೇಂದ್ರನ್ ಮತ್ತು ಎಸ್.ಎಂ.ನಾಸರ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿ ಶಿಫಾರಸು ಮಾಡಿದ್ದಾರೆ. ರಾಜ್ಯಪಾಲರು ಮುಖ್ಯಮಂತ್ರಿಯ ಶಿಫಾರಸುಗಳನ್ನು ಅನುಮೋದಿಸಿದ್ದಾರೆ.
ಇಂದು ಮಧ್ಯಾಹ್ನ ೩.೩೦ಕ್ಕೆ ಚೆನ್ನೈನ ರಾಜಭವನದಲ್ಲಿ ಪದ ಗ್ರಹಣ ಸಮಾರಂಭ ನಡೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹಾಲು ಮತ್ತು ಡೈರಿ ಅಭಿವೃದ್ಧಿ ಸಚಿವ ಟಿ. ನ್ಯಾನೋ ತಂಗರಾಜ್, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಅನಿವಾಸಿ ತಮಿಳರ ಕಲ್ಯಾಣ ಸಚಿವ ಗಿಂಗಿ ಕೆ.ಎಸ್. ಮಸ್ತಾನ್ ಮತ್ತು ಪ್ರವಾಸೋದ್ಯಮ ಸಚಿವ ಕೆ. ರಾಮಚಂದ್ರನ್ ಅವರನ್ನು ಕೈಬಿಡಲು ರಾಜ್ಯಪಾಲರು ಅನುಮೋದಿಸಿದ್ದಾರೆ.
ಆರು ಸಚಿವರ ಖಾತೆ ಬದಲಾವಣೆ ಮತ್ತು ಹಂಚಿಕೆಗಾಗಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮಾಡಿರುವ ಶಿಫಾರಸನ್ನು ರಾಜ್ಯಪಾಲರು ಅನುಮೋದಿಸಿದ್ದಾರೆ ಎಂದು ಅದು ಹೇಳಿದೆ. ಉದಯನಿಧಿ ಸ್ಟಾಲಿನ್ ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಮಾಜಿ ಮುಖ್ಯಸ್ಥ ದಿವಂಗತ ಎಂ ಕರುಣಾನಿಧಿ ಅವರ ಮೊಮ್ಮಗ ಆಗಿದ್ದಾರೆ.