ಬೆಂಗಳೂರು : ಎಸ್.ಐ.ಟಿಯ ಅಪರಾಧ ಸಂಖ್ಯೆ.೧೬/೧೪ ರಲ್ಲಿ ಆರೋಪಿಯಾಗಿರುವ ಎಚ್.ಡಿ.ಕುಮಾರಸ್ವಾಮಿ, ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಹಾಗೂ ಬೆದರಿಕೆಗಳನ್ನು ಒಡ್ಡಿದ್ದಾರೆ” ಎಂದು ಲೋಕಾಯುಕ್ತ ಎಡಿಜಿಪಿ ಹಾಗೂ ಎಸ್‌ಐಟಿ ಮುಖ್ಯಸ್ಥ ಎಂ.ಚಂದ್ರಶೇಖರ್ ತಿಳಿಸಿದ್ದಾರೆ.
ಈ ಸಂಬಂಧ ಎಸ್.ಐ.ಟಿಯಲ್ಲಿರುವ ತಮ್ಮ ಸಹದ್ಯೋಗಿಗಳಿಗೆ ಪತ್ರ ಬರೆದಿರುವ ಅವರು, ನಿಮಗೆ ತಿಳಿದಿರುವಂತೆ ಎಸ್‌ಐಟಿ ಸಕ್ಷಮ ಪ್ರಾಧಿಕಾರದ ಬಳಿ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ಕೋರಿತ್ತು. ಜಾಮೀನಿನ ಮೇಲಿರುವ ಈ ಆರೋಪಿ ಕುಮಾರಸ್ವಾಮಿ, ನಮ್ಮ ಕರ್ತವ್ಯಗಳನ್ನು ನಿರ್ವಹಿಸದಂತೆ ನಮ್ಮನ್ನು ತಡೆಯಲು ಈ ರೀತಿ ಆಪಾದನೆಗಳನ್ನು ಮಾಡಿದ್ದಾರೆ ಎಂದು ದೂರಿದ್ದಾರೆ.
ನನ್ನ ಮೇಲೆ ದಾಳಿ ಮಾಡುವ ಮೂಲಕ ಎಸ್‌ಐಟಿ ಅಧಿಕಾರಿಗಳ ಮನಸ್ಸಿನಲ್ಲಿ ಭಯ ಮೂಡಿಸುವ ಉದ್ದೇಶ ಅವರಿಗಿರಬಹುದು. ಆದರೆ, ಒಬ್ಬ ಆರೋಪಿ ಆತ ಎಷ್ಟೇ ಉನ್ನತ ಹಾಗೂ ಪರಾಕ್ರಮಿಯಾಗಿದ್ದರೂ, ಆತ ಆರೋಪಿಯಷ್ಟೇ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಇಂತಹ ಆರೋಪಗಳು ಮತ್ತು ಬೆದರಿಕೆಗಳಿಂದ ನಾವು ಅಧೀರರಾಗುವುದಿಲ್ಲ. ನಾನು ಎಸ್‌ಐಟಿ ಮುಖ್ಯಸ್ಥನಾಗಿ ಭಯಪಡದೆ, ಪಕ್ಷಪಾತವಿಲ್ಲದೆ ಕೆಲಸ ಮಾಡುತ್ತೇನೆ. ಎಲ್ಲರಿಗೂ ನ್ಯಾಯ ಕೊಡಿಸುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.ನಮ್ಮ ಪ್ರಕರಣಗಳಲ್ಲಿ ಅಪರಾಧಿಗಳು ಮತ್ತು ಆರೋಪಿಗಳಿಂದ ಹಾಗೂ ಬಾಹ್ಯ ಪ್ರಭಾವಗಳಿಂದ ನಾನು ನಿನ್ನನ್ನು ರಕ್ಷಿಸುತ್ತೇನೆ ಎಂಬ ಭರವಸೆಯನ್ನೂ ನೀಡುತ್ತೇನೆ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಖ್ಯಾತ ಆಂಗ್ಲ ಸಾಹಿತಿ ಜಾರ್ಜ್ ಬರ್ನಾರ್ಡ್ ಷಾ ಅವರ ಪ್ರಸಿದ್ಧ ಉಲ್ಲೇಖವಿದೆ. “ಹಂದಿಗಳೊಂದಿಗೆ ಎಂದಿಗೂ ಕುಸ್ತಿಯಾಡಬೇಡಿ. ನೀವಿಬ್ಬರೂ ಕೊಳಕಾಗುತ್ತೀರಿ ಮತ್ತು ಹಂದಿಯು ಅದನ್ನು ಇಷ್ಟಪಡುತ್ತದೆ” ಎಂದು ಚಂದ್ರಶೇಖರ್ ತಿರುಗೇಟು ನೀಡಿದ್ದಾರೆ. ಆದರೆ ನಮ್ಮ ಕರ್ತವ್ಯ ನಿರ್ವಹಣೆ ವೇಳೆ ನಾವು ಅಪರಾಧಿಗಳು ಮತ್ತು ಆರೋಪಿಗಳನ್ನು ಎದುರಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಎಂದಿಗೂ ಭರವಸೆ ಕಳೆದುಕೊಳ್ಳಬೇಡಿ. ಏಕೆಂದರೆ ಸತ್ಯವು ಯಾವಾಗಲೂ ಜಯಗಳಿಸುತ್ತದೆ. ನಮಗೆ ಸತ್ಯ, ದೇವರು ಮತ್ತು ನಮ್ಮ ಕಾನೂನಿನ ಮೇಲೆ ನಂಬಿಕೆ ಇರಲಿ. ಸತ್ಯಮೇವ ಜಯತೇ ಎಂದು ಚಂದ್ರಶೇಖರ್ ಹೇಳಿದ್ದಾರೆ.