ಚಾಮರಾಜನಗರ: ಭಗವಾನ್ ಶ್ರೀ ಕೃಷ್ಣ ಆನಂದದ ಸಾಗರ. ಬೆಣ್ಣೆ ಮೊಸರು ತೆಗೆಯುವ ಶ್ರೀ ಕೃಷ್ಣನ ಅವತಾರವಾದ ಮಕ್ಕಳು ಮಡಿಕೆಯಿಂದ ತೆಗೆಯುವ ದೃಶ್ಯ ನೋಡುವುದೇ ರೋಮಾಂಚನ ಮತ್ತು ಪರಮಾನಂದದ ಕಾರ್ಯಕ್ರಮ. ಶ್ರೀ ರಾಧಾ ಮತ್ತು ಕೃಷ್ಣರ ವೇಷಭೂಷಣದ ಮೂಲಕ ಮಕ್ಕಳಲ್ಲಿ ಶ್ರೀ ಕೃಷ್ಣನನ್ನು ಕಾಣುವ ಸಂತೋಷ ತಂದೆ ತಾಯಿ ಮತ್ತು ಪೋಷಕರದಾಗಿದೆ. ಶ್ರೀ ಕೃಷ್ಣನ ವರ್ಣನೆ ಅಸಾಧ್ಯವಾದದ್ದು. ಕೃಷ್ಣನ ಆದರ್ಶಗಳು, ಚಿಂತನೆಗಳು ಭಾರತದ ಬುನಾದಿಯಾಗಿದೆ ಎಂದು ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವದ ಸಂಸ್ಥಾಪಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಹರದನಹಳ್ಳಿ ಗ್ರಾಮದ ಶ್ರೀ ವಿನಾಯಕ ಭಕ್ತ ಮಂಡಳಿ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದ ಮುಂಭಾಗ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಗೋಪೂಜೆ ರಾಧಾಕೃಷ್ಣ ಮೆರವಣಿಗೆ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಚಾಮರಾಜನಗರದಲ್ಲಿ 2010ರಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವವನ್ನು ಹಮ್ಮಿಕೊಂಡಿದ್ದು ಅದು ತುಂಬಾ ಪ್ರಸಿದ್ಧಿಯಾಗಿದೆ.
ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳು .ಹಳ್ಳಿ ಹಳ್ಳಿಗಳಲ್ಲೂ ಹಮ್ಮಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ . ಪ್ರತಿ ಮನೆಯು ಭಗವಂತನ ನಾಮಸ್ಮರಣೆಯ ಮೂಲಕ ಸಕಾರಾತ್ಮಕ ಚಿಂತನೆಗಳು ಪ್ರಭಾವ ಬೀರಿ ,ಮಕ್ಕಳಲ್ಲೂ ಮತ್ತು ಹಿರಿಯರಲ್ಲೂ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಶಕ್ತಿಯ ಪ್ರಭೇ ಹೆಚ್ಚಾಗಲಿದೆ. ಶ್ರೀ ಕೃಷ್ಣ ಆನಂದದ ಪ್ರತಿರೂಪ. ಕರುಣೆ, ಪ್ರೀತಿ ,ವಿಶ್ವಾಸ ನಂಬಿಕೆ ,ಸಹೋದರತೆ, ಸಮಾನತೆ ಸ್ವಾತಂತ್ರ, ಪ್ರಕೃತಿ ರೂಪವೇ ಶ್ರೀ ಕೃಷ್ಣ ಪರಮಾತ್ಮ. ಮಕ್ಕಳಲ್ಲಿ ಶ್ರೀ ಕೃಷ್ಣನನ್ನು ಕಾಣುವುದೇ ಸ್ವರ್ಗ. ಇಡೀ ಲೋಕಕ್ಕೆ ಭಗವದ್ಗೀತೆಯಂತಹ ಸರ್ವ ಶ್ರೇಷ್ಠ ಜೀವನದ ಶಕ್ತಿ ಹಾಗೂ ಬೌದ್ಧಿಕತೆಯ ಬದುಕಿನ ಸಾರವಾಗಿರುವ ಅಂಶಗಳನ್ನು ತಿಳಿಸಿ ಮಾನವ ಕಲ್ಯಾಣಕ್ಕೇ ಮಾರ್ಗದರ್ಶನ ನೀಡಿದವರು. ಶ್ರೀ ಕೃಷ್ಣನನ್ನು ಪೂಜಿಸುವ ಮತ್ತು ಆರಾಧಿಸುವ ಗುಣಗಳನ್ನು ಯುವಕರು ಬೆಳೆಸಿಕೊಳ್ಳಿ ಎಂದರು.
ಹರದನಹಳ್ಳಿ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಶ್ರೇಷ್ಠತೆಯ ಗ್ರಾಮವಾಗಿದೆ . ಇಲ್ಲಿನ ಯುವಕರು ಮಾದರಿ ಕಾರ್ಯವನ್ನು ನಿರ್ವಹಿಸುತ್ತಿದ್ದು ದೇವಾಲಯಗಳ ಪುನರಸ್ಥಾನ ,ಕಲ್ಯಾಣಿಗಳ ಶುಚಿತ್ವ,, ಮತ್ತು ಸಾಮಾಜಿಕ ಜವಾಬ್ದಾರಿಯ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಮೆಚ್ಚುಗೆಯ ಸಂಗತಿ. ಭಗವಂತನ ಆಶೀರ್ವಾದ ನಿಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ತಿಳಿಸಿದರು.

ಶ್ರೀರಾಮ ಶೇಷ ಪಾಠ ಶಾಲೆಯ ಪ್ರಾಚಾರ್ಯರಾದ ಪ್ರದೀಪ್ ಕುಮಾರ್ ದೀಕ್ಷಿತ್ ರವರು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿದ್ದ ಮುಖ್ಯ ಶಿಕ್ಷಕ ನಟರಾಜ್ ಮಾತನಾಡಿ ಗ್ರಾಮದ ವಿನಾಯಕ ಭಕ್ತ ಮಂಡಳಿ ಪ್ರತಿ ವರ್ಷ ಉತ್ತಮ ಕಾರ್ಯವನ್ನು ನೆರವೇರಿಸುತ್ತಿದೆ ಮಕ್ಕಳಿಗೆ ಶಿಕ್ಷಣ ಜಾಗೃತಿ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾದ ಮಕ್ಕಳ ವಿಕಾಸದ ಕಾರ್ಯಕ್ರಮವನ್ನು ರೂಪಿಸುತ್ತಿರುವುದು ಬಹಳ ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಯೂಥ್ ಫಾರ್ ಸೇವಾ ಸಂಸ್ಥೆಯ ಮನೋಜ್, ಸಮಗ್ರ ವಿಕಾಸ ಟ್ರಸ್ಟಿನ ಸಂತೋಷ್, ಈಶ ಫೌಂಡೇಶನ್ ಸ್ವಯಂಸೇವಕ ರಘು,ವಿನಾಯಕ ಭಕ್ತ ಮಂಡಳಿಯ ಅಧ್ಯಕ್ಷರಾದ ವೆಂಕಟೇಶ್ ಪದಾಧಿಕಾರಿಗಳು , ಯಜಮಾನರುಗಳು ಹಾಗು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಮೊಸರು ಮಡಿಕೆ ಒಡೆಯುವ ಉತ್ಸವದ ಮೊದಲು ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಗೋಪೂಜೆ, ರಾಧಾಕೃಷ್ಣರ ಮೆರವಣಿಗೆ ,ನಾದಸ್ವರ ,ಭಜನೆ, ಹರೇ ಕೃಷ್ಣ ಮಂತ್ರಘೋಷಣೆಯೊಂದಿಗೆ ಮನೆ ಮನೆಯಲ್ಲಿಯೂ ಆರತಿ ,ಪೂಜೆ ನೆರವೇರಿಸುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.