ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿದ ಪ್ರಕರಣದಲ್ಲಿ ಮೃತಪಟ್ಟ ಗೋವಿಂದೇಗೌಡ ಮತ್ತು ನಾಗಯ್ಯ ಅವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರವನ್ನು ಸರ್ಕಾರ ದಿಂದ ಕೊಡಿಸಲಾಗುವುದು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಬೆಟ್ಟಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮೃತಪಟ್ಟ ನಾಗಯ್ಯ ಅವರ ಅಂತಿಮ ದರ್ಶನವನ್ನು ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಅವರು ಮಾತನಾಡಿದರು.
ಗ್ರಾಮದ ಈ ಎರಡೂ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಹಾಗೂ ಆರ್‌ಡಿಪಿಆರ್ ವತಿಯಿಂದ ತಲಾ 3 ಲಕ್ಷ ರೂ.ನಂತೆ ಒಟ್ಟು 5 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಕುಟುಂಬದವರಿಗೆ ನೀಡುತ್ತೇನೆ ಎಂದರು.
ಇದೇ ವೇಳೆ ನಾಗಯ್ಯ ಅವರ ಕುಟುಂಬಕ್ಕೆ ವೈಯಕ್ತಿಕವಾಗಿ ಸಹಾಯ ಮಾಡಿದರು. ಪ್ರತಿಯೊಬ್ಬರಿಗೂ ಆರೋಗ್ಯ ಪ್ರಮುಖವಾಗಿದ್ದು ಅದಕ್ಕಾಗಿ ಉತ್ತಮ ಪರಿಸರ, ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಬೇಕು. ಗ್ರಾಮದ ರಸ್ತೆ ಬದಿಗಳಲ್ಲಿ, ಚರಂಡಿಗಳನ್ನು, ನೀರು ಹರಿಯುವ ಸ್ಥಳಗಳಲ್ಲಿ ಯಾವುದೇ ರೀತಿಯ ಕಸ ಕಡ್ಡಿಗಳನ್ನು ಹಾಕದೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೃತ ನಾಗಯ್ಯ ಅವರ ಕುಟುಂಬದವರು, ತಾಪಂ ಮಾಜಿ ಅಧ್ಯಕ್ಷ ಎಚ್.ಟಿ.ಮಂಜಪ್ಪ, ಗ್ರಾ.ಪಂ. ಅಧ್ಯಕ್ಷೆ ಪವಿತ್ರ, ಸದಸ್ಯ ಚಂದ್ರೇಗೌಡ, ಮುಖಂಡರಾದ ರಾಜೇಗೌಡ, ಗುರು, ಪಾಂಡು, ಸಣ್ಣಯ್ಯ, ವಸಂತ, ಹರೀಶ್, ಮಂಜುನಾಥ್, ಚೇತನ್, ಇತರರು ಹಾಜರಿದ್ದರು.