Saturday, April 19, 2025
Google search engine

Homeಸ್ಥಳೀಯಕೃಷ್ಣರಾಜ ಭೂಪ ಮನೆಮನೆಗೂ ತಲುಪಬೇಕು: ಸಾಹಿತಿ ಬನ್ನೂರು ರಾಜು

ಕೃಷ್ಣರಾಜ ಭೂಪ ಮನೆಮನೆಗೂ ತಲುಪಬೇಕು: ಸಾಹಿತಿ ಬನ್ನೂರು ರಾಜು

ಮೈಸೂರು: ಗಾಂಧೀಜಿಯಂಥ ಮಹಾತ್ಮರಿಂದ ರಾಜರ್ಷಿ ಎಂದು ಕರೆಸಿಕೊಂಡ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಗ್ಗೆ ಬಹಳಷ್ಟು ಕೃತಿಗಳು ಇದುವರೆಗೆ ಬಂದಿವೆಯಾದರೂ ಸಂಶೋಧಕ ಸಾಹಿತಿ ಡಾ.ಎನ್. ಎನ್. ಚಿಕ್ಕಮಾದು ಅವರ ‘ಕೃಷ್ಣರಾಜ ಭೂಪ ಮನೆ ಮನೆ ದೀಪ’ ಕೃತಿಯು ಎಲ್ಲಾ ದೃಷ್ಟಿಯಿಂದಲೂ ವಿಭಿನ್ನವಾಗಿದ್ದು ನಮ್ಮ ನಾಡಿಗೊಂದು ಕಳಶಪ್ರಾಯ ಕಾಣ್ಕೆಯಾಗಿದೆಯೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಅವರು ಅಭಿಪ್ರಾಯ ಪಟ್ಟರು.

ನಗರದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರಸ್ತೆಯಲ್ಲಿರುವ ರೋಟರಿ ಶಾಲೆಯ ಸಭಾಂಗಣದಲ್ಲಿ ಮೈಸೂರು ಜಿಲ್ಲೆಯ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ವೇದಿಕೆಯು ಏರ್ಪಡಿಸಿದ್ದ ಸಂಶೋಧಕ ಸಾಹಿತಿ ಡಾ. ಎನ್. ಎನ್. ಚಿಕ್ಕಮಾದು ಅವರ ‘ಪ್ರಜಾಮಾತೆ’ ಮತ್ತು ‘ಕೃಷ್ಣರಾಜ ಭೂಪ ಮನೆ ಮನೆ ದೀಪ’ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಕೃಷ್ಣರಾಜ ಭೂಪ ಮನೆ ಮನೆ ದೀಪ ಕೃತಿ ಕುರಿತು ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ ಬದುಕು , ಸಾಧನೆ , ಸಿದ್ಧಿಯ ಹಿನ್ನೆಲೆಯಲ್ಲಿ ದೇಶದಲ್ಲೇ ಮಾದರಿ ಸಂಸ್ಥಾನವೆಂದು ಹೆಸರಾಗಿದ್ದ ಮೈಸೂರು ಸಂಸ್ಥಾನವನ್ನು ಸಮಗ್ರವಾಗಿ ಅಧಿಕೃತ ಮಾಹಿತಿಗಳೊಂದಿಗೆ ಕಟ್ಟಿಕೊಟ್ಟಿರುವ ಈ ಕೃತಿಯು ಪ್ರತಿಯೊಂದು ಮನೆ , ಶಾಲಾ ಕಾಲೇಜುಗಳಲ್ಲೂ ಇರಬೇಕಾದ ಅಮೂಲ್ಯ ಗ್ರಂಥವೆಂದರು. ಮುಂದುವರಿದು ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶದಲ್ಲಿದ್ದ ೫೫೦ಕ್ಕೂ ಹೆಚ್ಚಿನ ಸಂಸ್ಥಾನಗಳಲ್ಲಿ ಮಾದರಿ ಸಂಸ್ಥಾನವೆಂದು ಮೈಸೂರು ಸಂಸ್ಥಾನ ಹೆಗ್ಗಳಿಕೆ ಹೊಂದಲು ಪ್ರಜಾನುರಾಗಿ ಹಾಗೂ ಸರ್ವ ಜನಾಂಗದ ಅಭಿವೃದ್ಧಿಯ ಕನಸುಗಾರ ನಾಲ್ವಡಿಯವರು ಕಾರಣೀಭೂತರಾಗಿದ್ದರು. ಹಾಗಾಗಿ ಅವರನ್ನು ಕೃತಿಯಲ್ಲಿ ಸ್ಥಿರಸ್ಥಾಯಿಗೊಳಿಸಿರುವ ಸಾಹಿತಿ ಚಿಕ್ಕಮಾದು ಅವರ ಮಹತ್ವದ ಗ್ರಂಥ ‘ಕೃಷ್ಣರಾಜ ಭೂಪ ಮನೆಮನೆ ದೀಪ’ ವನ್ನು ಸರ್ಕಾರ ವಿಶೇಷ ಅನುದಾನದಡಿ ಮರುಮುದ್ರಿಸಿ, ಅತ್ಯಂತ ಕಡಿಮೆ ಬೆಲೆಗೆ ನಾಡಿನ ಜನತೆಗೆ ಸಿಗುವಂತೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

ಇದಕ್ಕೂ ಮುನ್ನ ಡಾ. ಎನ್. ಎನ್. ಚಿಕ್ಕಮಾದು ಅವರ ಕೃಷ್ಣ ರಾಜ ಭೂಪ ಮನೆಮನೆ ದೀಪ ಮತ್ತು ಪ್ರಜಾಮಾತೆ ಕೃತಿಗಳೆರಡನ್ನೂ ಖ್ಯಾತ ಸಾಹಿತಿ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ನಮ್ಮ ಸರ್ಕಾರವು ರಾಜ್ಯ ಅಥವಾ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಸ್ಥಾಪಿಸಿ ಪ್ರತಿ ವರ್ಷ ಅವರ ಜನ್ಮ ದಿನದಂದು ಸಾಧಕರಿಗೆ ನೀಡಿ ಗೌರವಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಇಡೀ ದೇಶದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚಿನ ಕೊಡುಗೆ ನೀಡುತ್ತಿರುವ ರಾಜ್ಯ ಕರ್ನಾಟಕ. ಪಂಪ, ವಾಲ್ಮೀಕಿ, ಕನಕ, ಶಿಶುನಾಳ ಸೇರಿದಂತೆ ಅನೇಕರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಅದೇ ರೀತಿ ನಾಲ್ವಡಿ ಅವರ ಹೆಸರಿನಲ್ಲೂ ಪ್ರಶಸ್ತಿ ಸ್ಥಾಪಿಸಬೇಕೆಂದು ಸಲಹೆ ನೀಡಿದರು.

ಎಲ್ಲಾ ಸ್ವಾತಂತ್ರ್ಯಕ್ಕೂ ಸ್ತ್ರೀಯರು ಅರ್ಹರು ಅನ್ನುವ ಕಾರಣಕ್ಕೆ ದೇಶದಲ್ಲಿ ಶತಶತಮಾನಗಳಿಂದಲೂ ಸ್ತ್ರೀಯರ ಪರವಾಗಿ ಅನೇಕ ಚಳವಳಿಗಳು ಹುಟ್ಟಿಕೊಂಡಿವೆ. ಸಂಕೀರ್ಣ ಸಮಾಜದ ಸಂದರ್ಭ ನಾವು ಸ್ತ್ರೀಯರ ಸ್ಥಾನ ಮಾನದ ಚರ್ಚೆ ನಡೆಸಬೇಕಾಗಿದೆ. ದೇಶದಲ್ಲಿ ಮಧ್ಯಮ ವರ್ಗ ಹುಟ್ಟಿದ್ದರ ಫಲವಾಗಿ ಅನೇಕ ನಿಷೇಧಗಳು ಬಂದವು. ಹಿಂದೆ ಕೂಡ ನಿಷೇಧಗಳಿದ್ದವು. ಪುರುಷ ಯಾವಾಗ ಆರ್ಥಿಕ ಪದ್ಧತಿಯನ್ನು ನಿಯಂತ್ರಿಸಲು ತೊಡಗಿದ್ದ ಅದರ ಫಲವಾಗಿ ಸಾಮಾಜಿಕ, ಆರ್ಥಿಕ ಚಟುವಟಿಕೆಗಳಲ್ಲಿ ಸ್ತ್ರೀಯರನ್ನು ಅಲ್ಲಗಳೆಯಲಾಯಿತು. ನಿರಾಕರಿಸಿ ದೂರ ಇಡಲಾಯಿತು.ಅಂತಹ ಚರ್ಚೆ ಅಗತ್ಯ. ಅದು ಚರಿತ್ರೆಯ ಚರ್ಚೆ ಎಂದರು. ಪ್ರಜಾಮಾತೆ ಕೃತಿ ಕುರಿತು ಮೈಸೂರು ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ. ಎಸ್. ಡಿ.ಶಶಿಕಲಾ ಅವರು ಮಾತನಾಡಿದರು.

ಮನವಿ ಸಲ್ಲಿಕೆ: ಇದೇ ವೇಳೆ ಮೈಸೂರು ಜಿಲ್ಲೆ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ವೇದಿಕೆಯು ಪದವಿ ಪೂರ್ವ ಕಾಲೇಜು ಶಿಕ್ಷಣದ ಉಪನ್ಯಾಸಕರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತಾದ ಮನವಿ ಪತ್ರವನ್ನು ಬರಗೂರು ರಾಮಚಂದ್ರಪ್ಪ ಅವರಿಗೆ ಸಲ್ಲಿಸಿದರು. ಮನವಿ ಸ್ವೀಕರಿಸಿ ಪ್ರತಿಕ್ರಿಸಿದ ಅವರು, ನಾನು ಸರ್ಕಾರದ ಜೊತೆ ಸಂಧಾನ ಹಾಗು ಸಂಘರ್ಷವನ್ನೂ ಮಾಡಿದ್ದೇನೆ. ಪದವಿ ಪೂರ್ವ ಕಾಲೇಜು, ಕನ್ನಡ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗೋಪಾಯಗಳನ್ನು ಕಂಡುಹಿಡಿಯೋಣ. ನಿಮ್ಮ ಬೇಡಿಕೆಗಳು ನಿಜವಾಗಿಯೂ ಸರಿ ಅನ್ನಿಸಿದರೆ ಸರ್ಕಾರದ ಜೊತೆಗೆ ಜಗಳವಾಡಲು ನಾನು ಸಿದ್ದನಾಗಿದ್ದೇನೆ ಎಂದರು.ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಎಂ. ಮಹೇಶ, ಕೃತಿಗಳ ಕರ್ತೃ ಡಾ.ಎನ್.ಎನ್. ಚಿಕ್ಕಮಾದು ವೇದಿಕೆಯಲ್ಲಿದ್ದರು.

RELATED ARTICLES
- Advertisment -
Google search engine

Most Popular