ಬೆಂಗಳೂರು : ಬಂಗಾಳಿ ಲೆಜೆಂಡರಿ ನಟ ಮಿಥುನ್ ಚಕ್ರವರ್ತಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಹಿಂದಿ ಚಿತ್ರರಂಗದ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ಸಿಎಂ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ಹಿಂದಿ ಚಿತ್ರರಂಗದ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ಅಭಿನಂದನೆಗಳು. ತಮ್ಮ ಮನೋಜ್ಞ ಅಭಿನಯ, ಅಮೋಘ ನೃತ್ಯದ ಮೂಲಕ ಹಲವು ದಶಕಗಳ ಕಾಲ ಸಿನಿಪ್ರಿಯರನ್ನು ರಂಜಿಸಿದ ಮಿಥುನ್ ಚಕ್ರವರ್ತಿ ಈ ಗೌರವಕ್ಕೆ ಅತ್ಯಂತ ಅರ್ಹರು. ಇವರ ಜೀವನ ಸಾಧನೆ ಯುವ ನಟ ನಟಿಯರಿಗೆ ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಮಿಥುನ್ ಚಕ್ರವರ್ತಿ ೧೯೭೬ ರಲ್ಲಿ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಟ ಮತ್ತು ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಡಿಸ್ಕೋ ಡ್ಯಾನ್ಸರ್ ಸಿನಿಮಾದಿಂದ ವಿಶೇಷ ಗಮನ ಸೆಳೆದರು. ಅವರು ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಅವರ ಸೇವೆಯನ್ನು ಗುರುತಿಸಿದ ಕೇಂದ್ರವು ಈ ವರ್ಷದ ಜನವರಿಯಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಸಹ ಅವರಿಗೆ ನೀಡಿತು. ಈಗ ದಾದಾ ಸಾಹೇಬರನ್ನು ಗೌರವಿಸುತ್ತಾರೆ.