ಮೈಸೂರು: ಅಧಿಕಾರದಲ್ಲಿ ಇದ್ದಾಗ ಕುಟುಂಬ ಹತ್ತಿರವಿಟ್ಟುಕೊಂಡರೆ, ಮಕ್ಕಳನ್ನು ಬೆಳೆಸಲು ಮುಂದಾದರೆ ಅವರು ನಿಮ್ಮ ಹೆಸರಿಗೆ ಕಳಂಕ ತರುತ್ತಾರೆ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆ. ಒಡವೆ ಕದ್ದ ಕಳ್ಳ ಒಡವೆ ವಾಪಸ್ ಕೊಟ್ಟರೆ ಕೇಸ್ ಮುಗಿಯುತ್ತಾ ಇಲ್ಲ ಅಲ್ವಾ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.
ಸಿದ್ದರಾಮಯ್ಯನವರ ಪತ್ನಿ ೧೪ ಸೈಟ್ ಅನ್ನು ಮರಳಿ ಮುಡಾಕ್ಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಪ್ರಕರಣ ಬೆಳಕಿಗೆ ಬಂದ ಕೂಡಲೇ ನಿವೇಶನ ವಾಪಸ್ ನೀಡಿ, ಮುಕ್ತ ತನಿಖೆ ಎದುರಿಸುವಂತೆ ಸಲಹೆ ನೀಡಿದ್ದೆ. ಈಗ ಇ.ಡಿ. ಪ್ರಕರಣ ದಾಖಲಾದ ನಂತರ ವಾಪಸ್ ನೀಡಿದ್ದಾರೆ. ಆಗಲೇ ನೀಡಿದ್ದರೆ ಕುರ್ಚಿ ಕಳೆದುಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ. ಈಗ ಕೊಟ್ಟರೂ ಪ್ರಯೋಜನ ಇಲ್ಲ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದರು.
೨೦೨೩ರ ಚುನಾವಣೆ ಸಂದರ್ಭವೇ ಈ ನಿವೇಶನಗಳ ಅಕ್ರಮದ ದಾಖಲೆ ಬಂದಿತ್ತು. ಆದರೆ ಸಿದ್ದರಾಮಯ್ಯ ಪತ್ನಿ ವಿಚಾರ ಎಂಬ ಕಾರಣಕ್ಕೆ ಸುದ್ದಿಗೋಷ್ಡಿ ನಡೆಸಲಿಲ್ಲ ಎಂದರು. ಕುಟುಂಬ ರಾಜಕಾರಣ ಮಾಡುವ ಎಲ್ಲ ರಾಜಕಾರಣಿಗಳಿಗೆ ಈ ಪ್ರಕರಣ ಒಂದು ಪಾಠ. ಮುಂದೆ ಆದರೂ ಎಚ್ಚರಿಕೆಯ ಹೆಜ್ಜೆ ಇಡಿ. ನಿಮ್ಮ ಸ್ಥಾನದ ದುರುಪಯೋಗ ಪಡಿಸಿಕೊಂಡು ಅಕ್ರಮ ಮಾಡುತ್ತಾರೆ. ಸಿಕ್ಕಿಹಾಕಿಕೊಂಡ ನಂತರ ಕಣ್ಣೀರು ಹಾಕಿದರೆ ಪ್ರಯೋಜನ ಇಲ್ಲ ಎಂದು ಸಲಹೆ ನೀಡಿದರು.