ರಾಮನಗರ : ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಿಸಿದಂತೆ ಇದೀಗ ಕಾಂಗ್ರೆಸ್ ಶಾಸಕ ಎಚ್ ಸಿ ಬಾಲಕೃಷ್ಣ ಸ್ಫೋಟಕ ಹೇಳಿಕೆ ನೀಡಿದ್ದು, ಬಿಜೆಪಿಯ ಮಾಜಿ ಶಾಸಕ ಸಿಪಿ ಯೋಗೇಶ್ವರ್ ಅವರು ಅವರ ಮುಖಂಡರಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಕರೆತರುವಂತೆ ಹೇಳಿಸುತ್ತಿದ್ದಾರೆ ಎಂದು ತಿಳಿಸಿದರು.
ಇಂದು ಮಂಗಳವಾರ ರಾಮನಗರ ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೂ ಮುನ್ನ ಯೋಗೇಶ್ವರ್ ಬಂದಿದ್ದರೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೆವು. ಅವರಿಗೆ ಗೌರವ ನೀಡುತ್ತಿದ್ದೆವು. ಈಗ ಎಚ್.ಡಿ ಕುಮಾರಸ್ವಾಮಿ ಜೊತೆ ಸೇರಿಸಿಕೊಂಡಿದ್ದಾರೆ. ಅವರನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೆ ನೋಡೋಣ. ನಮ್ಮ ಹಣೆ ಬರಹ ಏನಿತ್ತೋ ಗೊತ್ತಿಲ್ಲ. ಬಂದಿದ್ದರೆ ಗೌರವವಾಗಿ ನಡೆಸಿಕೊಳ್ಳುತ್ತಿದ್ದೇವು ಎಂದರು.
ಹಿಂದೆ ಸಿ ಪಿ ಯೋಗೇಶ್ವರ ಅವರು, ಚನ್ನಪಟ್ಟಣ ಉಪಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಡದೆ ಹೋದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ತಿಳಿಸಿದ್ದರು. ಅದಾದ ಬಳಿಕ ಮತ್ತೆ ಯುಟರ್ನ್ ಹೊಡೆದು ಪಕ್ಷ ಯಾರಿಗೆ ಟಿಕೆಟ್ ನೀಡುವುದು ಅವರಿಗಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಈ ಒಂದು ಚನ್ನಪಟ್ಟಣ ಉಪಚುನಾವಣೆಯಲ್ಲಿ ಅವರು ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.