Saturday, April 19, 2025
Google search engine

Homeರಾಜ್ಯಸುದ್ದಿಜಾಲಶ್ರೀರಂಗಪಟ್ಟಣ ದಸರಾಗೆ ನಟ ಶಿವರಾಜ್ ಕುಮಾರ್ ಚಾಲನೆ

ಶ್ರೀರಂಗಪಟ್ಟಣ ದಸರಾಗೆ ನಟ ಶಿವರಾಜ್ ಕುಮಾರ್ ಚಾಲನೆ


ಶ್ರೀರಂಗಪಟ್ಟಣ: ಕಿರಂಗೂರು ಬನ್ನಿಮಂಟಪದಲ್ಲಿ ಇಂದು ಶುಕ್ರವಾರ ಖ್ಯಾತ ನಟ ಡಾ.ಶಿವರಾಜ್‌ಕುಮಾರ್ ಅವರು ಪಾರಂಪರಿಕ ಶ್ರೀರಂಗಪಟ್ಟಣ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದರು. ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.

ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶ್ರೀರಂಗಪಟ್ಟಣ ಶಾಸಕ ಹಾಗೂ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷ ಎ.ಬಿ ರಮೇಶ್ ಬಂಡಿಸಿದ್ದೇಗೌಡ, ಶಾಸಕರಾದ ಪಿ ರವಿಕುಮಾರ್, ದರ್ಶನ್ ಪುಟ್ಟಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಚಾಮುಂಡೇಶ್ವರಿ ವಿಗ್ರಹದ ಅಂಬಾರಿ ಹೊತ್ತ ಮಹೇಂದ್ರ ಗಾಂಭೀರ್ಯದೊಂದಿಗೆ ಬನ್ನಿಮಂಟಪ ಕಿರಂಗೂರಿನಿಂದ ಶ್ರೀರಂಗನಾಥ ಸ್ವಾಮಿ ದೇವಾಲಯದವರೆಗೆ ಸಾಗಿತು. ಕಲಾತಂಡಗಳು ಹಾಗೂ ಸ್ಥಬ್ಥಚಿತ್ರಗಳು ಭಾಗವಹಿಸಿ ಮೆರವಣಿಗೆಗೆ ವಿಶೇಷ ಮೆರಗು ನೀಡಿತು. ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯ ಗ್ರಾಮದ ಶ್ರೀ ಚಾಮುಂಡೇಶ್ವರಿ ಸಾಂಸ್ಕೃತಿಕ ಕಲಾತಂಡ, ಮಂಡ್ಯ ತಾಲೂಕು ಕಾರಸವಾಡಿ ಗ್ರಾಮದ ಕೆ.ಬಿ.ಸ್ವಾಮಿ ತಂಡ, ಮದ್ದೂರು ತಾಲೂಕು ಕಡಿಲುವಾಗಿಲು ಗ್ರಾಮದ ಚೇತನ್.ಡಿ.ಸಿ ತಂಡ, ಬಾಬುರಾಯನಕೊಪ್ಪಲು ಪ್ರೇಮ್ ಕುಮಾರ್ ಬಿ.ಎನ್ ತಂಡ, ಶ್ರೀರಂಗಪಟ್ಟಣ ರವಿ.ಸಿ ತಂಡ ಮತ್ತು ಮಂಡ್ಯ ತಾಲೂಕು ಕಾರಸವಾಡಿ ವಿಕಾಸ್ ಕೆ.ಎಸ್ ತಂಡಗಳು ಭಾಗವಹಿಸಿದ್ದವು.

ವೀರಗಾಸೆ, ಸೋಮನ ಕುಣಿತ, ಡೊಳ್ಳು ಕುಣಿತ, ನಗಾರಿ/ತಮಟೆ, ನಂದಿದ್ವಜ ಕುಣಿತ, ಗಾರುಡಿಗೊಂಬೆ, ಚಿಲಿಪಿಲಿ ಗೊಂಬೆ, ಕೊಂಬು ಕಹಳೆ, ಒನಕೆ ಕುಣಿತ, ದೊಣ್ಣೆ ವರಸೆ, ಕತ್ತಿವರಸೆ, ಬೆಂಕಿ ಭರಾಟೆ, ಮಹಿಳಾಪಟ ಕುಣಿತ, ಬ್ಯಾಂಡ್ ಸೆಟ್ ವಾದನ, ನಾದಸ್ವರ, ಮಹಿಳಾ ಕೋಲಾಟ ತಂಡಗಳು ವಿಶೇಷ ಆಕರ್ಷಣೆಯಾಗಿದ್ದವು.

ಸ್ಥಬ್ದ ಚಿತ್ರಗಳು ರೇಷ್ಮೆ ಇಲಾಖೆಯಿಂದ ರೇಷ್ನೆ ಹುಳು ಸಾಕಾಣಿಕೆ ಹಾಗೂ ಅದರ ಉತ್ಪನ್ನಗಳು, ವಿದ್ಯಾ ಭಾರತಿ ಶಾಲೆಯಿಂದ ನವ ದುರ್ಗಿಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗೃಹ ಲಕ್ಷ್ಮಿ ಯೋಜನೆ, ಶಾಲಾ ಶಿಕ್ಷಣ ಇಲಾಖೆಯಿಂದ ಜ್ಞಾನಪೀಠ ಪ್ರಶಸ್ತಿ ವಿಜೇತರು ಹಾಗೂ ಶಿಕ್ಷಣ ಇಲಾಖೆ ಸೌಲಭ್ಯದ ಬಗ್ಗೆ ಸ್ಥಬ್ದ ಚಿತ್ರ ಸೇರಿದಂತೆ ಕೃಷಿ, ತೋಟಗಾರಿಕೆ, ಖಾದಿ ಮತ್ತು ಗ್ರಾಮೋದ್ಯೋಗ, ಆರೋಗ್ಯ, ಅಗ್ನಿ ಶಾಮಕ ಇಲಾಖೆ ಹಾಗೂ ಭಗವಾನ್ ಬುದ್ಧ ಕುರಿತು ಸ್ಥಬ್ಧ ಚಿತ್ರಗಳು ಪಾಲ್ಗೊಂಡು ಮೆರವಣಿಗೆಗೆ ವಿಶೇಷ ಮೆರಗು ನೀಡಿದವು.

RELATED ARTICLES
- Advertisment -
Google search engine

Most Popular