ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕಾಲೇಜು ಶಿಕ್ಷಣ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಮುಖವಾದ ಘಟ್ಟವಾಗಿದ್ದು ಈ ಸಮಯದಲ್ಲಿ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ಬದುಕು ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ 2024-25 ನೇ ಸಾಲಿನ ಸಾಂಸ್ಕೃತಿಕ ಸಮಿತಿ ಹಾಗೂ ವಿವಿಧ ಸಮಿತಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ದೇಶದ ಭವಿಷ್ಯದ ಆಧಾರ ಸ್ತಂಭಗಳಾದ ವಿದ್ಯಾರ್ಥಿಗಳು ಅತ್ಯಂತ ಜವಬ್ದಾರಿಯಿಂದ ನಡೆದುಕೊಳ್ಳಬೇಕೆಂದು ತಿಳಿಸಿದರು.
ಶಾಲೆ ಮತ್ತು ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರುವುದು ಕಲಿಕೆಗೆ ಮಾತ್ರವಲ್ಲಾ ಇದರ ಜತೆಗೆ ಸುಂದರ ಮತ್ತು ಸುಭದ್ರ ಜೀವನ ರೂಪಿಸಿಕೊಂಡು ಇದರೊಂದಿಗೆ ಮಾನಸಿಕ ವಿಕಾಸ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಾಬಲ್ಯ ಮತ್ತು ಪ್ರಭುತ್ವ ಸಾಧಿಸಿದ್ದು ಜಗತ್ತಿನಲ್ಲಿ ಯಾವ ದೇಶದಲ್ಲಿ ಮಹಿಳಾ ಶಕ್ತಿ ಮಂಚೂಣಿ ಹಾಗೂ ಸಾಧನೆಯ ಹಾದಿಯಲ್ಲಿ ಇರುತ್ತದೆಯೊ ಅಂತಹ ದೇಶ ಸರ್ವಾಂಗೀಣ ಪ್ರಗತಿ ಸಾಧಿಸಲು ಸಾಧ್ಯ ಎಂದರು. ಮಾಜಿ ಪ್ರಧಾನ ಮಂತ್ರಿಗಳಾದ ದಿವಂಗತ ಇಂದಿರಾಗಾಂಧಿಯವರು ಇಡೀ ಮಹಿಳಾ ಕುಲಕ್ಕೆ ಮಾದರಿಯಾಗಿದ್ದು ನೀವು ಅವರ ದೈರ್ಯ ಮತ್ತು ಆತ್ಮ ಸ್ಥೈರ್ಯವನ್ನು ಮೈಗೂಡಿಸಿಕೊಂಡು ಮುನ್ನಡೆದು ಸಾಧನೆಯ ಹಾದಿಯನ್ನು ಕ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಕಾಲೇಜಿನ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಲು ಅಗತ್ಯ ಅನುದಾನ ನೀಡಲಿದ್ದು ಪ್ರಾಂಶುಪಾಲರು ಜಾಗದ ಅಳತೆ ಮಾಡಿಸಿ ಸ್ಥಳ ನಿಗದಿ ಮಾಡಿ ಮಾಹಿತಿ ಹಾಗೂ ದಾಖಲೆ ನೀಡಬೇಕೆಂದು ಸೂಚಿಸಿದ ಅವರು ಈಗಾಗಲೇ ಶೌಚಾಲಯ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದ್ದು ಶೀಘ್ರ ಕಾಮಗಾರಿ ಆರಂಬಿಸಲಾಗುತ್ತದೆಂದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕಾರ್ಯದರ್ಶಿ ವೈ.ಎಸ್. ಜಯಂತ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ- ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ ಮಾತನಾಡಿದರು. ಈ ಸಂಧರ್ಭದಲ್ಲಿ ಯುವ ಸಂಭ್ರಮಲ್ಲಿ ಬಾಗವಹಿಸಿ ಯುವ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಯ್ಕೆಯಾದ ವಿದ್ಯಾರ್ಥಿನಿಯರನ್ನು ಶಾಸಕರು ಸನ್ಮಾನಿಸಿದರು.
ಕಾಲೇಜು ಪ್ರಾಂಶುಪಾಲ ಬಿ.ಟಿ.ವಿಜಯ್, ಸಾಂಸ್ಕೃತಿಕ ಸಂಚಾಲಕ ಪಿ.ಪ್ರಶಾಂತ್, ಕ್ರೀಡಾ ಸಮಿತಿಯ ಸಂಚಾಲಕ ಡಾ.ಬಿ.ವಿ.ಗಣೇಶ್, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಸಿ.ಆರ್.ಕಿರಣ್ ಕುಮಾರ್, ರೆಡ್ ಕ್ರಾಸ್ ಘಟಕ ಸಂಚಾಲಕ ಡಾ.ಎಸ್.ಶಂಕರ್, ಪ್ರಾಧ್ಯಾಪಕರಾದ ಪಿ.ನಂದನ್, ಡಾ.ಕೆ.ರೇಣುಕಾದೇವಿ, ವಿದ್ಯಾರ್ಥಿ ಅಧ್ಯಕ್ಷೆ ಆರ್.ಚೈತ್ರ, ಕಾರ್ಯದರ್ಶಿ ಆರ್.ಪವಿತ್ರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಇದ್ದರು.