ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯ್ದಿನ್ ಬಾವರ ಸಹೋದರ, ಉದ್ಯಮಿ ಮುಮ್ತಾಜ್ ಅಲಿಯವ್ರ ಕಾರು ಅಪಘಾತದ ರೀತಿಯಲ್ಲಿ ಪತ್ತೆಯಾಗಿದ್ದು, ಅವರು ಕೂಳೂರು ಸೇತುವೆಯ ಬಳಿ ನಾಪತ್ತೆಯಾಗಿದ್ದಾರೆ.
ಇಂದು ಕದ್ರಿ ಅಗ್ನಿಶಾಮಕ ಠಾಣೆಗೆ ಕರೆ ಬಂದಿದ್ದು, ಮುಮ್ತಾಜ್ ಅಲಿ ಅವರ ಬಿಎಂಡಬ್ಲ್ಯೂ ಕಾರು ಸೇತುವೆಯ ಬಳಿ ಪಾರ್ಕ್ ಮಾಡಿರುವುದು ಪತ್ತೆಯಾಗಿದೆ. ಅವರ ನಾಪತ್ತೆಯ ಹಿನ್ನೆಲೆಯಲ್ಲಿ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದ್ದು, ಕದ್ರಿ ಮತ್ತು ಪಾಂಡೇಶ್ವರ ಅಗ್ನಿಶಾಮಕ ಠಾಣೆಗಳ ಸಿಬ್ಬಂದಿ ಹಾಗೂ ಎಸ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಬಂದು 2 ಬೋಟ್‌ಗಳೊಂದಿಗೆ ಕೂಳೂರಿನ ಫಲ್ಗುಣಿ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈವರೆಗೆ ಮುಮ್ತಾಜ್ ಅಲಿ ಪತ್ತೆಯಾಗಿಲ್ಲ, ಮತ್ತು ಶೋಧ ಮುಂದುವರಿದಿರುವುದಾಗಿ ತಿಳಿದು ಬಂದಿದೆ. ವಿಷಯ ಹರಿದಾಡುತ್ತಿದ್ದಂತೆಯೇ ನೂರಾರು ಮಂದಿ ಕೂಳೂರು ಸೇತುವೆಯ ಬಳಿ ಜಮಾಯಿಸಿದ್ದಾರೆ.
ಮಂಗಳೂರಿನ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರ ಸಹೋದರ ಮಮ್ತಾಜ್ ಅಲಿ ಅವರು ನಿಗೂಢವಾಗಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕಾರು ಪತ್ತೆಯಾಗಿರುವ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭ ಮಾಧ್ಯಮಗಳ ಜತೆ ಮಾತನಾಡಿದ ಅವರು ಮುಮ್ತಾಜ್ ಅವರು ಮುಂಜಾನೆ ಮೂರು ಗಂಟೆಗೆ ಮನೆಯಿಂದ ಬಿಎಂಡಬ್ಲೂ ಕಾರ್ ಚಲಾಯಿಸಿಕೊಂಡು ಬಂದಿದ್ದು ಕುಳೂರು ಸೇತುವೆ ಬಳಿ ಕಾರು ಅಫಘಾತವಾಗಿ ಕಾಣೆಯಾಗಿದ್ದಾರೆ. ಈ ವಿಚಾರ ಮಗಳಿಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಮುಮ್ತಾಜ್ ಸೇತುವೆಯಿಂದ ಕೆಳಗೆ ಹಾರಿರುವ ಬಗ್ಗೆ ಸಂಶಯ ಇದೆ. ಹೀಗಾಗಿ ವಿವಿಧ ತಂಡಗಳು ನದಿಯಲ್ಲಿ ಶೋಧ ಕಾರ್ಯ ಮಾಡುತ್ತಿದ್ದಾರೆ. ಎಫ್ ಎಸ್ ಎಲ್ ಅಧಿಕಾರಿಗಳು ಕಾರು ಪರಿಶೀಲನೆ ಮಾಡಿದ್ದಾರೆ. ಕುಟುಂಬದ ಸದಸ್ಯರಿಂದಲೂ ಕೆಲವೊಂದು ಮಾಹಿತಿಗಳನ್ನು ಸಂಗ್ರಹಿಸಿದ್ದೇವೆ. ಘಟನೆಯ ಬಗ್ಗೆ ತನಿಖೆಯನ್ನು ಮಾಡುತ್ತಿದ್ದೇವೆ ಎಂದು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.
