ನವದೆಹಲಿ: ಸಹ ನೃತ್ಯ ನಿರ್ದೇಶಕಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದಲ್ಲಿ ಜೈಲುಪಾಲಾಗಿರುವ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಗೆ ನೀಡಲಾಗಿದ್ದ ಅತ್ಯುತ್ತಮ ನೃತ್ಯ ನಿರ್ದೇಶಕ ವಿಭಾಗದ ರಾಷ್ಟ್ರ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ.
ಅವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದ್ದರಿಂದ ಪ್ರಶಸ್ತಿಯನ್ನು ರದ್ದುಗೊಳಿಸಲಾಗಿದೆ ಎಂದು ಸಮಿತಿ ತಿಳಿಸಿದೆ.
ತಮಿಳಿನ ‘ತಿರುಚಿತ್ರಂಬಲಂ’ ಚಿತ್ರಕ್ಕಾಗಿ ಜಾನಿ ಮಾಸ್ಟರ್ ಅತ್ಯುತ್ತಮ ನೃತ್ಯ ಸಂಯೋಜಕ ಪ್ರಶಸ್ತಿಯನ್ನು ಸ್ವೀಕರಿಸಬೇಕಿತ್ತು. ಅಕ್ಟೋಬರ್ 8ರಂದು ದೆಹಲಿಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಬೇಕಿತ್ತು. ಪ್ರಶಸ್ತಿ ಸ್ವೀಕರಿಸಲು ಜಾನಿ ಮಾಸ್ಟರ್‌ಗೆ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಪ್ರಶಸ್ತಿ ರದ್ದತಿಯಿಂದಾಗಿ ಜಾನಿ ಮಾಸ್ಟರ್ ಮಧ್ಯಂತರ ಜಾಮೀನು ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕಿದ್ದಾರೆ.
‘ಅಕ್ಟೋಬರ್ 8ರಂದು ದೆಹಲಿಯಲ್ಲಿ ರಾಷ್ಟ್ರಪತಿಯವರ ಕೈಯಿಂದ ಪ್ರಶಸ್ತಿಯನ್ನು ಸ್ವೀಕರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಜಾಮೀನು ನೀಡಿ’ ಎಂದು ಜಾನಿ ಮಾಸ್ಟರ್ ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ಜಾನಿ ಮಾಸ್ಟರ್‌ಗೆ ನಾಲ್ಕು ದಿನಗಳ ಕಾಲ ಮಧ್ಯಂತರ ಜಾಮೀನು ನೀಡಿ ನ್ಯಾಯಾಲಯ ಆದೇಶ ಹೊರಡಿಸಿತ್ತು. ಪ್ರಕರಣ ಸಂಬಂಧ ಯಾರ ಮೇಲೂ ಪ್ರಭಾವ ಬೀರಬಾರದು ಎಂದು ಕೋರ್ಟ್ ಷರತ್ತು ವಿಧಿಸಿತ್ತು. ಈಗ ಅವರ ಜಾಮೀನು ರದ್ದಾಗೋ ಸಾಧ್ಯತೆ ಇದೆ.