ಬೆಂಗಳೂರು: ಹರಿಯಾಣ ರಾಜ್ಯದಲ್ಲಿ ಬಿಜೆಪಿ ಸತತವಾಗಿ ೩ನೇ ಬಾರಿಗೆ ಅಧಿಕಾರ ಪಡೆಯುವತ್ತ ದಾಪುಗಾಲು ಹಾಕುತ್ತಿರುವುದು ಸಂತಸದ ವಿಚಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹರಿಯಾಣದಲ್ಲಿ ಬಿಜೆಪಿ ದೂಳೀಪಟ ಆಗುವುದಾಗಿ ವಿಪಕ್ಷಗಳು ಬೊಬ್ಬೆ ಹೊಡೆಯುತ್ತಿದ್ದವು. ಕಾಂಗ್ರೆಸ್ ಪಕ್ಷ ಅಧಿಕಾರ ಗಳಿಸುವ ಭ್ರಮೆಯಲ್ಲಿತ್ತು. ಎಲ್ಲ ಪಿತೂರಿಗಳ ನಡುವೆ ಅದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಮತ್ತೆ ಜಯಭೇರಿ ನಿಟ್ಟಿನಲ್ಲಿ ಸಾಗುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.
ಜಮ್ಮು- ಕಾಶ್ಮೀರದಲ್ಲಿ ೩೭೦ನೇ ವಿಧಿ ರದ್ದತಿ, ಕಾನೂನು ಸುವ್ಯವಸ್ಥೆ ಹತೋಟಿಗೆ ಬಂದ ಬಳಿಕ ಚುನಾವಣೆ ನಡೆದಿದೆ. ಅಭಿವೃದ್ಧಿ ಕೆಲಸಗಳೂ ಆಗುತ್ತಿದ್ದು, ಬಿಜೆಪಿ ಉತ್ತಮವಾಗಿ ಪ್ರದರ್ಶನ ನೀಡುತ್ತಿದೆ ಎಂದು ತಿಳಿಸಿದರು.
ಗೌರವಾನ್ವಿತ ಈಶ್ವರಪ್ಪನವರು ಹಿರಿಯರಿದ್ದಾರೆ. ನಿನ್ನೆಯ ಅವರ ಪತ್ರಿಕಾ ಹೇಳಿಕೆಯನ್ನು ಗಮನಿಸಿದ್ದೇನೆ. ಸತ್ಸಂಪ್ರದಾಯ, ಸಂಸ್ಕಂತಿ ಬೆಳೆಸಬೇಕು, ಉಪನ್ಯಾಸ, ಭ್ರಷ್ಟಾಚಾರದ ಕುರಿತು ಅನೇಕ ಒಳ್ಳೆಯ ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ನಾನು ಕಿರಿಯ ವಯಸ್ಸಿನವನು. ಈಶ್ವರಪ್ಪನವರಿಗೆ ಒಳ್ಳೆಯದಾಗಲಿ; ಅವರು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಈ ಕುರಿತ ಪ್ರಶ್ನೆಗೆ ಉತ್ತರ ನೀಡಿದರು.