Saturday, April 19, 2025
Google search engine

Homeರಾಜ್ಯಸುದ್ದಿಜಾಲಬೆಳೆಗಳಿಗೆ ನಿಗಧಿತ ಅವಧಿಯಲ್ಲಿ ವಿಮೆ ಮಾಡಿಸಿ: ಡಾ. ಅವಿನಾಶ್ ಮೆನನ್ ರಾಜೇಂದ್ರನ್

ಬೆಳೆಗಳಿಗೆ ನಿಗಧಿತ ಅವಧಿಯಲ್ಲಿ ವಿಮೆ ಮಾಡಿಸಿ: ಡಾ. ಅವಿನಾಶ್ ಮೆನನ್ ರಾಜೇಂದ್ರನ್

ರಾಮನಗರ: ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ್ ಬೀಮಾ (ವಿಮಾ) ಯೋಜನೆಯನ್ನು ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅಧಿಸೂಚಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಮನಗರ ಜಿಲ್ಲೆಗೆ ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ, ಸಂಸ್ಥೆಯನ್ನು 2023-24ನೇ ಸಾಲಿನ ಆರ್ಥಿಕ ವರ್ಷಕ್ಕೆ ಅನುಷ್ಠಾನ ಸಂಸ್ಥೆಯನ್ನಾಗಿ ಆಯ್ಕೆ ಮಾಡಲಾಗಿರುತ್ತದೆ ಎಂದರು.

ಗ್ರಾಮ ಪಂಚಾಯಿತಿ ಮಟ್ಟ: ಜಿಲ್ಲೆಯ ಪ್ರಮುಖ ಬೆಳೆಯಾದ ರಾಗಿ (ಮಳೆಯಾಶ್ರಿತ) ಬೆಳೆಯನ್ನು ಎಲ್ಲಾ 127 ಗ್ರಾಮ ಪಂಚಾಯಿತಿಗಳಲ್ಲಿ ಅಧಿಸೂಚಿಸಲಾಗಿರುತ್ತದೆ.

ಹೋಬಳಿ ಮಟ್ಟ: ಇತರೇ ಬೆಳೆಗಳಾದ ಅಲಸಂಧೆ (ಮ.ಆ), ಎಳ್ಳು (ಮ.ಆ), ಕೆಂಪು ಮೆಣಸಿನ ಕಾಯಿ (ಮ.ಆ), ಕೆಂಪು ಮೆಣಸಿನ ಕಾಯಿ (ನೀ), ತೊಗರಿ (ಮ.ಆ), ನೆಲಗಡಲೆ (ಮ.ಆ), ನೆಲಗಡಲೆ (ನೀ), ಭತ್ತ (ಮ.ಆ), ಭತ್ತ (ನೀ), ಮುಸುಕಿನ ಜೋಳ (ಮ.ಆ), ಮುಸುಕಿನ ಜೋಳ (ನೀ), ಹುರುಳಿ (ಮ.ಆ) ಮತ್ತು ರಾಗಿ (ನೀ)

ಅಧಿಸೂಚಿತ ಬೆಳೆಗಳಿಗೆ ಬೆಳೆ ಸಾಲ ಮಂಜೂರಾದ ಎಲ್ಲಾ ರೈತರುಗಳನ್ನು ಕಡ್ಡಾಯವಾಗಿ ಯೋಜನೆಯಡಿಯಲ್ಲಿ ಒಳಪಡಿಸಲಾಗುವುದು. ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛೆ ಪಡದಿದ್ದಲ್ಲಿ ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ನೋಂದಣಿಯ ಅಂತಿಮ ದಿನಾಂಕಕ್ಕಿಂತ 7 ದಿನಗಳು ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರ ನೀಡಿದಲ್ಲಿ ಅಂತಹ ರೈತರನ್ನು ಯೋಜನೆಯಿಂದ ಕೈಬಿಡಲಾಗುವುದು ಎಂದರು.

ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಪಹಣಿ/ಖಾತೆ ಪುಸ್ತಕ/ ಕಂದಾಯ ರಸೀದಿ & ಆಧಾರ್ ಸಂಖ್ಯೆ ನೀಡತಕ್ಕದ್ದು. ಬೆಳೆ ಸಾಲ ಪಡೆಯದ ರೈತರು ಉಪೇಕ್ಷಿತ ಬೆಳೆ ಬಿತ್ತನೆ ಆಧಾರದ ಮೇಲೆ ಬಿತ್ತನೆ ಪೂರ್ವದಲ್ಲೇ ಪಾಲ್ಗೊಳ್ಳಬಹುದು. ಬೆಳೆ ವಿಮೆಗೆ ನೊಂದಾಯಿಸಿ ನಂತರ ಬೇರೆ ಬೆಳೆ ಬಿತ್ತನೆ ಮಾಡಿದಲ್ಲಿ ನಿಗದಿಪಡಿಸಿದ ಅವಧಿಯೊಳಗೆ ಬಿತ್ತನೆ ದೃಢೀಕರಣ ಪತ್ರ ನೀಡಿ ವಿಮೆ ಮಾಡಿಸಿದ ಬೆಳೆಯನ್ನು ಬದಲಾಯಿಸತಕ್ಕದ್ದು. ಅಂತಹ ಸಂದರ್ಭದಲ್ಲಿ ವಿಮಾ ಕಂತಿನ ವ್ಯತ್ಯಾಸದ ಮೊತ್ತವನ್ನು ಭರಿಸತಕ್ಕದ್ದು. ಇಂಡೆಮ್ನಿಟಿ ಮಟ್ಟ: ನೀರಾವರಿ ಬೆಳೆ-90%, ಮಳೆ ಆಶ್ರಿಶ ಬೆಳೆ-80%. ರೈತರು ಪಾವತಿಸಬೇಕಾದ ವಿಮಾ ಕಂತು: ಮುಂಗಾರಿಗೆ ವಿಮಾ ಮೊತ್ತದ ಶೇ. 2, ಹಿಂಗಾರು/ಬೇಸಿಗೆ ಹಂಗಾಮಿಗೆ ವಿಮಾ ಮೊತ್ತದ ಶೇ. 1.5 ಹಾಗೂ ವಾಣಿಜ್ಯ ಹಾಗೂ ತೋಟಗಾರಿಕಾ ಬೆಳೆಗಳಿಗೆ ವಿಮಾ ಮೊತ್ತದ ಶೇ. 5. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಸೂಚಿಸಬೇಕಾದರೆ ಬೆಳೆಯ ವಿಸ್ತೀರ್ಣ ಕನಿಷ್ಠ 50 ಹೆಕ್ಟೇರ್ ಇರಬೇಕು. ಹೋಬಳಿ ಮಟ್ಟದಲ್ಲಿ ಅಧಿಸೂಚಿಸಲು ಬೆಳೆಯ ವಿಸ್ತೀರ್ಣ ಕನಿಷ್ಠ 125 ಹೆಕ್ಟೇರ್ ಇರಬೇಕು.

ಪ್ರಾರಂಭಿಕ ಇಳುವರಿ-ಲೆಕ್ಕ ಹಾಕುವಾಗ ಹಿಂದಿನ ಏಳು ವರ್ಷಗಳ ಇಳುವರಿಯನ್ನು ಪರಿಗಣಿಸಿ ಉತ್ತಮ ಐದು ವರ್ಷಗಳ ಸರಾಸರಿ ಇಳುವರಿಯನ್ನು ಪರಿಗಣಿಸಲಾಗುವುದು ಎಂದರು.

ಬ್ಯಾಂಕುಗಳು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರಿಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಸಂರಕ್ಷಣೆ ಪೋರ್ಟಲ್ ನಲ್ಲಿ ದಾಖಲಿಸಲು ಹಾಗೂ ವಿಮಾ ಸಂಸ್ಥೆಗಳಿಗೆ ವರ್ಗಾಯಿಸಲು ಮತ್ತು ವಿಮಾ ಕಂತಿನ ಮೊತ್ತವನ್ನು ನೀಡಲು ರೈತರು ನೋಂದಣಿ ಮಾಡುವ ಕೊನೆಯ ದಿನಾಂಕದಿಂದ 15 ದಿನದೊಳಗೆ ಅಂತಿಮಗೊಳಿಸುವುದು ಎಂದರು.

ಪ್ರಿವೆಂಟೆಡ್ ಸೋವಿಂಗ್/ಪ್ಲಾಂಟಿಂಗ್ ರಿಸ್ಕ್: ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವ ಅಥವಾ ಇತರೇ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಘಟಕದಲ್ಲಿ ಶೇ. 75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ. 25 ರಷ್ಟು ಪರಿಹಾರವನ್ನು ವಿಮಾ ಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ಇತ್ಯರ್ಥಪಡಿಸಿ ಮುಂದಿನ ಅವಧಿಗೆ ವಿಮೆಯನ್ನು ರದ್ದುಪಡಿಸತಕ್ಕದ್ದು.

ಆನ್ ಅಕೌಂಟ್ ಪೇಮೆಂಟ್ ಡ್ಯೂ ಟು ಮಿಡ್‌ಸೀಸನ್ ಅಡ್ವರ್‌ಸಿಟಿ: ಅಧಿಸೂಚಿತ ಪ್ರದೇಶದಲ್ಲಿ ತೀವ್ರ ಬರಗಾಲದಿಂದ/ಧೀರ್ಘಕಾಲದ ತೇವಾಂಶದ ಕೊರತೆ, ಹೆಚ್ಚಿನ ಮಳೆ ಅಥವಾ ನೆರೆ/ಪ್ರವಾಹದಿಂದ ಬೆಳೆ ಮುಳುಗಡೆ ಸಂಭವಿಸಿದ್ದಲ್ಲಿ ನಿರೀಕ್ಷಿತ ಇಳುವರಿಯು ಪ್ರಾರಂಭಿಕ ಇಳುವರಿಯ ಶೇ. 50ಕ್ಕಿಂತ ಕಡಿಮೆ ಇದ್ದರೆ ವಿಮೆ ಮಾಡಿಸಿದ ರೈತರಿಗೆ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ. 25ರಷ್ಟು ಹಣವನ್ನು ಮುಂಚಿತವಾಗಿ ವಿಮಾ ಸಂಸ್ಥೆಯು ನೀಡತಕ್ಕದ್ದು. ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಬೆಳೆ ಇಳುವರಿ ಮಾಹಿತಿ ಬಂದ ನಂತರ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಈ ಹಣವನ್ನು ಹೊಂದಾಣಿಕೆ ಮಾಡತಕ್ಕದ್ದು.

ಸ್ಥಳ ನಿರ್ದಿಷ್ಠ ಪ್ರಕೃತಿ ವಿಕೋಪ (ಲೋಕಲೈಸ್ಡ್ ಕಲಮಿಟಿ): ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘ ಸ್ಪೋಟ ಮತ್ತು ಗುಡುಗು ಮಿಂಚುಗಳಿಂದಾಗಿ ಉಂಟಾಗುವ ಬೆಂಕಿ ಅವಘಡಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಲು ಅವಕಾಶವಿದ್ದು, ಇಂತಹ ಸಂದರ್ಭದಲ್ಲಿ ಬೆಳೆ ನಷ್ಟ ಸಂಭವಿಸಿದ 72 ಗಂಟೆಗಳೊಳಗಾಗಿ ಲಿಖಿತವಾಗಿ ಅರ್ಜಿಯನ್ನು ನೋಂದಾಯಿಸಿದ ಬ್ಯಾಂಕ್/ವಿಮಾ/ಕೃಷಿ/ತೋಟಗಾರಿಕಾ ಇಲಾಖೆಗಳಿಗೆ ಮಾಹಿತಿ ನೀಡಬೇಕು. ನಷ್ಟದ ಬಗೆಗಿನ ಮಾಹಿತಿಯನ್ನು ಸ್ವೀಕರಿಸಿದ ಮೇಲೆ ವಿಮಾ ಸಂಸ್ಥೆಗಳು ಬೆಳೆ ನಷ್ಟವನ್ನು ನಿರ್ಧರಿಸುವುದಕ್ಕೆ ನಷ್ಟ ನಿರ್ಧಕರನ್ನು ಸಂಬಂಧಪಟ್ಟ ಪ್ರದೇಶಕ್ಕೆ 48 ಗಂಟೆಯೊಳಗಾಗಿ ನಿಯೋಜಿಸಬೇಕು ಎಂದರು.

ಬೆಳೆ ಕಟಾವು ನಂತರದ ಸಂಭವನೀಯ ಹಾನಿ (ಪೋಸ್ಟ್ ಹಾರ್‌ವೆಸ್ಟ್ ಲಾಸಸ್): ಬೆಳೆ ಕಟಾವಿನ ನಂತರ ಜಮೀನಿನಲ್ಲೇ ಒಣಗಲು ಬಿಟ್ಟ ಸಂದರ್ಭದಲ್ಲಿ 2 ವಾರದಲ್ಲಿ (14 ದಿನ) ಚಂಡಮಾರುತ/ಚಂಡ ಮಾರುತ ಮಳೆ, ಅಕಾಲಿಕ ಮಳೆ ಬಂದು ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ಬೆಳೆ ನಷ್ಟವನ್ನು ನಿರ್ಧಾರ ಮಾಡಿ, ಬೆಳೆ ವಿಮಾ ನಷ್ಟ ಪರಿಹಾರವನ್ನು ವೈಯಕ್ತಿಕವಾಗಿ ಇತ್ಯರ್ಥ ಪಡಿಸುತ್ತದೆ. ನಷ್ಟದ ಬಗೆಗಿನ ಮಾಹಿತಿಯನ್ನು ಸ್ವೀಕರಿಸಿದ ಮೇಲೆ ವಿಮಾ ಸಂಸ್ಥೆಗಳು ಬೆಳೆ ನಷ್ಟವನ್ನು ನಿರ್ಧರಿಸುವುದಕ್ಕೆ ನಷ್ಟ ನಿರ್ಧಕರನ್ನು ಸಂಬಂಧಪಟ್ಟ ಪ್ರದೇಶಕ್ಕೆ 48 ಗಂಟೆಯೊಳಗಾಗಿ ನಿಯೋಜಿಸಬೇಕು ಎಂದರು.

ವಿಮಾ ಮೊತ್ತ ಮತ್ತು ವಿಮಾ ಕಂತಿನ ವಿವರ: ಬೆಳಗಳಿಗೆ ವಿಮೆ ಮಾಡಿಸಲು ನಿರ್ಧರಿತ ಬೆಳೆಗಳಾದ ಎಳ್ಳು, ನೆಲಗಡಲೆ, ಅಲಸಂದೆ, ತೊಗರಿ, ರಾಗಿ ಪ್ರತೀ ಹೆಕ್ಟೇರ್‌ಗೆ ಪ್ರತ್ಯೇಕವಾದ ವಿಮಾ ಮೊತ್ತವಿದ್ದು, ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರು, ರಾಮನಗರ ಇವರನ್ನು ಸಂಪರ್ಕಿಸುವಂತೆ ತಿಳಿಸಿದರು.

ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ 2771 ಅರ್ಜಿಗಳು ಸ್ವೀಕೃತವಾಗಿದ್ದು, 2572 ಅರ್ಜಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. 199 ಅರ್ಜಿಗಳು ಬಾಕಿ ಇರುವುದಾಗಿ ಜಂಟಿ ಕೃಷಿ ನಿರ್ದೇಶಕರು, ರಾಮನಗರ ರವರು ಸಭೆಗೆ ಮಾಹಿತಿ ನೀಡಿದರು.

ಬೆಳೆ ಸಮೀಕ್ಷೆ ಯೋಜನೆ: ಈ ಯೋಜನೆಯಲ್ಲಿ ಸಾಂಖ್ಯಿಕ ಇಲಾಖೆ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಬೆಳೆ ವಿಸ್ತೀರ್ಣ ಎಣಿಕಾ ಕಾರ್ಯದಲ್ಲಿ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಹಾಗೂ ತಾಕಿನ/ಸರ್ವೇ ನಂಬರ್ ಆಯ್ಕೆ ಮಾಡಲು ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬೆಳೆಹಾನಿ ಕುರಿತು ವರದಿ ಸಿದ್ದಪಡಿಸಿದಲು ಹಾನಿಗೊಳಗಾದ ಬೆಳೆ ವಿಸ್ತೀರ್ಣದ ವಿವರ ಸಿದ್ದಪಡಿಸಲು ಅರ್ಹ ಫಲಾನುಭವಿಗಳ ಪಟ್ಟಿಯನ್ನು ತಯಾರಿಸುವ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್/ಎಸ್.ಡಿ.ಆರ್.ಎಫ್ ಅಡಿಯಲ್ಲಿ ಸಹಾಯಧನ ನೀಡಲಾಗುವುದು.

ಬೆಳೆ ವಿಮಾ ಯೋಜನೆ: ತಾಕು ಹಂತದ ಬೆಳೆ ಪರಿಶೀಲನೆ. ಕನಿಷ್ಠ ಬೆಂಬಲ ಬೆಲೆ ನಿಗಧಿ ಹಾಗೂ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕಾಗಿ ಆರ್.ಟಿ.ಸಿಯಲ್ಲಿ ಬೆಳೆ ವಿವರ ದಾಖಲಾತಿಗಾಗಿ ರೈತರಿಗೆ ರಾಷ್ಟ್ರೀಯ ಮತ್ತು ಗ್ರಾಮೀಣ ಬ್ಯಾಂಕುಗಳಲ್ಲಿ ಬೆಳೆ ಸಾಲ ಮಂಜೂರು ಮಾಡಲಾಗುವುದು.

ಜಿಲ್ಲಾಡಳಿತದ ಪಾತ್ರ: ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಅನುಷ್ಠಾನ ಪ್ರಾಧಿಕಾರಿಯಾಗಿರುತ್ತಾರೆ. ಮಾಹಿತಿ/ದತ್ತಾಂಶ ಸಂಗ್ರಹಣೆ ಚಟುವಟಿಕೆಯಲ್ಲಿ ಕೃಷಿ ಮತ್ತು ಸಂಬಂಧಿತ ಇಲಾಖೆಗಳ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವುದು. ಕಂದಾಯ, ಕೃಷಿ, ರೇಷ್ಮೆ, ತೋಟಗಾರಿಕೆ ಮತ್ತು ನೀರಾವರಿ ಇಲಾಖೆಗಳ ಸರ್ಕಾರಿ ಅಧಿಕಾರಿಗಳಿಗೆ ಗ್ರಾಮಗಳ ಹಂಚಿಕೆ. ಬೆಳೆ ಸಮೀಕ್ಷೆ ಚಟುವಟಿಕೆಯನ್ನು ನಡೆಸಲು ಪ್ರತಿ ಗ್ರಾಮಕ್ಕೂ ಖಾಸಗಿ ನಿವಾಸಿಗಳ ಗುರುತಿಸುವಿಕೆ ಹಾಗೂ ನೇಮಕದ ಮೇಲ್ವಿಚಾರಣೆ. ತಾಲ್ಲೂಕು ಮಟ್ಟದ ಮಾಸ್ಟರ್ ತರಬೇತುದಾರರ ಮೂಲಕ ಖಾಸಗಿ ನಿವಾಸಿಗಳಿಗೆ ತರಬೇತಿ. ಬೆಳೆ ಸಮೀಕ್ಷೆ ಕುರಿತು ಪ್ರಚಾರ ಮತ್ತು ಜಾಹೀರಾತು. ಪ್ರಗತಿಯ ಉಸ್ತುವಾರಿ ಹಾಗೂ ಮಾಹಿತಿ ಪ್ರಮಾಣಿಕರಿಸುವುದು.

ಕಂದಾಯ, ತೋಟಗಾರಿಕೆ, ರೇಷ್ಮೆ ಮತ್ತು ನೀರಾವರಿ ಇಲಾಖೆಗಳ ಪಾತ್ರ: ಬೆಳೆ ಸಮೀಕ್ಷೆಯ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ತಮ್ಮ ಇಲಾಖೆಯ ಎಲ್ಲಾ ಕ್ಷೇತ್ರ ಮಟ್ಟದ ಅಧಿಕಾರಿಗಳು/ ಸಿಬ್ಬಂದಿಗೆ ನಿರ್ದೇಶನಗಳನ್ನು ನೀಡುವ ಮೂಲಕ ಜಿಲ್ಲಾ ಆಡಳಿತಕ್ಕೆ ಸಹಾಯ ಮಾಡುವುದು. ಕೃಷಿ ಇಲಾಖೆಯು ನೋಡಲ್ ಇಲಾಖೆಯಾಗಿದ್ದು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯವು ದತ್ತಾಂಶವನ್ನು ಸಮನ್ವಯಗೊಳಿಸುವುದನ್ನು ಮುಂದುವರೆಸಿ, ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಮಿತಿಯ ಅನುಮೋದನೆಯನ್ನು ಪಡೆದು ಅಂತಿಮ ಮಾಹಿತಿ/ ದತ್ತಾಂಶವನ್ನು ಸಹಿ ಮಾಡುವುದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಒಟ್ಟಾರೆ ಯೋಜನೆಯ ಉಸ್ತುವಾರಿ ವಹಿಸಲಿದ್ದು, ಖಾಸಗಿ ನಿವಾಸಿಗಳು ಮತ್ತು ಯೋಜನೆಯ ದೈನಂದಿನ ಮೇಲ್ವಿಚಾರಣೆಯನ್ನು ಜಿಲ್ಲಾ ಮಟ್ಟದಲ್ಲಿ ಅಪರ ಜಿಲ್ಲಾಧಿಕರಿಗಳು ಮತ್ತು ಜಂಟಿ ಕೃಷಿ ನಿರ್ದೇಶಕರು ಹಾಗೂ ರಾಜ್ಯ ಮಟ್ಟದಲ್ಲಿ ಕೃಷಿ ಆಯುಕ್ತರು ವಹಿಸುವುದು.

2023-24ನೇ ಸಾಲಿನ ಪೂರ್ವ ಮುಂಗಾರು ಅಂಗಾಮಿನ ಬೆಳೆ ಸಮೀಕ್ಷೆ ಪ್ರಕಾರ 17127 ಅರ್ಜಿಗಳು ಸ್ವೀಕೃತವಾಗಿದ್ದು, 11004 ಸರ್ವೆ ಮಾಡಲಾಗಿದೆ. ಒಟ್ಟಾರೆ ಶೇ. 64.25 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ ಎಂದರು.

ನಂತರ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಮುಂಗಾರು-2023ರ ಪ್ರಚಾರದ ವಾಹನಕ್ಕೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಚಾಲನೆ ನೀಡಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರಾದ ರಾಮಕೃಷ್ಣ, ಕೃಷಿ ಉಪನಿರ್ದೇಶಕರಾದ ಉಮೇಶ್, ತೋಟಗಾರಿಕೆ ಉಪನಿರ್ದೇಶಕರಾದ ಮುನೇಗೌಡ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular