Saturday, April 19, 2025
Google search engine

Homeರಾಜ್ಯವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ: ಸಿಎಂ ಸಿದ್ದರಾಮಯ್ಯ ಚಾಲನೆ

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ: ಸಿಎಂ ಸಿದ್ದರಾಮಯ್ಯ ಚಾಲನೆ

ಮೈಸೂರು: ಇಂದು ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಬೆಳಗ್ಗೆ 8ಕ್ಕೆ ಚಾಮುಂಡಿ ಬೆಟ್ಟದಿಂದ ಉತ್ಸವ ಮೂರ್ತಿ ಮೆರವಣಿಗೆ ಮೂಲಕ ಅರಮನೆಗೆ ಆಗಮಿಸುತ್ತದೆ. ನಂತರ 10.15ಕ್ಕೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಉತ್ತರ ಪೂಜೆ ಮಾಡಲಿದ್ದಾರೆ. ಈ ವೇಳೆ ಅರಮನೆಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಸವಾರಿ ತೊಟ್ಟಿಗೆ ಆಗಮಿಸಲಿವೆ. ಬಳಿಕ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ 10.45ರಿಂದ ಬೆಳಗ್ಗೆ 11ರೊಳಗೆ ಜಟ್ಟಿ ಕಾಳಗ ನಡೆಯುತ್ತದೆ.

ನಂತರ 11.20 ರಿಂದ 11.45ರವರೆಗೆ ಅರಮನೆ ಅಂಗಳದ ಭುವನೇಶ್ವರಿ ದೇಗುಲಕ್ಕೆ ವಿಜಯಯಾತ್ರೆ ಸಾಗುತ್ತದೆ. ಇಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬನ್ನಿಪೂಜೆ ನೆರವೇರಿಸುತ್ತಾರೆ. ನಂತರ ಅರಮನೆಗೆ ಆಗಮಿಸಿ ಕಂಕಣ ವಿಸರ್ಜನೆ ಮಾಡುತ್ತಾರೆ.

ಮಧ್ಯಾಹ್ನ 1:41 ರಿಂದ 2:10ರವರೆಗೆ ಮಕರ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಪೂಜೆ ನೆರವೇರಿಸಲಿದ್ದಾರೆ. ಈ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯ ಎದುರು ನಂದಿಧ್ವಜಕ್ಕೆ ಪೂಜೆ ನೆರವೇರಿದ ಬಳಿಕ ವಿಜಯದಶಮಿ ಮೆರವಣಿಗೆ ಆರಂಭಗೊಳ್ಳಲಿದೆ. ನಂದಿ ಧ್ವಜದ ಹಿಂದೆ ನಿಶಾನೆ ಆನೆ, ಇನ್ನುಳಿದ ಕಲಾತಂಡಗಳು, ಸ್ತಬ್ಧಚಿತ್ರಗಳ ಸಾಗಲಿವೆ. 750 ಕೆಜಿ ತೂಕದ ಅಂಬಾರಿ ಒಳಗೆ ಪ್ರತಿಷ್ಠಾಪಿಸಲಾಗಿರುವ ತಾಯಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಅಭಿಮನ್ಯು ಆನೆ ರಾಜ ಗಾಂಭಿರ್ಯದಿಂದ ರಾಜಬೀದಿಗಳಲ್ಲಿ ಸಾಗುತ್ತಾನೆ.

ನಂದಿ ಧ್ವಜದ ಹರಡೆ, ಛತ್ರಿ ಕಳಸಗಳಿಗೆ ಪೂಜೆ ನಡೆಯಲಿದೆ. 9 ದಿನಗಳ ಪೂಜೆ ಬಳಿಕ ದಶಮಿಯಂದು ನಂದಿಧ್ವಜ ಜೋಡಣೆ ಮಾಡಲಾಗಿದೆ. ಬಳಿಕ ಕೋಟೆ ಆಂಜನೇಯಸ್ವಾಮಿ ದೇವಾಲಯಕ್ಕೆ ನಂದಿ ಕಂಬ ತರಲಾಗುತ್ತದೆ. ಈ ಮೆರವಣಿಗೆಯಲ್ಲಿ ಕಳೆದ 65 ವರ್ಷಗಳಿಂದ ಗೌರಿಶಂಕರ ನಗರದ ನಂದಿ ಧ್ವಜ, ವೀರಗಾಸೆ ತಂಡದವರು ಭಾಗಿಯಾಗುತ್ತಿದ್ದಾರೆ. ಉಡಿಗಾಲ ಮಹದೇವಸ್ವಾಮಿ ನೇತೃತ್ವದ ತಂಡದಿಂದ ನಂದಿ ಧ್ವಜ ಕುಣಿತ ನಡೆಯಲಿದೆ.

ಈ ಬಾರಿ ಜಿಲ್ಲಾಡಳಿತ ಜಂಬೂ ಸವಾರಿ ಮಾರ್ಗವನ್ನ ಬದಲಾವಣೆ ಮಾಡಿದೆ. ಅರಮನೆ ಆವರಣದಲ್ಲಿ ಜಂಬೂ ಸವಾರಿ ಮಾರ್ಗ ಬದಲಾವಣೆ ಮಾಡಿದ್ದು, ಹೊಸ ಸಂಪ್ರದಾಯ ಆರಂಭಿಸಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ.

ಪ್ರತಿ ಬಾರಿ ಅಂಬಾರಿ ಕಟ್ಟಿದ ನಂತರ ಆನೆ ನೇರವಾಗಿ ಪುಷ್ಪಾರ್ಚನೆಗೆ ಬಂದು ನಿಲ್ಲುತ್ತಿತ್ತು. ಆದ್ರೆ ಈ ಬಾರಿ ಪುಷ್ಪಾರ್ಚನೆಗೆ ಮೊದಲೇ ಸುಮಾರು 400 ಮೀಟರ್ ಸಂಚಾರ ಮಾಡುವಂತೆ ಪ್ಲಾನ್ ಮಾಡಲಾಗಿದೆ. ಅಂಬಾರಿ ಕಟ್ಟಿದ ನಂತರ ಅಭಿಮನ್ಯುವು ತ್ರಿನಯನೇಶ್ವರ ದೇವಸ್ಥಾನ ತಲುಪಿ, ಅಲ್ಲಿಂದ ಶ್ವೇತ ವರಹ ದೇವಸ್ಥಾನ ಬಳಿ ಸಾಗಿ ನಂತರ ಗಣ್ಯರ ಬಳಿ ಬಂದು ನಿಲ್ಲುತ್ತದೆ. ಹೀಗಾಗಿ ಗಣ್ಯರ ಪುಷ್ಪಾರ್ಚನೆಗೆ ಮುನ್ನವೇ 10 ಸಾವಿರಕ್ಕೂ ಹೆಚ್ಚು ಮಂದಿಗೆ ಅಂಬಾರಿಯಲ್ಲಿ ಅಲಂಕಾರ ಭೂಷಿತಳಾದ ತಾಯಿ ಚಾಮುಂಡಿ ದರ್ಶನ ಕೊಡಲಿದ್ದಾಳೆ.

40 ಸಾವಿರ ಆಸನಗಳ ವ್ಯವಸ್ಥೆ

ಜಂಬೂಸವಾರಿ ವೀಕ್ಷಿಸಲು ಅರಮನೆ ಅಂಗಳದಲ್ಲಿ 40 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇಂದು ವಿಶ್ವವಿಖ್ಯತ ಜಂಬೂಸವಾರಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಈ ಬಾರಿಯ ದಸರಾ ಮಹೋತ್ಸವಕ್ಕೆ ಎರಡು ಹಂತದ ಭದ್ರತೆ ಮಾಡಲಾಗಿದೆ. ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ದಸರಾ ಮಹೋತ್ಸವಕ್ಕೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿರುವ ನಾಲ್ಕ ಸಾವಿರಕ್ಕೂ ಹೆಚ್ಚು ಪೊಲೀಸರು ಕಾವಲು ಇದ್ದಾರೆ. ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗ ಸೇರಿದಂತೆ ಆಯಕಟ್ಟಿನ ಜನನಿಬಿಡ ಸ್ಥಳದಲ್ಲಿ ಸಿಸಿ ಕ್ಯಾಮರಾಗಳ ಅಳವಡಿಸಲಾಗಿದೆ.

RELATED ARTICLES
- Advertisment -
Google search engine

Most Popular