ಗುಂಡ್ಲುಪೇಟೆ: ಚಿರತೆ ದಾಳಿ ನಡೆಸಿ ಹಸುವೊಂದನ್ನು ಕೊಂದು ಹಾಕಿರುವ ಘಟನೆ ತಾಲೂಕಿನ ಶಿವಪುರ ಗ್ರಾಮದ ಹೊರ ವಲಯದ ಜಮೀನೊಂದರಲ್ಲಿ ಗುರುವಾರ ರಾತ್ರಿ ನಡೆದಿದೆ.
ಶಿವಪುರ ಗ್ರಾಮದ ಸಿದ್ದಪ್ಪ ಹಸು ಕಳೆದುಕೊಂಡ ರೈತ. ಇವರು ಜಮೀನಿನ ಕೊಟ್ಟಿಗೆಯಲ್ಲಿ ಗುರುವಾರ ರಾತ್ರಿ ಹಸುಗಳನ್ನು ಕಟ್ಟಿ ಹಾಕಿ ಮನೆಗೆ ಬಂದಿದ್ದರು. ಆಹಾರ ಅರಸಿ ಬಂದಿರುವ ಚಿರತೆ ದಾಳಿ ನಡೆಸಿ ಹಸುವನ್ನು ಕೊಂದು ತಿಂದಿದೆ. ಶುಕ್ರವಾರ ಬೆಳಗ್ಗೆ ಜಮೀನಿಗೆ ಹೋದಾಗ ಘಟನೆಯ ಬಗ್ಗೆ ತಿಳಿದಿದೆ. ಹೆಜ್ಜೆ ಗುರುತುಗಳ ಹಿನ್ನೆಲೆಯಲ್ಲಿ ಚಿರತೆ ದಾಳಿ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿರತೆ ದಾಳಿಗೆ ಹಸು ಸಾವನ್ನಪ್ಪಿರುವ ಘಟನೆ ಮಾಹಿತಿ ಅರಿತ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಸು ಕಳೆದುಕೊಂಡ ರೈತರಿಗೆ ಸೂಕ್ತ ನೆರವು ದೊರಕಿಸುವ ಭರವಸೆ ನೀಡಿದ್ದಾರೆ.
ಚಿರತೆ ದಾಳಿಗೆ ಕಡಿವಾಣ ಹಾಕಿ: ಶಿವಪುರ ಗ್ರಾಮದ ಸುತ್ತಮುತ್ತಲು ಚಿರತೆ ಹಾವಳಿ ಹೆಚ್ಚಿದ್ದು, ಆಗಾಗ್ಗ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿವೆ. ಇದರಿಂದ ರೈತರು ಜಮೀನುಗಳಿಗೆ ಹೋಗಲು ಭಯಪಡಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಅರಣ್ಯಾಧಿಕಾರಿಗಳು ಕೂಡಲೇ ಬೋನ್ ಇರಿಸಿ ಚಿರತೆ ಸೆರೆ ಹಿಡಿಯುವಂತೆ ರೈತರು ಒತ್ತಾಯಿಸಿದ್ದಾರೆ.