Wednesday, April 23, 2025
Google search engine

Homeರಾಜ್ಯಸುದ್ದಿಜಾಲಪ್ರತಿಭೆ ವಿಕಸನವಾಗಿ ಉತ್ತಮ ಶಿಕ್ಷಣ ಪಡೆಯಲು ಖಾಸಗಿ ಸಂಸ್ಥೆಗಳ ಅವಶ್ಯಕತೆ ಇಲ್ಲ: ಶ್ರೀ ಶಿವರಾತ್ರಿದೇಶಿ ಕೇಂದ್ರ...

ಪ್ರತಿಭೆ ವಿಕಸನವಾಗಿ ಉತ್ತಮ ಶಿಕ್ಷಣ ಪಡೆಯಲು ಖಾಸಗಿ ಸಂಸ್ಥೆಗಳ ಅವಶ್ಯಕತೆ ಇಲ್ಲ: ಶ್ರೀ ಶಿವರಾತ್ರಿದೇಶಿ ಕೇಂದ್ರ ಸ್ವಾಮೀಜಿ

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಪ್ರತಿಭೆ ವಿಕಸನವಾಗಿ ಉತ್ತಮ ಶಿಕ್ಷಣ ಪಡೆಯಲು ಖಾಸಗಿ ಸಂಸ್ಥೆಗಳ ಅವಶ್ಯಕತೆ ಬೇಕಾಗಿಲ್ಲ ಅದರ ಬದಲಿಗೆ ಓದುವ ಛಲ ಮತ್ತು ಹಂಬಲ ಇರಬೇಕು ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿ ಕೇಂದ್ರ ಸ್ವಾಮೀಜಿ ಹೇಳಿದರು. ಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಮದ ಚಾಮುಂಡೇಶ್ವರಿ ಕಲ್ಯಾಣ ಮಂಟಪ ದಲ್ಲಿ ಭಾನುವಾರ ನಡೆದ ಮೈಸೂರು-ಚಾಮರಾಜನಗರ ವೀರಶೈವ ಲಿಂಗಾಯಿತ ಮಠಾಧಿಪತಿಗಳ ಗೋಷ್ಠಿ, ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳ 109 ನೇ ಜಯಂತಿ, ಪ್ರತಿಭಾ ಪುರಸ್ಕಾರ ಮತ್ತು ಲಿಂಗದೀಕ್ಷಾ ಸಂಸ್ಕಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಓದಿದವರುಉನ್ನತ ಸ್ಥಾನ ಅಲಂಕರಿಸಿದ್ದು ಅವರು ಎಲ್ಲರಿಗೂ ಮಾದರಿಯಾಗಿರುವುದರಿಂದ ವಿದ್ಯಾರ್ಥಿಗಳು ಇದನ್ನು ಅರಿತು ಕಠಿಣ ಪರಿಶ್ರಮದ ಮೂಲಕ ಕಲಿತು ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಸಿದ್ದಗಂಗಾ ಮಠಾದೀಶರಾಗಿದ್ದ ಡಾ.ಶಿವಕುಮಾರಸ್ವಾಮೀಜಿ ಮತ್ತು ಸುತ್ತೂರು ಮಠದ ಡಾ.ರಾಜೇಂದ್ರ ಮಹಾಸ್ವಾಮಿಗಳು ಒಂದೇ ಅತ್ಮ ಎರಡು ದೇಹಗಳಂತೆ ಇದ್ದು ಮಠಗಳ ಏಳಿಗೆ ಮತ್ತು ಸಮಾಜ ಮುಖಿ ಕೆಲಸ ಮಾಡಿದ ಮಹಾನ್ ಪುರುಷರು ಎಂದು ಬಣ್ಣಿಸಿದರು.

ರಾಜೇಂದ್ರ ಶ್ರೀಗಳು 60 ವರ್ಷದ ಹಿಂದೆ ಹಳ್ಳಿಗಳಿಗೆ ತೆರಳಿ ಧವಸ ಧಾನ್ಯ ಸಂಗ್ರಹಿಸಿ ಆ ಮೂಲಕ ಅನಾಥಾಲಯ ಮತ್ತು ವಿದ್ಯಾರ್ಥಿ ನಿಲಯಗಳನ್ನು ಆರಂಬಿಸಿ ಆರ್ಥಿಕವಾಗಿ ಹಿಂದುಳಿದವರು ಮತ್ತು ಬಡವರ ಪಾಲಿನ ದೈವವಾಗಿದ್ದರೆಂದು ತಿಳಿಸಿದರು. ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸಮಾಜ ಸೇವೆ ಮತ್ತು ಶೈಕ್ಷಣಿಕ ಕ್ರಾಂತಿ ದೇಶದ ಇತರ ಮಠಗಳಿಗೆ ಮಾದರಿಯಾಗಿದೆಯಲ್ಲದೆ ಅವರ ಅಕ್ಷರ ಹಾಗೂ ಅನ್ನ ದಾಸೋಹ ಪರಂಪರೆ ಅನುಕರಣೀಯ ಎಂದರು.

ಶಾಸಕ ಡಿ.ರವಿಶಂಕರ್ ಮಾತನಾಡಿ ನಾಡಿನ ಶೈಕ್ಷಣಿಕ ಮತ್ತು ಸಾಮಾಜಿಕ ಏಳಿಗೆಯಲ್ಲಿ ಸುತ್ತೂರು ಮಠದ ಕೊಡುಗೆ ಅಪಾರವಾಗಿದ್ದು ವಿಶ್ವದ ಭೂಪಟದಲ್ಲಿ ಆ ಸಾಧನೆ ಅಚ್ಚಳಿಯದೆ ಉಳಿಯಲಿದೆ ಎಂದು ಹೇಳಿದರು. ಈ ಮಠದಲ್ಲಿ ಕಲಿತವರು ದೇಶ ವಿದೇಶಗಳಲ್ಲಿ ಹೆಸರು ಮಾಡಿ ಆಭಿವೃದ್ದಿಗೆ ಅಪಾರ ಕೊಡುಗೆ ನೀಡುತ್ತಿದ್ದು ಇಂತಹ ಉತ್ತಮ ಕೆಲಸ ಮಾಡುತ್ತಿರುವ ಸುತ್ತೂರು ಮಠ ನಮ್ಮ ಜಿಲ್ಲೆಯಲ್ಲಿ ಇರುವುದು ಎಲ್ಲರ ಹೆಮ್ಮೆ ಎಂದರು.

ಕೆ.ಆರ್.ನಗರ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಬಸವ ಭವನದ ಮುಂದುವರಿದ ಕಾಮಗಾರಿಗೆ ಅಗತ್ಯವಿರುವ ಅನುಧಾನ ಸರ್ಕಾರದಿಂದ ಕೊಡಿಸುವ ಕೆಲಸ ಮಾಡುವುದರೊಂದಿಗೆ ವೈಯುಕ್ತಿಕವಾಗಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಜಗಜ್ಯೋತಿ ಬಸವೇಶ್ವರರ ತತ್ವ ಮತ್ತು ಸಿದ್ದಾಂತಗಳನ್ನು ಪಾಲಿಸಿದ ರಾಜೇಂದ್ರ ಸ್ವಾಮಿಗಳು ಮಠದ ಘನತೆಯನ್ನು ಮುಗಿಲೆತ್ತರಕ್ಕೆ ಏರಿಸಿದ್ದು ಶಿಕ್ಷಣ ಕ್ರಾಂತಿ ಮಾಡಿದ್ದರು ಈಗ ಆ ಪರಂಪರೆಯನ್ನು ಮುಂದುವರಿಸುತ್ತಿರುವ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ನಮಗೆ ಆದರ್ಶಪ್ರಾಯ ಎಂದು ನುಡಿದರು.

ಕೆ.ಆರ್.ನಗರ ತಾಲೂಕು ಕೇಂದ್ರದಿಂದ ಸಿದ್ದಗಂಗಾ ಮಠಕ್ಕೆ ನಿತ್ಯ ಮುಂಜಾನೆ ಸಾರಿಗೆ ಬಸ್ ಸಂಚಾರದ ವ್ಯವಸ್ಥೆ ಕಲ್ಪಿಸುವುದಾಗಿ ಪ್ರಕಟಿಸಿದರು. ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತಾಡಿ. ಸುತ್ತೂರು ಮಠದಲ್ಲಿ ಕಲಿತವರು ಅಕ್ಷರದ ಜತೆಗೆ ಸಂಸ್ಕಾರವನ್ನು ಕಲಿಯಲಿದ್ದು ಇದು ಆ ಮಠದ ಹೆಗ್ಗಳಿಕೆ ಎಂದರು. ರಾಜ ಗುರು ತಿಲಕರಾಗಿದ್ದ ಪರಮಪೂಜ್ಯ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಜಾತ್ಯಾತೀತವಾಗಿ ಪ್ರತಿಯೊಬ್ಬರನ್ನು ಕಂಡು ಮಠದಲ್ಲಿ ಅಕ್ಷರ, ಆರೋಗ್ಯ ಮತ್ತು ದಾಸೋಹ ಪರಂಪರೆಯನ್ನು ಆರಂಬಿಸಿ ನಾಡಿಗೆ ಬೆಳಕಾದ ಮಹಾನ್ ಪುರುಷ ಎಂದರು.

ಮಠದಲ್ಲಿ ಕಲಿಯುವ ಮಕ್ಕಳ ಹಸಿವಿನಿಂದ ಇರಬಾರದು ಎಂದು ಸಂಕಷ್ಠದ ಕಾಲದಲ್ಲಿಯೂ ಜೋಳಿಗೆಯ ಮೂಲಕ ಬೇಡಿ ಅವರ ಹಸಿವು ನೀಗಿಸಿ ಅಕ್ಷರದ ಜತೆಗೆ ಅನ್ನವನ್ನು ನೀಡಿದ ಅವರು ದೈವಾಂಶ ಸಂಭೂತ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ರಾಜೇಂದ್ರ ಶ್ರೀಗಳ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿರುವ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಮಠದ ಘನತೆ ಮತ್ತು ಗೌರವವನ್ನು ಜಗದಗಲಕ್ಕೆ ವಿಸ್ತರಣೆ ಮಾಡುತ್ತಿದ್ದು ಅವರ ಆಶೀರ್ವಚನ ಹಾಗೂ ಮಾರ್ಗದರ್ಶನ ನಮಗೆ ಅತ್ಯಂತ ಅಗತ್ಯ ಎಂದರು.

ತುಮಕೂರಿನ ಸಿದ್ದಗಂಗಾ ಮಠಾದೀಶರಾಗಿದ್ದ ಕಾಯಕ ದಾಸೋಹಿ ಡಾ. ಶಿವಕುಮಾರ ಶ್ತೀಗಳು ಮಾನವ ಕುಲದ ಮೇರು ಪರ್ವತವಾಗಿದ್ದರಲ್ಲದೆ ತಮ್ಮ ಜೀವನವನ್ನು ಬಡವರು ಮತ್ತು ನೊಂದವರ ಏಳಿಗೆಗಾಗಿ ಸವೆಸಿದ ಅಭಿನವ ಬಸವಣ್ಣ ಎಂದು ಕೊಂಡಾಡಿದರು.

ತುಮಕೂರು ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಮಹಾಸ್ವಾಮೀಜಿ, ಸಿದ್ದಗಂಗಾ ಭಕ್ತರ ಬಳಗದ ಅಧ್ಯಕ್ಷ ಸಿ.ಪಿ.ರಮೇಶ್ ಕುಮಾರ್, ಮಾತನಾಡಿದರು. ಈ ಸಂದರ್ಭದಲ್ಲಿ 109 ಮಂದಿಗೆ ಲಿಂಗದೀಕ್ಷೆ ಮಾಡಲಾಯಿತಲ್ಲದೆ ವೀರಶೈವ ಲಿಂಗಾಯಿತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡಲಾಯಿತು.

ಬೆಟ್ಟದ ಪುರ ಸಲಿಲಾಖ್ಯ ಮಠದ ಚನ್ನಬಸವದೇಶಿಕೇಂದ್ರ ಸ್ವಾಮೀಜಿ, ಕರ್ಪೂರವಳ್ಳಿ ಮಠದ ಚಂದ್ರಶೇಖರಶಿವಾಚಾರ್ಯ ಸ್ವಾಮೀಜಿ, ಅರಕೆರೆ ವಿರಕ್ತ ಮಠದ ಸಿದ್ದೇಶ್ವರಸ್ವಾಮೀಜಿ, ಹಾಡ್ಯ ಈಶಾನ್ಯೇಶ್ವರ ಮಠದ ಬಸವರಾಜಶ್ರೀಗಳು, ಉದ್ಯಮಿ ಪಂಚಾಕ್ಷರಿ, ಸಿದ್ದಗಂಗಾ ಭಕ್ತರ ಬಳಗದ ಪದಾಧಿಕಾರಿಗಳು, ಕುಂದೂರು ಮಠದ ಡಾ.ಶರತ್ ಚಂದ್ರ ಸ್ವಾಮೀಜಿ, ಕೊಳೆಗಾಲ ಮುಡಿಗುಂಡ ಮಠದ ಶ್ರೀಕಂಠ ಸ್ವಾಮಿ, ಹರವೆ ಮಠದ ಸರ್ಪಭೂಷಣ ಶ್ರೀ ಗಳು, ನೀಲಕಂಠ ಸ್ವಾಮಿ ಮಠದ ಸಿದ್ದಮಲ್ಲಸ್ವಾಮೀಜಿ, ಚಿಲಕವಾಡಿ ಮಠದ ಬಾಲ ಷಡಕ್ಷರಸ್ವಾಮೀಜಿ, ಎಲೆಮುದ್ದನಹಳ್ಳಿ ಮಠದ ಮಲೇಶ ಸ್ವಾಮೀಜಿ, ತಣ್ಣೀರು ಹಳ್ಳ ಮಠದ ವಿಜಯಕುಮಾರಸ್ವಾಮೀಜಿ ಸೇರಿದಂತೆ ಇತರ ಮಠಗಳ ಹರ ಗುರು ಚರ ಮೂರ್ತಿಗಳು ಮತ್ತು ನೂರಾರು ಭಕ್ತಾದಿಗಳು ಇದ್ದರು.

RELATED ARTICLES
- Advertisment -
Google search engine

Most Popular