ಮೈಸೂರು: ವಾತಾವರಣಜ ಬದಲಾವಣೆ, ಮಳೆ ವೈಪರಿತ್ಯ ಎದುರಿಸಿ ನಿಲ್ಲುವ ಸಾಮರ್ಥ್ಯವಿರುವ ಹಲಸು ಬಯಲು ಸೀಮೆಯ ಕಲ್ಪವೃP. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಹಲಸಿನ ಬಳಕೆಗೆ ಒತ್ತುಕೊಡುವುದರ ಮೂಲಕ ಗ್ರಾಹಕರು ಹಲಸನ್ನು ಮುಖ್ಯವಾಹಿನಿಗೆ ತರಬಹುದಾಗಿದೆ ಎಂದು ಸಹಜ ಕೃಷಿಕ ಮತ್ತು ಹಲಸು ಬೆಳೆಗಾರ ಎಂ.ಕೆ.ಕೈಲಾಸಮೂರ್ತಿ ಅಭಿಪ್ರಾಯಪಟ್ಟರು.
ಸಹಜ ಸಮೃದ್ಧ ಸಹಯೋಗದಲ್ಲಿ ನೆಕ್ಸಸ್ ಸೆಂಟರ್ ಸಿಟಿ ಮಾಲನಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಹಲಸಿನ ಹಬ್ಬಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಹಲಸು ಪೋಷಕಾಂಶಗಳ ಆಗರ. ವಿಟಮಿನ್, ಖನಿಜಾಂಶ ಮತ್ತು ನಾರಿನಿಂದ ಹಲಸು ಸಮೃದ್ಧವಾಗಿದೆ. ಎಳೆಯ ಹಲಸು ಮಧುಮೇಹ, ಮಲಬದ್ಧತೆ ದೂರವಿಡುತ್ತದೆ. ಹಲಸಿನಿಂದ ಅನೇಕ ಬಗೆಯ ಅಡುಗೆಗಳನ್ನು ಮಾಡಬಹುದು. ಎಳೆಯ ಕಾಯಿಯಿಂದ ತೊಳೆ ಬಿಡಿಸಿದ ಬೀಜದವರೆಗೆ ತಿನ್ನಲು ಬರುತ್ತದೆ. ಇದರ ಘಮಲು ನಮ್ಮ ಮನೆಗಳಲ್ಲಿ ಹರಡಬೇಕು ಎಂದರು. ಇದೇ ವೇಳೆ ಹಲಸಿನ ಪಾಕ ಪ್ರವೀಣೆ ಮಂಗಳಾ ಪ್ರಕಾಶ್ ಹಲಸಿನ ಅಡುಗೆ ಪುಸ್ತಕ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿ, ಹಲಸಿನ ಸಿಪ್ಪೆ, ಎಳೆಯ ಕಾಯಿ, ಹಣ್ಣು, ಬೀಜದಿಂದ ಹತ್ತಾರು ಬಗೆಯ ಸ್ವಾದಿಷ್ಟ ಅಡುಗೆಗಳನ್ನು ಮಾಡಬಹುದು. ಹಲಸಿನ ಬೀಜದಿಂದ ರುಚಿಕರ ಚಾಕಲೇಟ್, ಮಾಲ್ಟ್ ಮಾಡಲು ಅವಕಾಶವಿದೆ. ನಗರದ ಗ್ರಾಹಕರು ಹಲಸನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ರೈತರಿಗೆ ನೆರವಾಗಬಹುದು. ಗ್ರಾಹಕರು ಮತ್ತು ರೈತರನ್ನು ಬೆಸೆಯುವ ಹಲಸಿನ ಹಬ್ಬದಂತ ಮೇಳಗಳು ನಗರದ ವಿವಿಧ ಬಡಾವಣೆಗಳಲ್ಲಿ ನಡೆಯಬೇಕು ಎಂದರು. ಸಹಜ ಸಮೃದ್ಧದ ನಿರ್ದೇಶಕ ಜಿ.ಕೃಷ್ಣಪ್ರಸಾದ್ ಮಾತನಾಡಿ, ಬೀದಿ ಬದಿಯ ಹಣ್ಣು ಎನಿಸಿದ ಹಲಸಿನ ಬಗ್ಗೆ ನಮ್ಮದು ಸದಾ ನಿರ್ಲಕ್ಯ. ಮಳೆಯ ಕಣ್ಣಾ ಮುಚ್ಚಲೆ ರೈತರನ್ನು ಕಂಗೆಡಿಸಿದೆ. ಇಂಥ ಪರಿಸ್ಥಿತಿಯಲ್ಲಿ ಹಲಸಿನ ಕೃಷಿ ಬಯಲು ಸೀಮೆಯ ರೈತರ ಆಶಾಕಿರಣವಾಗಿದೆ ಎಂದರು. ನೆಕ್ಸಸ್ ಸಿಟಿ ಸೆಂಟರ್‌ನ ಕಾರ್ಯಾಚರಣೆ ಮುಖ್ಯಸ್ಥ ಎಂ.ಎಸ್.ಮೋಹನ್ ಕುಮಾರ ಇದ್ದರು.
ಹಲಸಿನ ಹೋಳಿಗೆ ಆಕರ್ಷಣೆ: ಹಲಸಿನ ಹಬ್ಬದಲ್ಲಿ ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿಯ ಹಣ್ಣುಗಳು ತಿನ್ನಲು ಮತ್ತು ಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹಲಸಿನ ಐಸ್ ಕ್ರೀಂ, ಚಿಪ್ಸ, ಚಾಕೋಲೇಟ್, ಹಪ್ಪಳ, ಹಲ್ವ, ಕಬಾಬ್, ವಡೆ, ದೋಸೆ , ಪಲ್ಯ , ಬಿರಿಯಾನಿ ಮೊದಲಾದ ಹಲಸಿನ ಅಡುಗೆಗಳು ಲಭ್ಯ ಇವೆ. ಹಲಸು ಹಚ್ಚುವ ಯಂತ್ರವೂ ಇದೆ. ಹಲಸಿನ ಹೋಳಿಗೆ ಘಮಲು ಜನರನ್ನು ಸೆಳೆಯುತ್ತಿದೆ. ರುದ್ರಾಕ್ಷಿ ಬಕ್ಕೆ, ಸಿಂಧೂರ, ಸರ್ವಋತು, ಗಮ್ ಲೆಸ್, ನಾಗಚಂದ್ರ, ರಾಮಚಂದ್ರ ಮೊದಲಾದ ಹಲಸಿನ ತಳಿಗಳು ಲಭ್ಯ ಇವೆ. ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕು ಪ್ರಾಧಿಕಾರದಲ್ಲಿ ನೋಂದಣಿಯಾಗಿರುವ ಕರ್ನಾಟಕ ರಾಜ್ಯದ ಮೊದಲ ಕೆಂಪು ಹಲಸಿನ ತಳಿಗಳಾದ ಸಿದ್ದು ಹಲಸು ಮತ್ತು ಶಂಕರ ಗಿಡಗಳು ದೊರೆಯುತ್ತಿವೆ.
ರಾಜ್ಯದ ವಿವಿಧ ಭಾಗಗಳಿಂದ ಬರುವ ೧೨ ಗ್ರಾಮೀಣ ಉದ್ದಿಮೆದಾರರು, ರೈತ ಕಂಪನಿಗಳು, ರೈತ ಮತ್ತು ಮಹಿಳಾ ಗುಂಪುಗಳು ಹಲಸಿನ ಮೌಲ್ಯವರ್ಧಿತ ಪದಾರ್ಥಗಳು, ಸಿರಿಧಾನ್ಯ, ಸಾವಯವ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳನ್ನು ಮಾರಾಟಕ್ಕೆ ತಂದಿದ್ದಾರೆ. ಹಲಸಿನ ಹಬ್ಬವು ಜುಲೈ ೧೬ ರವರೆಗೆ ನಡೆಯಲಿದೆ. ೧೬ರಂದು ಬೆಳಗ್ಗೆ ೧೦.೩೦ರಿಂದ ಮಧ್ಯಾಹ್ನ ೧೨ರ ವರೆಗೆ ೫-೧೨ ವಯಸ್ಸಿನ ಮಕ್ಕಳಿಗೆ ನಾ ಕಂಡಂತೆ ಹಲಸು ಚಿತ್ರಕಲಾ ಸ್ಪರ್ಧೆ ಇದೆ. ಶನಿವಾರ ಮತ್ತು ಭಾನುವಾರ ಸಂಜೆ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಏರ್ಪಡಿಸಲಾಗಿದೆ. ನಿಗದಿತ ಸಮಯದಲ್ಲಿ ಹೆಚ್ಚು ಹಲಸಿನ ಹಣ್ಣಿನ ತೊಳೆ ತಿಂದವರನ್ನು ವಿಜೇತರಾಗಿ ಘೋಷಿಸಿ, ಬಹುಮಾನ ನೀಡಲಾಗುತ್ತದೆ. ಹಲಸನ್ನು ಎತ್ತುವ ಸ್ಪರ್ಧೆ ಮತ್ತು ಹಲಸಿನ ತೂಕ ಅಂದಾಜಿಸುವ ಸ್ಪರ್ಧೆಗಳು ಇರಲಿವೆ.