ಚಿಂತಾಮಣಿ: ಚಿಂತಾಮಣಿ-ಮದನಪಲ್ಲಿ ರಸ್ತೆಯಲ್ಲಿ ದಂಡುಪಾಳ್ಯ ಗೇಟ್ ಬಳಿ ಬುಧವಾರ ಬೊಲೆರೋ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದ ಹಿಂಬದಿ ಕುಳಿತಿದ್ದ ಮಹಿಳೆ ಸ್ಥಳದಲ್ಲೆ ಮೃಪಟ್ಟಿದ್ದು, ಸವಾರ ತೀವ್ರವಾಗಿ ಗಾಯಗೊಂಡಿದ್ದಾನೆ.
ಬೊಲೆರೋ ವಾಹನದಲ್ಲಿದ್ದವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ತರನ್ನುಂ(೨೨) ಮೃತಪಟ್ಟ ಮಹಿಳೆ, ಆಕೆಯ ಪತಿ ಆಯಾಜ್ ಗಾಯಾಳುವಾಗಿದ್ದಾನೆ. ಬೊಲೆರೋ ವಾಹನದಲ್ಲಿದ್ದ ಆಂಧ್ರಪ್ರದೇಶದ ಕದರಿ ಪಟ್ಟಣದ ಫಕ್ರುದ್ದೀನ್, ಅಜಾದ್, ಜಬೀನಾ, ಹಮೀದ್, ಶೋಯಬ್, ಸಲೀಂ, ಶಕೀರಾ ಸಣ್ಣಪುಟ್ಟ ಗಾಯಗಳಾಗಿವೆ.
ಮುರುಗಮಲ್ಲ ಗ್ರಾಮದ ಆಯಾಜ್ ಮತ್ತು ತರನ್ನುಂ ದ್ವಿಚಕ್ರವಾಹನದಲ್ಲಿ ಬೇತಮಂಗಲ ಕಡೆಗೆ ಹೋಗುತ್ತಿದ್ದರು. ಆಂಧ್ರಪ್ರದೇಶದ ಕದಿರಿ ಮೂಲದ ಬೊಲೆರೋ ಚಿಂತಾಮಣಿ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದು, ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರವಾಹನ ರಸ್ತೆಯಿಂದ ದೂರದಲ್ಲಿ ಮುಗುಚಿಬಿದ್ದಿದೆ.
ದ್ವಿಚಕ್ರವಾಹನದ ಹಿಂದೆ ಕುಳಿತಿದ್ದ ಪತ್ನಿ ತರನ್ನುಂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಾಹನದ ಚಾಲನೆ ಮಾಡುತ್ತಿದ್ದ ಪತಿ ಆಯಾಜ್ ತಲೆ, ಕೈಕಾಲುಗಳು ಹೆಚ್ಚಿನ ಪೆಟ್ಟಾಗಿದೆ. ಬೊಲೆರೋ ವಾಹನದಲ್ಲಿದ್ದವರಿಗೆ ಯಾರಿಗೂ ಹೆಚ್ಚಿನ ಗಾಯಗಳಾಗಿಲ್ಲ.
ಗಾಯಾಳುಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಮೃತ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ದ್ವಿಚಕ್ರವಾಹನ ಸವಾರ ಆಯಾಜ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ರವಾನಿಸಲಾಗಿದೆ. ಬೊಲೆರೋ ವಾಹನದಲ್ಲಿದ್ದ ಗಾಯಾಳುಗಳು ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಕೆಂಚಾರ್ಲಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ