ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿ ನಾಯಕರ ಸಮುದಾಯ ಭವನ ನಿರ್ಮಾಣ ಮಾಡಲು
ನಿವೇಶನ ಕೊಡಿಸಿ, ಸರ್ಕಾರದಿಂದ ೧ ಕೋಟಿ ಅನುದಾನ ಮಂಜೂರು ಮಾಡಿಸಿ ಭವನ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಮತ್ತು ನಾಯಕರ ಸಂಘದ ವತಿಯಿಂದ ಗುರುವಾರ ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೆ.ಆರ್.ನಗರ ಪಟ್ಟಣದಲ್ಲಿರುವ ವಾಲ್ಮೀಕಿ
ನಾಯಕರ ಸಮುದಾಯ ಭವನದ ಆವರಣದಲ್ಲಿ ದೇವಾಲಯ ನಿರ್ಮಾಣ ಮಾಡಬೇಕೆಂಬ ಸಮಾಜದವರ
ಬೇಡಿಕೆಯಿದ್ದು ದೇವಸ್ಥಾನ ನಿರ್ಮಾಣ ಮಾಡಲು ೫ ಲಕ್ಷ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದ
ಶಾಸಕರು ಸದಾ ಸಮುದಾಯದವರ ಅಭಿವೃದ್ದಿಗಾಗಿ ದುಡಿಯುತ್ತೇನೆ ಎಂದರು.
೨೦೧೩ರಿಂದ ೨೦೧೮ವರೆಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಅಧಿಕಾರವಧಿಯಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ವಿವಿಧ ಗ್ರಾಮಗಳಿಗೆ ೧೭ ಸಮುದಾಯ ಭವನ ನಿರ್ಮಾಣ ಮಾಡಲು ಅನುದಾನ ಮಂಜೂರು ಮಾಡಿಸಲಾಗಿತ್ತು, ಅನುದಾನದ ಕೊರತೆಯಿಂದ ಕೆಲವು ಅಪೂರ್ಣಗೊಂಡಿದ್ದು ಇವುಗಳನ್ನು ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಮಹರ್ಷಿ ವಾಲ್ಮೀಕಿಯವರ ಪುತ್ಥಳಿ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿ ೧.೫ ಕೋಟಿ ಹಣ ಬಿಡುಗಡೆ ಮಾಡಿದೆ ಇದು ಕಾಂಗ್ರೆಸ್ ಸರ್ಕಾರ ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಎಂದು ನುಡಿದರು. ಸಮಸ್ತ ಹಿಂದೂಗಳ ಆರಾಧ್ಯ ದೈವವಾಗಿರುವ
ಮರ್ಯಾದ ಪುರುಷ ಶ್ರೀರಾಮದೇವರನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ
ತಲುತ್ತದೆ ಇಂತಹಾ ಸರ್ವತ್ರ ಪೂಜ್ಯನೀಯರು ದೇಶದ ಎಲ್ಲರೂ ಪೂಜ್ಯ ಮನೋಭಾವನೆಯಿಂದ ಕಾಣುವುದರ ಜತೆಗೆ ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜಅರಸು ಅಧಿಕಾರವಧಿಯಲ್ಲಿ ಜಿ.ಎಲ್.ಹಾವನೂರ ಆಯೋಗ ರಚಿಸಿ ಆ ಮೂಲಕ ಹಿಂದುಳಿದ ವರ್ಗದವರಿಗೆ ಎಲ್ಲಾ
ಕ್ಷೇತ್ರಗಳಲ್ಲೂ ಅವಕಾಶ ನೀಡಿ ಆರ್ಥಿಕವಾಗಿ ದುರ್ಬಲರಾಗಿದ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ
ಆರಂಭಿಸಿ ಆ ಮೂಲಕ ಅವರ ಶೈಕ್ಷಣಿಕ ಬದುಕಿಗೆ ಆಸರೆಯಾಗಿದ್ದರೆಂದು ತಿಳಿಸಿದರು.
೧೯೯೧ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ.ದೇವೇಗೌಡರು ಅಂದಿನ ಪ್ರಧಾನ ಮಂತ್ರಿ ಚಂದ್ರಶೇಖರ್ ಅವರಿಗೆ ಶಿಪಾರಸ್ಸು ಮಾಡಿ ನಾಯಕ ಸಮಾಜವನ್ನು ಎಸ್ ಟಿ ವರ್ಗಕ್ಕೆ ಸೇರಿಸಿದ್ದರು ಇದನ್ನು ಸಮಾಜದ ಬಂಧುಗಳು ನೆನೆಯಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಸಂದೇಶ್, ಪುರಸಭೆ ಸದಸ್ಯರಾದ ನಟರಾಜು, ಕೆ.ಎಸ್.ಶಂಕರ್ ಮತ್ತು ಸಿ.ಶಂಕರ್ ಅವರುಗಳಿಗೆ ವಾಲ್ಮೀಕಿಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತಲ್ಲದೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಶಿಕ್ಷಕ ಅಭಿಲಾಷನಾಯಕ ಉಪನ್ಯಾಸ ನೀಡಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ಜಿ.ಪಂ.ಮಾಜಿ ಸದಸ್ಯ ಜಿ.ಆರ್.ರಾಮೇಗೌಡ, ಪುರಸಭಾ ಸದಸ್ಯರಾದ ಶಿವುನಾಯಕ್, ಕೋಳಿಪ್ರಕಾಶ್, ಮಾಜಿ ಸದಸ್ಯ ಕೆ.ವಿನಯ್, ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ನರಸಿಂಹನಾಯಕ, ತಹಸೀಲ್ದಾರ್‌ಗಳಾದ ಜಿ.ಸುರೇಂದ್ರಮೂರ್ತಿ, ಎನ್.ನರಗುಂದ್, ಪುರಸಭಾ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಬಿಇಒ ಆರ್.ಕೃಷ್ಣಪ್ಪ, ಸಮಾಜ ಕಲ್ಯಾಣಾಧಿಕಾರಿ ಹೆಚ್.ಎಲ್.ಶಂಕರಮೂರ್ತಿ, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಸಿ.ಸಿ.ಮಹದೇವ್, ರಾಜ್ಯ ನಾಯಕ ಸಮಾಜದ ಮುಖಂಡ ತಿಪ್ಪೂರು ಮಹದೇವನಾಯಕ ಮತ್ತಿತರರು ಇದ್ದರು.