ಬೆಂಗಳೂರು: ಪಕ್ಷದ ಹಿತದೃಷ್ಟಿ, ಪ್ರಸ್ತುತ ರಾಜಕೀಯ ಹಿತದೃಷ್ಟಿ ಹಾಗೂ ಕ್ಷೇತ್ರದ ದೃಷ್ಟಿಯಿಂದ ನನ್ನ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಲು ನಿರ್ಧಾರ ಕೈಗೊಂಡಿರುವುದಾಗಿ ಹೈಕಮಾಂಡ್ ನಾಯಕರು ತಿಳಿಸಿದ್ದಾರೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಗ್ಗಾಂವಿ ಕ್ಷೇತ್ರಕ್ಕೆ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ಮನಸಲ್ಲಿ ಏನೇ ಇದ್ದರೂ ಪಕ್ಷಕ್ಕಾಗಿ, ಸಮಾಜಕ್ಕಾಗಿ, ಕಾರ್ಯಕರ್ತರಿಗಾಗಿ ಪಕ್ಷದ ತೀರ್ಮಾನಕ್ಕೆ ತಲೆ ಬಾಗುತ್ತೇನೆ. ನಾನು ಎರಡು ದಿನ ಸಮಯ ಕೇಳಿದ್ದೆ, ಆದರೆ, ಸಮಯ ಕೊಡದೇ ಘೋಷಣೆ ಮಾಡಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನನಗೆ ಮಾತನಾಡಲು ಅವಕಾಶವೇ ನೀಡಲಿಲ್ಲ. ನಿಮ್ಮ ಮಗನಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದೇವೆ.
ಅಲ್ಲದೆ ಸ್ಥಳೀಯವಾಗಿ ಪಕ್ಷದ ಕಾರ್ಯಕರ್ತರು ಸಹ ತಮ್ಮನ್ನು ಕೈ ಬಿಡಬೇಡಿ ಎಂದರು. ಕಾರ್ಯಕರ್ತರು ಸಹ ಭಾವನಾತ್ಮಕ ಮಾತು ಆಡಿದ್ದಾರೆ. ಮನಸ್ಸಿನಲ್ಲಿ ಏನೆ ಇದ್ದರೂ ಸಹ. ನಾನು ಪಕ್ಷಕ್ಕಾಗಿ ಸಮಾಜಕ್ಕೆ ಒಪ್ಪಿದ್ದೇನೆ. ಪಕ್ಷ ಬೇರೆ ಯಾರಿಗೇ ಸ್ಥಳೀಯವಾಗಿ ಟಿಕೆಟ್ ಕೊಟ್ಟರೂ ನಾನು ನನ್ನ ಮಗನ ರೀತಿಯಲ್ಲೇ ಕೆಲಸ ಮಾಡುತ್ತೇನೆ ಅಂದೆ. ಆದರೆ, ನನ್ನ ಮಾತನ್ನು ಒಪ್ಪದೇ ಇದು ಸರ್ವಸಮ್ಮತ ನಿರ್ಧಾರ, ಚುನಾವಣೆ ಗೆದ್ದು ಬನ್ನಿ ಅಂದಿದ್ದಾರೆ ಎಂದರು.
ಉಪ ಚುನಾವಣೆಯ ಸವಾಲಿನ ಕುರಿತು ಕೇಳಿದ ಪ್ರಶ್ನೆಗೆ ಈ ಬೈ ಎಲೆಕ್ಷನ್ ಸವಾಲು ಕೂಡಾ ಆಗಿದೆ, ಹಿಂದೆ ಅಧಿಕಾರದಲ್ಲಿರುವಾಗ, ಪ್ರತಿಪಕ್ಷದಲ್ಲಿ ಇರುವಾಗ ಅನೇಕ ಉಪಚುನಾವಣೆ ಎದುರಿಸಿ ಅನುಭವ ಇದೆ. ಪಕ್ಷ ನನ್ನ ಭರವಸೆ ಇಟ್ಟು ಮಗನಿಗೆ ಟಿಕೆಟ್ ಕೊಟ್ಟಿದೆ. ಪಕ್ಷದ ನಿರ್ಧಾರಕ್ಕೆ ನಾನು ತಲೆಬಾಗಬೇಕಾದ ಪ್ರಸಂಗ ಬಂದಿದೆ. ಪಕ್ಷದ ಈ ನಿರ್ಧಾರದಲ್ಲಿ ಎಲ್ಲ ರಾಜಕೀಯ ಮೀರಿದೆ. ಪಕ್ಷದ ತೀರ್ಮಾನ ಒಪ್ಪಲೇಬೇಕಾಯಿತು. ಕ್ಷೇತ್ರದ ಕಾರ್ಯಕರ್ತರ ಭಾವನೆಗಳಿಗೂ ಬೆಲೆ ಕೊಡಬೇಕು. ನಾವು ಗೆಲ್ಲಬೇಕು ಅಂತ ಕಾರ್ಯಕರ್ತರು ಹೇಳಿದ್ದಾರೆ. ಚುನಾವಣೆ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದರು.
ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಗೊಂದಲದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚನ್ನಪಟ್ಟಣದಲ್ಲಿ ಗೆಲ್ಲುವ ದೃಷ್ಟಿಯಿಂದ ಎರಡೂ ಕಡೆಯೂ ಸಭೆಗಳಾಗುತ್ತಿವೆ. ಎನ್‌ಡಿಎ ಒಮ್ಮತದ ಅಭ್ಯರ್ಥಿ ಆಯ್ಕೆ ಆಗಲಿದೆ. ಚನ್ನಪಟ್ಟಣದಲ್ಲಿ ನಮ್ಮದೇ ಗೆಲುವು. ಡಿಸಿಎಂ ಡಿಕೆ ಶಿವಕುಮಾರ್ ಅವರು ಏನೇನೋ ಮಾತನಾಡುತ್ತಾರೆ, ಅದಕ್ಕೆಲ್ಲ ಉತ್ತರ ಕೊಡಲು ಆಗುವುದಿಲ್ಲ ಎಂದು ಹೇಳಿದರು.