Saturday, April 19, 2025
Google search engine

Homeರಾಜಕೀಯಸಿ. ಪಿ. ಯೋಗೇಶ್ವರ್  ಎಲ್ಲ ಮರೆತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ: ಡಿಸಿಎಂ

ಸಿ. ಪಿ. ಯೋಗೇಶ್ವರ್  ಎಲ್ಲ ಮರೆತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ: ಡಿಸಿಎಂ

ಬೆಂಗಳೂರು: ಮಾಜಿ ಸಚಿವ ಸಿ. ಪಿ. ಯೋಗೇಶ್ವರ್ ಅವರು ಎಲ್ಲ ಮರೆತು ಬೇಷರತ್ತಾಗಿ ಅವರು ರಾಜಕಾರಣ ಆರಂಭಿಸಿದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ(ಅ23) ನಡೆದ ಮಹತ್ವದ ಸುದ್ದಿಗೋಷ್ಠಿಯಲ್ಲಿ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಗೊಳಿಸಿ ಮಾತನಾಡಿದರು. ”ಯೋಗೇಶ್ವರ್ ಮೂಲತಃ ಕಾಂಗ್ರೆಸ್ ನವರು. ಈಗ ಮರಳಿ ಗೂಡಿಗೆ ಬಂದಿದ್ದಾರೆ. ಎಲ್ಲ ಪಕ್ಷಗಳನ್ನೂ ನೋಡಿದ್ದಾರೆ. ಪಕ್ಷೇತರರಾಗಿಯೂ ಗೆದ್ದಿದ್ದಾರೆ. ಜೆಡಿಎಸ್ ಜತೆ ಸಂಬಂಧ ಹೊಂದಿ ಬಿಜೆಪಿ ಅಭ್ಯರ್ಥಿ ಗೆಲ್ಲಲು ಕೆಲಸ ಮಾಡಿದವರು. ಕರ್ನಾಟಕ ಸರಕಾರ ಸಮೃದ್ಧವಾಗಿದೆ. ಚನ್ನಪಟ್ಟಣಕ್ಕೆ ಯೋಗೇಶ್ವರ್ ಹೊಸ ಶಕ್ತಿ ತುಂಬಲಿದ್ದಾರೆ. ಕೆಪಿಸಿಸಿ ಅಧ್ಯಕ್ಷನಾಗಿ ನಾನು, ಡಿ.ಕೆ.ಸುರೇಶ್ ಸೇರಿ ಎಲ್ಲರೂ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ” ಎಂದು ಹೇಳಿದರು.

ಚನ್ನಪಟ್ಟಣದಲ್ಲಿ ಜೆಡಿಎಸ್ ಮತ್ತು ಬಿಜೆಪಿಯನ್ನು ತೊರೆದು ಇನ್ನೂ ಅನೇಕರು ಪಕ್ಷಕ್ಕೆ ಸೇರಲಿದ್ದಾರೆ. ಅವರೆಲ್ಲರನ್ನೂ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಬೇಕು ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.

ಯೋಗೇಶ್ವರ್ ಮಾತನಾಡಿ” ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೇರ್ಪಡೆಗೊಳಿಸಲು ಕಾರಣರಾದವರು ಡಿ.ಕೆ.ಸುರೇಶ್ ಅವರು ಎಂದರು. ಕಳೆದ ಹಲವಾರು ದಿನಗಳ ರಾಜಕೀಯ ಬೆಳವಣಿಗೆ , ಬಿಜೆಪಿ -ಜೆಡಿಎಸ್ ಸೇರಿಕೊಂಡ ಮೇಲೆ ನನ್ನ ರಾಜಕೀಯ ಬೆಳವಣಿಗೆಗೆ ಪೂರಕವಾದ ವಾತಾವರಣ ಇಲ್ಲ ಎಂದು ಮನಗಂಡು ಯಾವುದೇ ಷರತ್ತುಗಳಿಲ್ಲದೆ ಕಾಂಗ್ರೆಸ್ ಸೇರಿದ್ದೇನೆ. ನನ್ನ ವಿಚಾರಗಳನ್ನೆಲ್ಲ ಹೇಳಿ, ಡಿ.ಕೆ.ಶಿವಕುಮಾರ್ ಅವರ ಬಳಿ ಹೇಳಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತನಾಡಿ ಪಕ್ಷ ಸೇರಿದ್ದೇನೆ. ಕಾಂಗ್ರೆಸ್ ಸರಕಾರ ಕೈಗೊಳ್ಳುತ್ತಿರುವ ಅಭಿವೃದ್ಧಿ ಕೆಲಸ ಮುಂದುವರಿಸಲು ನಾನು ಪಕ್ಷಕ್ಕೆ ಸೇರುತ್ತಿದ್ದೇನೆ. ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು, ಕಾಂಗ್ರೆಸ್ ಸರಕಾರ ಬಲಪಡಿಸಲು ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ’ ಎಂದರು.

ಮಾಜಿ ಸಚಿವ, ಬಿಜೆಪಿ ಮುಖಂಡ ಸಿಪಿ ಯೋಗೇಶ್ವರ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಾಜಿ ಸಂಸದ ಡಿಕೆ ಸುರೇಶ್ ಅವರೊಂದಿಗೆ ಇಂದು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಸಚಿವ ಜಮೀರ್ ಅಹಮದ್ ಖಾನ್, ಶಿವರಾಜ್ ತಂಗಡಗಿ, ಶಾಸಕ ಕದಲೂರು ಉದಯಗೌಡ, ಪೊನ್ನಣ್ಣ, ಯತೀಂದ್ರ ಸಿದ್ದರಾಮಯ್ಯ ಈ ವೇಳೆ ಇದ್ದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ನಾಯಕ , ಸಚಿವ ರಾಮಲಿಂಗಾ ರೆಡ್ಡಿ ಸೇರಿ ಹಲವು ಶಾಸಕರು ಹಾಜರಿದ್ದರು.

RELATED ARTICLES
- Advertisment -
Google search engine

Most Popular